ನವದೆಹಲಿ:ಲಡಾಖ್ ನ ಗಡಿ ಪ್ರದೇಶದ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಸೇನಾಧಿಕಾರಿಗಳ ನಡುವೆ 9ನೇ ಸುತ್ತಿನ ಮಾತುಕತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸಿಕ್ಕಿಂನ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಉಭಯ ಸೇನೆಗಳ ನಡುವೆ ಘರ್ಷಣೆ ನಡೆದ ಪರಿಣಾಮ ನಾಲ್ವರು ಭಾರತೀಯ ಸೈನಿಕರು, 20 ಮಂದಿ ಚೀನಿ ಸೈನಿಕರು ಗಾಯಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ವರದಿಯ ಪ್ರಕಾರ, ಸಿಕ್ಕಿಂನ ನಾಕು ಲಾ ಪ್ರದೇಶದಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಮುಂದಾಗಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸೈನಿಕರ ಯತ್ನವನ್ನು ಭಾರತೀಯ ಸೈನಿಕರು ವಿಫಲಗೊಳಿಸಿರುವುದಾಗಿ ವಿವರಿಸಿದೆ.
ಭಾನುವಾರ ಪೂರ್ವ ಲಡಾಖ್ ಗಡಿ ಪ್ರದೇಶದಲ್ಲಿನ ಸೇನೆಯನ್ನು ವಾಪಸ್ ಪಡೆಯುವ ಕುರಿತು ಭಾರತ ಮತ್ತು ಚೀನಾ ಸೇನಾಧಿಕಾರಿಗಳು ಬರೋಬ್ಬರಿ 16 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.
ಪೂರ್ವ ಲಡಾಖ್ ನ ಪರ್ವತ ಶ್ರೇಣಿ ಹಾಗೂ ಆಯ್ದ ನೆಲೆಗಳಲ್ಲಿ ಚೀನಾ ತನ್ನ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಿ ಎಂದು ಮಾತುಕತೆ ವೇಳೆ ಭಾರತೀಯ ಸೇನಾಧಿಕಾರಿಗಳು ಸಲಹೆ ನೀಡಿರುವುದಾಗಿ ತಿಳಿಸಿದೆ.
ಪರ್ವತ ಶ್ರೇಣಿ ಹಾಗೂ ಆಯ್ದ ಪ್ರದೇಶಗಳಲ್ಲಿನ ಸೇನೆಯನ್ನು ಹಿಂಪಡೆಯುವ ಸಲಹೆ ಒಪ್ಪಿತವಾದಲ್ಲಿ ಭಾರತ ಕೂಡಾ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿರುವುದಾಗಿ ವರದಿ ತಿಳಿಸಿದೆ.