ಬೀಜಿಂಗ್ : ಭಾರತ ಮತ್ತು ಚೀನ ತಮ್ಮೊಳಗಿನ ಯಾವತ್ತೂ ಗಡಿ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಂಡು ಉಭಯತರಿಗೆ ಲಾಭದಾಯಕವಾಗುವ ರೀತಿಯಲ್ಲಿ ಜತೆಗೂಡಿ ಕೆಲಸ ಮಾಡುವ ಪ್ರಬುದ್ಧತೆಯನ್ನು ಹೊಂದಿವೆ ಎಂದು ಚೀನದ ವಿದೇಶ ಸಚಿವಾಲಯ ಹೇಳಿದೆ.
ವುಹಾನ್‌ನಲ್ಲಿ ಈಚೆಗೆ ನಡೆದ ಅನೌಪಚಾರಿಕ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ವಿಶಾಲ ನೆಲೆಯಲ್ಲಿ ಒಮ್ಮತವನ್ನು ಕಂಡುಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ಇಂದು ಸೋಮವಾರ ಬಿಡುಗಡೆ ಮಾಡಲಾಗಿರುವ ಅಧಿಕೃತ ಹೇಳಿಕೆಯಲ್ಲಿ ಚೀನದ ವಿದೇಶ ಸಚಿವಾಲಯ ಪ್ರಶಂಸೆ ವ್ಯಕ್ತಪಡಿಸಿದೆ.
ಚೀನ ವಿದೇಶ ಸಚಿವಾಲಯ ಇಂದು ಬಿಡುಗಡೆ ಮಾಡಿರುವ ಈ ಅಧಿಕೃತ ಹೇಳಿಕೆಯು ಸರಕಾರಿ ಒಡೆತನದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯ ತದ್ರೂಪಿಯಾಗಿದೆ.
ಉಭಯ ದೇಶಗಳ ನಾಯಕರು ಅನೇಕ ಸ್ತರಗಳಲ್ಲಿ ವ್ಯೂಹಾತ್ಮಕ ಸಂಪರ್ಕ-ಸಂವಹನವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಮತ್ತು ಉಭಯ ದೇಶಗಳ ನಡುವಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಪ್ರಬುದ್ಧತೆಯನ್ನು ತೋರಿದ್ದಾರೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಡೋಕ್ಲಾಂ ಮುಖಾಮುಖೀಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವಿನ ಈ ಅನೌಪಚಾರಿಕ ಶೃಂಗವು ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟನನ್ನು ಶಾಂತಿಯುತವಾಗಿ ಪರಿಹರಿಸುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಈ ಬಹುಮುಖ್ಯ ಗುರಿಯನ್ನು ಸಾಧಿಸುವಲ್ಲಿ ಶೃಂಗವು ಸಫಲವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.