Advertisement

“ವಿಜ್ಞಾನದಲ್ಲಿ ನಂ.1 ಆದಾಗ ಭಾರತ ಅಭಿವೃದ್ಧಿ’

09:59 AM Sep 20, 2017 | Team Udayavani |

ಬೆಳ್ತಂಗಡಿ: ವಿಜ್ಞಾನ ಕ್ಷೇತ್ರದಲ್ಲಿ ಭಾರತ ನಂ.1 ಆದಾಗಲೇ ಭಾರತ ಜಗತ್ತಿನಲ್ಲಿ ನಂ.1 ಆಗುವುದು. ಕೇವಲ ಆರ್ಥಿಕ ಶಕ್ತಿ, ವಾಣಿಜ್ಯ ಹಾಗೂ ಸೇನಾಬಲ ವೃದ್ಧಿಯಿಂದ ಭಾರತ ನಂ.1 ಆಗುವುದಿಲ್ಲ ಎಂದು ಭಾರತರತ್ನ ಪುರಸ್ಕೃತ, ವಿಜ್ಞಾನಿ ಪ್ರೊ. ಸಿ.ಎನ್‌. ಆರ್‌. ರಾವ್‌ ಅಭಿಪ್ರಾಯಪಟ್ಟರು.

Advertisement

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರಾಜ್ಯದ ಸ್ವ-ಸಹಾಯ ಸಂಘಗಳ ಸದಸ್ಯರ 10 ಸಾವಿರ ವಿದ್ಯಾರ್ಥಿಗಳಿಗೆ 6.5 ಕೋಟಿ ರೂ. ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು ಕನ್ನಡ ಮಾಧ್ಯಮದಲ್ಲೇ ಓದಿದವ. ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಡ. ಆದರೆ ಇಂಗ್ಲಿಷ್‌ ನಿರರ್ಗಳವಾಗಿ ಅರಿತಿರಬೇಕು. ಭಾರತದಲ್ಲಿ ಸಾಧನೆ ಮಾಡಬೇಕಾದರೆ ತಾಳ್ಮೆ, ದೃಢಮನಸ್ಸು ಬೇಕು. ಇದಿಲ್ಲದವರು ವಿದೇಶ ವಿಮಾನ ಏರು ತ್ತಾರೆ ಎಂದು ಹೇಳಿದರು.

ಭಾರತದಲ್ಲಿ ಸೋಮಾರಿಗಳಿದ್ದಷ್ಟು ಇನ್ನೆಲ್ಲೂ ಇಲ್ಲ. ಇಲ್ಲಿನ ಪ್ರೊಫೆಸರ್‌ಗಳು ದಿನಕ್ಕೆ 4-5 ತಾಸು ದುಡಿದರೆ ಹೆಚ್ಚು!. ಇನ್ನೊಬ್ಬರ ಉನ್ನತಿಗೆ ಮತ್ಸರ ಪಡುವವರ ಸಂಖ್ಯೆ ಇಲ್ಲಿ ದೊಡ್ಡದಿದೆ. ಹಾಗಾಗಿ ವಿವೇಕಾನಂದರು ಅಸೂಯೆ ಸ್ವಾರ್ಥ ಹೆಚ್ಚಿದ ದೇಶದ ಜನ ಮುಂದೆ ಬರುವುದಿಲ್ಲ ಎಂದಿದ್ದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ವಿಜ್ಞಾನ ಮತ್ತು ಧರ್ಮ ಪರಸ್ಪರ ಪೂರಕವಾಗಬೇಕು. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಾವು ಮಾನ ವೀಯತೆಯನ್ನು ಕಳೆದುಕೊಳ್ಳಬಾರದು. ವಿದ್ಯಾ ವಂತರು ಮಾನವೀಯತೆ ಹಾಗೂ ಹೃದಯ ಶ್ರೀಮಂತಿಕೆಯೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪೋಷಕರ ಮತ್ತು ಸ್ನೇಹಿತರ ಒತ್ತಡಕ್ಕಾಗಿ ಅಧ್ಯಯನದ ವಿಷಯ ಆಯ್ಕೆ ಮಾಡದೇ ತಮ್ಮ ಆಸಕ್ತಿಯ ವಿಷಯ ಆಯ್ಕೆ ಮಾಡಿದರೆ ಸಾಧನೆ ಮಾಡಬಹುದು. ಎಂದರು.

ಹೇಮಾವತಿ ವಿ. ಹೆಗ್ಗಡೆ, ರಾವ್‌ ಅವರ ಪತ್ನಿ ಇಂದುಮತಿ ರಾವ್‌, ಪುತ್ರ ಸಂಜಯ ರಾವ್‌, ಎಸ್‌ ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್‌. ಪ್ರಭಾಕರ್‌, ಯೋಜನೆಯ ಟ್ರಸ್ಟಿ ಎಸ್‌.ಡಿ. ಸಂಪತ್‌ ಸಾಮ್ರಾಜ್ಯ ಶಿರ್ತಾಡಿ, ಹಣಕಾಸು ನಿರ್ದೇಶಕ ಶಾಂತಾರಾಮ ಪೈ ಉಪಸ್ಥಿತರಿದ್ದರು. ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌. ಎಚ್‌. ಮಂಜುನಾಥ್‌, ಈ ವರ್ಷ ಹತ್ತು ಸಾವಿರ ವಿದ್ಯಾರ್ಥಿಗಳಿಗೆ 6.50ಕೋಟಿ ರೂ. ಸುಜ್ಞಾನ ನಿಧಿ ಶಿಷ್ಯವೇತನ, ಕಳೆದ ಹತ್ತು ವರ್ಷಗಳಲ್ಲಿ 25,210 ವಿದ್ಯಾರ್ಥಿ ಗಳಿಗೆ 30 ಕೋಟಿ ರೂ. ನೀಡಲಾಗಿದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next