Advertisement
1967ರಲ್ಲಿ ಚೀನಾ ಸೇನಾಪಡೆ ಭಾರತೀಯ ಯೋಧರ ಜತೆ ಸಂಘರ್ಷಕ್ಕಿಳಿಯುವ ಎರಡು ವರ್ಷದ ಮೊದಲು ಹೊರಿಸಿದ್ದ ಆರೋಪ ಏನು ಗೊತ್ತಾ…ಭಾರತೀಯ ಸೈನಿಕರು ನಮ್ಮ ಕುರಿ ಮತ್ತು ಯಾಕ್ (ಚಮರೀಮೃಗ)ಗಳನ್ನು ಅಪಹರಿಸಿದ್ದಾರೆ ಎಂಬುದಾಗಿತ್ತು. ಚೀನಾ ಈ ಆರೋಪ ಹೊರಿಸಿದ್ದು 1965ರಲ್ಲಿ!
Related Articles
1965ರಲ್ಲಿ ಚೀನಾ ಭಾರತ ಸರ್ಕಾರಕ್ಕೆ ಬರೆದ ಪತ್ರದಲ್ಲಿ: ಭಾರತೀಯ ಸೈನಿಕರು 800 ಕುರಿ ಹಾಗೂ 59 ಯಾಕ್ ಗಳನ್ನು ಕದ್ದಿರುವುದಾಗಿ ಆರೋಪಿಸಿತ್ತು. ಆದರೆ ಇದಕ್ಕೆ ಭಾರತ ಸರ್ಕಾರ ಕೂಡಾ, ಇಂತಹ ಹಾಸ್ಯಾಸ್ಪದ ಆರೋಪವನ್ನು ತಳ್ಳಿಹಾಕಿ ಪ್ರತ್ಯುತ್ತರ ನೀಡಿತ್ತು. ಮತ್ತೊಂದೆಡೆ ಅಂದಿನ ಜನಸಂಘದ ಯುವ ಮುಖಂಡ 42ರ ಹರೆಯದ ವಾಜಪೇಯಿ ಮಾತ್ರ ಚೀನಾ ಉರಿದುಕೊಳ್ಳುವಂತೆ ಪ್ರತಿಕ್ರಿಯೆ/ಪ್ರತಿಭಟನೆ ವ್ಯಕ್ತಪಡಿಸಿದ್ದರು!
Advertisement
ಅಂದು ವಾಜಪೇಯಿ ಮಾಡಿದ್ದೇನು?ಭಾರತೀಯ ಯೋಧರು ಕುರಿಗಳನ್ನು ಕದ್ದಿದ್ದಾರೆಂಬ ಚೀನಾ ಆರೋಪಕ್ಕೆ ಪಾಠ ಕಲಿಸಲು ಮುಂದಾಗಿದ್ದ ಅಟಲ್ ಬಿಹಾರಿ ವಾಜಪೇಯಿ 800 ಕುರಿಗಳ ಸಮೂಹದ ಜತೆಗೆ ನೇರವಾಗಿ ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಆವರಣದೊಳಕ್ಕೆ ನುಗ್ಗಿಸಿಬಿಟ್ಟಿದ್ದರು! ಅಷ್ಟೇ ಅಲ್ಲ ಕುರಿಗಳ ಕುತ್ತಿಗೆಯಲ್ಲಿ ಪ್ಲೇ ಕಾರ್ಡ್ ಅನ್ನು
ನೇತುಹಾಕಿದ್ದರು…ಅದರಲ್ಲಿ “ನನ್ನ ತಿನ್ನಿ ಆದರೆ ಈ ಜಗತ್ತನ್ನು ಉಳಿಸಿ” ಎಂದು ಬರೆಯಲಾಗಿತ್ತು! ಅಟಲ್ ಬಿಹಾರಿ ಅವರ ಈ ತಿರುಗೇಟು ಬಹು ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ ವಾಜಪೇಯಿ ಅವರ ತಿರುಗೇಟಿನಿಂದ ಚೀನಾ ಖುದ್ದು ಹೋಗಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದು, ವಾಜಪೇಯಿ ನಡೆಸಿರುವ ಪ್ರತಿಭಟನೆ ಮೂಲಕ ಚೀನಾ ದೇಶವನ್ನು ಅವಮಾನ ಮಾಡಿದ್ದಾರೆ. ಈ ಘಟನೆ ನಡೆಯಲು ಶಾಸ್ತ್ರಿ ಸರ್ಕಾರ ಕುಮ್ಮಕ್ಕು ನೀಡಿರುವುದಾಗಿ ಆರೋಪಿಸಿತ್ತು. ಚೀನಾದ ಪತ್ರಕ್ಕೆ ಭಾರತ ಕೂಡಾ ಅಷ್ಟೇ ಖಡಕ್ ಪ್ರತಿಕ್ರಿಯೆ ನೀಡಿತ್ತು…ದೆಹಲಿಯ ಕೆಲವು ನಾಗರಿಕರು ಸುಮಾರು 800 ಕುರಿಗಳೊಂದಿಗೆ ಮೆರವಣಿಗೆ ನಡೆಸಿದ್ದರು. ಆದರೆ ಈ ಮೆರವಣಿಗೆ ವಿರುದ್ಧ ಭಾರತ ಸರ್ಕಾರ ಏನೂ ಮಾಡುವಂತಿರಲಿಲ್ಲ. ಯಾಕೆಂದರೆ ಭಾರತದ ವಿರುದ್ಧ ಚೀನಾ ಯುದ್ಧ ನಡೆಸಲಿದೆ ಎಂಬ ಆಕ್ರೋಶದ ವಿರುದ್ಧ ದೆಹಲಿ ಜನರು ಸ್ವಯಂಪ್ರೇರಿತರಾಗಿ, ಶಾಂತಿಯುತವಾಗಿ ಹಾಗೂ ಉತ್ತಮ ರೀತಿಯಲ್ಲಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿತ್ತು! ಅಂದು ಚೀನಾವನ್ನು ಅಣಕಿಸಿ ಅಟಲ್ ಬಿಹಾರಿ ವಾಜಪೇಯಿ ಅವರು ನಡೆಸಿದ ಪ್ರತಿಭಟನೆ ಎಲ್ಲರ ಬಾಯಲ್ಲಿಯೂ ಚರ್ಚೆಯ ವಿಷಯವಾಗಿತ್ತು ಎಂದು ಲೇಖನದಲ್ಲಿ ವಿವರಿಸಿದೆ.