ನವದೆಹಲಿ: ಕಳೆದ 2 ತಿಂಗಳಿನಿಂದ ಡೋಕ್ಲಾಮ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆ ಮಧ್ಯೆ ಉಲ್ಬಣವಾಗಿ ಮುಂದುವರಿದಿದ್ದ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅಧಿಕೃತ ಮಾಧ್ಯಮ ಹೇಳಿಕೆಯನ್ನು ಟ್ವೀಟ್ ಮಾಡಿದ್ದು, ಡೋಕ್ಲಾಮ್ ಗಡಿಯಲ್ಲಿನ ಸೇನೆಯನ್ನು ವಾಪಸ್ ತೆಗೆದುಕೊಳ್ಳಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದ್ದಾರೆ.
ಡೋಕ್ಲಾಮ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ರಾಜತಾಂತ್ರಿಕವಾಗಿ ಮಾತುಕತೆ ನಡೆಸಿದ್ದವು. ಈ ಮಾತುಕತೆ ಹಿನ್ನೆಲೆಯಲ್ಲಿ ನಾವು ನಮ್ಮ ದೃಷ್ಟಿಕೋನದ ಬಗ್ಗೆ ವಿವರಿಸಿ ಹೇಳಿದ್ದೇವೆ. ಅಲ್ಲದೇ ನಮ್ಮ ಕಾಳಜಿ ಮತ್ತು ಆಸಕ್ತಿ ಬಗ್ಗೆಯೂ ಚೀನಾ ಜೊತೆ ಹಂಚಿಕೊಂಡಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ.
ವಿವಾದ ಇದ್ದಿದ್ದು ಚೀನಾ ಡೋಕ್ಲಾಮ್ ನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ರಸ್ತೆ ನಿರ್ಮಾಣವನ್ನು ಚೀನಾ ಕೈಬಿಟ್ಟಿದೆ. ಹಾಗಾಗಿ ಡೋಕ್ಲಾಮ್ ನಿಂದ ಸಂಪೂರ್ಣವಾಗಿ ಚೀನಾ ಸೇನೆ ವಾಪಸಾತಿ ಇಲ್ಲ. ಪ್ಯಾಟ್ರೋಲಿಂಗ್ ಮುಂದುವರಿಯಲಿದೆ. ಪ್ಯಾಟ್ರೋಲಿಂಗ್ ಗೆ ಭಾರತದ ವಿರೋಧ ಇಲ್ಲ. ಭಾರತದ ಸೇನೆ ಕೂಡಾ ಪ್ಯಾಂಟ್ರೋಲಿಂಗ್ ಮುಂದುವರಿಸಲಿದೆ ಎಂದು ಚೀನಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.