ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಸ್ಥಳೀಯ ಚುನಾವಣೆ ನಡೆಸಬೇಕು. ಈ ಬಗ್ಗೆ 2018ರ ಆದೇಶಕ್ಕೆ ತಿದ್ದುಪಡಿ ತರಬೇಕು ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಪ್ರಬಲ ಆಕ್ಷೇಪ ಮಾಡಿದೆ.
ಪಾಕಿಸ್ತಾನ ಬಲವಂತವಾಗಿ ಆತಿಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಮಾಡುತ್ತಿರುವ ಬದಲಾವಣೆ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟವಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.
ನವ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಿಸಿಕೊಂಡು ಭಾರತದ ವತಿಯಿಂದ ಕಟು ಶಬ್ದಗಳ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ.
‘ಗಿಲ್ಗಿಟ್ – ಬಾಲ್ಟಿಸ್ತಾನ, ಲಡಾಖ್, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹಲವು ಬಾರಿ ತಿಳಿಯಪಡಿಸಲಾಗಿದೆ. ಈ ಬಗ್ಗೆ 1994ರಲ್ಲಿ ಭಾರತೀಯ ಸಂಸತ್ತು ಸರ್ವಾನುಮತದಿಂದ ಅಂಗೀಕಾರ ಮಾಡಿದೆ. ಹೀಗಾಗಿ ಆಕ್ರಮಣಗೊಂಡಿರುವ ಪ್ರಾಂತ್ಯಗಳಲ್ಲಿ ಹಕ್ಕು ಚಲಾಯಿಸಲು ಪಾಕಿಸ್ತಾನದ ಸರ್ಕಾರಕ್ಕಾಗಲೀ, ಅಲ್ಲಿನ ನ್ಯಾಯಾಂಗಕ್ಕಾಗಲೀ ಅವಕಾಶವಿಲ್ಲ.
ಸದ್ಯ ಉಂಟಾಗಿರುವ ಬೆಳವಣಿಗೆಯನ್ನು ಕೇಂದ್ರ ಸರ್ಕಾರ ಖಂಡಿಸುತ್ತಿದೆ. ಅತಿಕ್ರಮಿಸಿರುವ ಪ್ರದೇಶಗಳಿಂದ ಪಾಕಿಸ್ತಾನ ಕೂಡಲೇ ಕಾಲ್ತೆಗೆಯಬೇಕು ಎಂದು ಆಗ್ರಹಿಸುತ್ತೇವೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
– ಅತಿಕ್ರಮಿಸಿರುವ ಪ್ರದೇಶಗಳಲ್ಲೇಕೆ ಬದಲಾವಣೆ?
– ಪಾಕ್ ಹೈಕಮಿಷನ್ ಅಧಿಕಾರಿ ಕರೆಯಿಸಿಕೊಂಡು ತರಾಟೆ
– ಗಿಲ್ಗಿಟ್ – ಬಾಲ್ಟಿಸ್ತಾನ್ ಭಾರತದ ಅವಿಭಾಜ್ಯ ಅಂಗ
– ಹಕ್ಕು ಚಲಾಯಿಸಲು ಪಾಕಿಸ್ತಾನ ಸರ್ಕಾರ, ನ್ಯಾಯಾಂಗಕ್ಕೆ ಅವಕಾಶವಿಲ್ಲ