ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆದ್ದ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟೇಬಲ್ ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಅಂತಿಮ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 64 ರನ್ ಅಂತರದಿಂದ ಗೆದ್ದ ಭಾರತವು ಟೆಸ್ಟ್ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆದ್ದ ಬಳಿಕ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಧರ್ಮಶಾಲಾ ಪಂದ್ಯದ ಬಳಿಕ ಭಾರತವು 68.51 ಶೇಕಡಾವಾರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಗಟ್ಟಿಯಾಗಿದೆ.
ಭಾರತವು ಈ ಡಬ್ಲ್ಯೂಟಿಸಿ ಸೈಕಲ್ ನಲ್ಲಿ ಒಂಬತ್ತು ಪಂದ್ಯಗಳನ್ನಾಡಿದ್ದು, ಆರು ಪಂದ್ಯಗಳನ್ನು ಗೆದ್ದುಕೊಂಡಿದೆ. ಎರಡು ಪಂದ್ಯಗಳಲ್ಲಿ ಸೋತಿದ್ದು, ಒಂದು ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ.
60 ಶೇಕಡಾವಾರು ಅಂಕಗಳೊಂದಿಗೆ ನ್ಯೂಜಿಲ್ಯಾಂಡ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 59.09 ಶೇಕಡಾವಾರು ಅಂಕಗಳೊಂದಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
ಸರಣಿ ಸೋತ ಇಂಗ್ಲೆಂಡ್ ತಂಡವು ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 10 ಪಂದ್ಯವಾಡಿರುವ ಇಂಗ್ಲೆಂಡ್ ಕೇವಲ ಮೂರರಲ್ಲಿ ಗೆದ್ದುಕೊಂಡಿದೆ. ಆರು ಪಂದ್ಯಗಳನ್ನು ಸೋತಿರುವ ಇಂಗ್ಲೆಂಡ್ ಕೇವಲ 17.5 ಶೇಕಡಾವಾರು ಪಾಯಿಂಟ್ ಹೊಂದಿದೆ. ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ಶ್ರೀಲಂಕಾ 9ನೇ ಅಂದರೆ ಕೊನೆಯ ಸ್ಥಾನದಲ್ಲಿದೆ.