Advertisement

ಗುರುದ್ವಾರ ಧ್ವಂಸದ ಬೆದರಿಕೆಯೊಡ್ಡಿದ ಪಾಕಿಸ್ತಾನಿಯರು

10:36 AM Jan 05, 2020 | Hari Prasad |

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ನನ್‌ಕಾನಾ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ ಸಿಖ್‌ ಸಮುದಾಯದವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಪ್ರದೇಶದಲ್ಲಿರುವ ಸ್ಥಳೀಯ ಮುಸ್ಲಿಮರು ಈ ಕೃತ್ಯವನ್ನೆಸಗಿದ್ದಾರೆ. ಇದರಿಂದಾಗಿ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಲವಾರು ಮಂದಿ ತೊಂದರೆಗೆ ಒಳಗಾಗಿದ್ದಾರೆ.

Advertisement

ಸಿಖ್‌ ಸಮುದಾಯದ ಯುವತಿಯನ್ನು ಅಪಹರಿಸಿ, ಮತಾಂತರ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮೊಹಮ್ಮದ್‌ ಹಸನ್‌ ಎಂಬಾತನ ಕುಟುಂಬ ಸದಸ್ಯರು ಮತ್ತು ಇತರ ನೂರಾರು ಮಂದಿ ಗುರುದ್ವಾರವನ್ನು ಸುತ್ತುವರಿದು, ಅದನ್ನು ನಾಶಗೊಳಿಸುವುದಾಗಿ ಅಬ್ಬರಿಸಿದ್ದಾರೆ. ಘಟನಾ ಸ್ಥಳದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿರುವ ದೃಶ್ಯಾವಳಿಗಳ ಪ್ರಕಾರ, ಸ್ಥಳೀಯರಿಗೆ ಗುರುದ್ವಾರ ಅಲ್ಲಿ ಇರುವುದು ಬೇಡವಾಗಿದೆ.

ಅದನ್ನು ಧ್ವಂಸಗೊಳಿಸಬೇಕಾಗಿದೆ ಎಂದು ಹೇಳುವ ಅಂಶ ಇದೆ. ನನ್‌ಕಾನಾ ಸಾಹಿಬ್‌ ಎಂಬ ಹೆಸರನ್ನು ಸದ್ಯದಲ್ಲೇ ನಾವು ಗುಲಮಾನ್‌-ಇ-ಮುಸ್ತಫಾ ಎಂದು ಬದಲಿಸುವುದಾಗಿಯೂ ಅಲ್ಲಿರುವವರು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಘಟನೆಗೆ ಪ್ರತಿಕ್ರಿಯಿಸಿರುವ ಪಂಜಾಬ್‌ ಸಿಎಂ ಕ್ಯಾ.ಅಮರೀಂದರ್‌ ಸಿಂಗ್‌, “ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು.
ನನ್‌ಕಾನಾ ಸಾಹಿಬ್‌ನಲ್ಲಿರುವ ಭಕ್ತಾದಿಗಳನ್ನು ರಕ್ಷಿಸಬೇಕು ಮತ್ತು ಆಕ್ರೋಶಭರಿತ ಜನರಿಂದ ಗುರುದ್ವಾರಕ್ಕೆ ಯಾವುದೇ ಹಾನಿ ಆಗದಂತೆ ತಡೆಯಬೇಕು’ ಎಂದು ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next