Advertisement

ವ್ಯೂಹಾತ್ಮಕ ಭಾಗೀದಾರಿಕೆ ವೃದ್ಧಿಗೆ ಭಾರತ-ಈಜಿಪ್ಟ್ ಒಲವು

10:18 PM Jan 25, 2023 | Team Udayavani |

ಹೊಸದಿಲ್ಲಿ: ರಕ್ಷಣೆ, ಭದ್ರತೆ, ವಾಣಿಜ್ಯ ಮತ್ತು ಭಯೋತ್ಪಾದನೆಯ ವಿರುದ್ಧದ ಸಮರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಣ ವ್ಯೂಹಾತ್ಮಕ ಭಾಗೀದಾರಿಕೆಯನ್ನು ವೃದ್ಧಿಸಿಕೊಳ್ಳಲು ಭಾರತ ಮತ್ತು ಈಜಿಪ್ಟ್ ಇಂಗಿತ ವ್ಯಕ್ತಪಡಿಸಿವೆ.

Advertisement

ಬುಧವಾರ ಈಜಿಪ್ಟ್ ಅಧ್ಯಕ್ಷ ಅಬ್ಧೆಲ್‌ ಪತ್ತಾಹ್‌ ಜತೆಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯು ಮಾನವೀ ಯತೆಗೆ ಗಂಭೀರ ಅಪಾಯವಾಗಿದ್ದು, ಇದನ್ನು ಕಿತ್ತೂಗೆಯಬೇಕಿದೆ. ಗಡಿಯಾಚೆಗಿನ ಭಯೋ ತ್ಪಾದನೆಯನ್ನು ದಮನಗೊಳಿಸಲು ಸಮಗ್ರಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಉಭಯ ದೇಶಗಳು ಒಮ್ಮತದ ನಿರ್ಧಾರಕ್ಕೆ ಬಂದಿವೆ ಎಂದು ತಿಳಿಸಿದರು.

ವ್ಯೂಹಾತ್ಮಕ ಭಾಗೀದಾರಿಕೆಗೆ ಸಂಬಂಧಿಸಿ ರಾಜಕೀಯ, ಭದ್ರತೆ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ದೀರ್ಘ‌ಕಾಲೀನ ಮತ್ತು ಸಮಗ್ರವಾದ ನೀಲನಕಾಶೆ ರೂಪಿಸಲು ನಿರ್ಧರಿಸಿವೆ. ರಕ್ಷಣ ಕೈಗಾರಿಕೆಯಲ್ಲಿನ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲು ತೀರ್ಮಾನಿಸಿದ್ದು, ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆಗಳ ಬಗೆಗಿನ ಮಾಹಿತಿ ಮತ್ತು ಗುಪ್ತಚರ ವರದಿಗಳನ್ನು ವಿನಿಮಯ ಮಾಡಿಕೊಳ್ಳಲು ಕೂಡ ಸಮ್ಮತಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಈಜಿಪ್ಟ್ ಅಧ್ಯಕ್ಷ ಅಬ್ಧೆಲ್‌ ಫ‌ತ್ತಾಹ್‌ ಎಲ್‌-ಸಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಮಾತುಕತೆ ಫ‌ಲಪ್ರದ ವಾಗಿದ್ದು, ಉಭಯ ದೇಶಗಳ ನಡುವಣ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಎಂದರು. ಭಯೋತ್ಪಾದನೆಯ ದಮನಕ್ಕೆ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದ ಅವರು, ಈ ವಿಷಯದಲ್ಲಿ ಭಾರತ ಮತ್ತು ಈಜಿಪ್ಟ್ ನ ನಿಲುವು ಒಂದೇ ಆಗಿದೆ ಎಂದರು.

ಅರಬ್‌ ಮತ್ತು ಆಫ್ರಿಕಾದಲ್ಲಿ ರಾಜಕೀಯವಾಗಿ ಅತ್ಯಂತ ಪ್ರಬಲ ರಾಷ್ಟ್ರವಾಗಿರುವ ಈಜಿಪ್ಟ್ ಜತೆಗಿನ ಸಂಬಂಧವನ್ನು ಮತ್ತಷ್ಟು ಸುಧಾರಿಸಲು ಭಾರತ ಉತ್ಸುಕವಾಗಿದೆ. ಆಫ್ರಿಕಾ ಮತ್ತು ಯುರೋಪ್‌ ಮಾರುಕಟ್ಟೆಗೆ ರಹದಾರಿಯಂತಿರುವ ಈಜಿಪ್ಟ್ ಅನ್ನು ಬಳಸಿಕೊಂಡು ಆ ದೇಶಗಳಲ್ಲಿ ತನ್ನ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳುವ ಯೋಜನೆ ಭಾರತದ್ದಾಗಿದೆ. ಭಾರತದ 74ನೇ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಮಂಗಳವಾರ ಸಂಜೆ ಹೊಸದಿಲ್ಲಿಯಲ್ಲಿ ಬಂದಿಳಿದ ಈಜಿಪ್ಟ್ ನ ಅಧ್ಯಕ್ಷ ಅಬ್ಧೆಲ್‌ ಫ‌ತ್ತಾಹ್‌ ಎಲ್‌-ಸಿಸಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿ, ಬರಮಾಡಿಕೊಂಡಿದ್ದರು.

Advertisement

ಮಹತ್ತರ ಒಪ್ಪಂದಗಳಿಗೆ ಅಂಕಿತ
ಇದೇ ವೇಳೆ ಉಭಯ ರಾಷ್ಟ್ರಗಳು ಸಂಸ್ಕೃತಿ, ಐಟಿ, ಸೈಬರ್‌ ಸುರಕ್ಷೆ, ಯುವ ವ್ಯವಹಾರ ಮತ್ತು ಪ್ರಸಾರ ಈ ಐದು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವಿಸ್ತರಿಸುವ ಒಪ್ಪಂದಗಳಿಗೆ ಅಂಕಿತ ಹಾಕಿದವು. ಮುಂದಿನ ಐದು ವರ್ಷಗಳ ಅವಧಿಯಲ್ಲಿ 12 ಶತಕೋಟಿ ಡಾಲರ್‌ಗಳಷ್ಟು ದ್ವಿಪಕ್ಷೀಯ ವ್ಯವಹಾರ ನಡೆಸಲು ಎರಡೂ ರಾಷ್ಟ್ರಗಳು ಸಮ್ಮತಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next