ಮಹಾನಗರ: ತೆರಿಗೆ ಇಲ್ಲದ ಆಡಳಿತ ಕೊಡುತ್ತೇವೆ ಎಂದು ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಿ.ಎಸ್.ಟಿ. ಜಾರಿಗೊಳಿಸಿದ್ದೇಕೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಪ್ರಶ್ನಿಸಿದ್ದಾರೆ.
ಕೇಂದ್ರ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಸ್ಟ್ ಪಕ್ಷವು ಸೆ. 15ರಿಂದ ಅ. 15ರ ತನಕ ಹಮ್ಮಿಕೊಂಡಿರುವ ರಾಷ್ಟ್ರೀಯ ಜನಾಂದೋಲನದ ಭಾಗವಾಗಿ ಅ. 9ರಿಂದ 12ರ ತನಕ ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ವತಿಯಿಂದ ಪುತ್ತೂರಿನ ಕಡಬದಿಂದ ಮಂಗಳೂರಿನವರೆಗೆ ನಡೆದ ವಾಹನ ಜಾಥಾ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿದೇಶದಿಂದ ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಖಾತೆಗೆ 15 ಲಕ್ಷ ರೂ. ಹಣ ಜಮಾ ಮಾಡುತ್ತೇವೆ ಹಾಗೂ ಉಳಿದ ಹಣವನ್ನು ತೆರಿಗೆಯ ರೂಪದಲ್ಲಿ ಬೊಕ್ಕಸಕ್ಕೆ ತುಂಬಿಸಿ ಜನರಿಗೆ ತೆರಿಗೆಯ ಹೊರೆಯನ್ನು ಕಡಿಮೆ ಮಾಡುವುದಾಗಿ ನೀಡಿದ ಭರವಸೆ ಈಡೇರಿಲ್ಲ. ಬೆಲೆ ಏರಿಕೆಯನ್ನು ತಡೆಗಟ್ಟುವುದಾಗಿ ಕೊಟ್ಟ ಆಶ್ವಾಸನೆ ಹಾಗೆಯೇ ಉಳಿದಿದೆ. ಈ ಹಿಂದಿನ ಯುಪಿಎ ಸರಕಾರದ ಅಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವುದಾಗಿ ನೀಡಿದ ಭರವಸೆ ಈಡೇರಿಲ್ಲ. ಕಾರ್ಪೊರೇಟ್ ಸಂಸ್ಥೆಗಳ ಭ್ರಷ್ಟಾಚಾರದ ತನಿಖೆ ನಡೆಸಿಲ್ಲ. ಭ್ರಷ್ಟಾಚಾರವನ್ನು ನಿಯಂತ್ರಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸರಕಾರ ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದವರು ಆರೋಪಿಸಿದರು.
ಸಿಪಿಐ ನಾಯಕ ಸೀತಾರಾಮ ಬೇರಿಂಜ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೇಂದ್ರ ಸರಕಾರವು ತನ್ನ ವೈಫಲ್ಯಗಳನ್ನು ಮರೆಮಾಚಲು ಬಣ್ಣದ ಮಾತುಗಳನ್ನು ಆಡುತ್ತಿದೆ ಎಂದವರು ಟೀಕಿಸಿದರು.
ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ವಂದಿಸಿದರು. ಪಕ್ಷದ ನಾಯಕರಾದ ಎ. ಪ್ರಭಾಕರ ರಾವ್, ಬಿ. ಶೇಖರ್, ಎಂ. ಕರುಣಾಕರ, ಸುರೇಶ್ ಕುಮಾರ್, ಎಚ್.ವಿ. ರಾವ್, ಚಿತ್ರಾಕ್ಷಿ, ವನಜಾಕ್ಷಿ, ರಾಮಣ್ಣ ರೈ, ರಮೇಶ್ ಮುಂತಾದವರು ಉಪಸ್ಥಿತರಿದ್ದರು.