Advertisement

ಚೀನಕ್ಕೆ ಬಾಗಿಲು ಬಂದ್‌ ; ನಿಯಮಕ್ಕೆ ತಿದ್ದುಪಡಿ ; ಸಾಲ ಪಡೆಯುವವರಿಗೆ ವಿನಾಯಿತಿ

03:30 AM Jul 25, 2020 | Hari Prasad |

ಹೊಸದಿಲ್ಲಿ: ಚೀನದ ಹೂಡಿಕೆದಾರರಿಗೆ ಭಾರತ ಸಂಪೂರ್ಣವಾಗಿ ಬಾಗಿಲು ಮುಚ್ಚಿದೆ.

Advertisement

ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ರಾಷ್ಟ್ರಗಳ ಜತೆಗಿನ ಖರೀದಿ ನಿಯಮಗಳ ಮೇಲೆ ಸರಕಾರ ನಿಯಂತ್ರಣ ಹೇರಿದೆ.

ಈ ಸಂಬಂಧ 2017ರ ಸಾಮಾನ್ಯ ಹಣಕಾಸು ನಿಯಮಗಳಿಗೆ ತಿದ್ದುಪಡಿ ಮಾಡಿ ಚೀನದ ಆರ್ಥಿಕ ದಾಹಕ್ಕೆ ಬರೆ ಎಳೆದಿದೆ.

ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಸರಕಾರ ಈ ದಿಟ್ಟ ಹೆಜ್ಜೆ ಇಟ್ಟಿದೆ. ಅಗತ್ಯ ಸೇವೆಗಳಿಗೆ ಮಾತ್ರವೇ ಈ ತಿದ್ದುಪಡಿ ಅನ್ವಯ ವಿನಾಯಿತಿ ಸಿಗಲಿದೆ.

‘ವಿದೇಶಾಂಗ, ಗೃಹ ಸಚಿವಾಲಯಗಳಿಂದ ರಾಜಕೀಯ ಮತ್ತು ಸೆಕ್ಯುರಿಟಿ ಕ್ಲಿಯರೆನ್ಸ್‌ ಪಡೆದ ನಂತರವಷ್ಟೇ ಭಾರತದೊಂದಿಗೆ ಗಡಿ ಹಂಚಿಕೊಂಡ ರಾಷ್ಟ್ರಗಳು ಹೂಡಿಕೆಯಲ್ಲಿ ತೊಡಗಬಹುದು’ ಎಂದು ವಿತ್ತ ಇಲಾಖೆ ಸ್ಪಷ್ಟಪಡಿಸಿದೆ.

Advertisement

ಚೀನಕ್ಕೆ ಮರ್ಮಾಘಾತ: ಭಾರತದಿಂದ ಸಾಲ ಅಥವಾ ಅಭಿವೃದ್ಧಿಗೆ ನೆರವು ಪಡೆಯುವಂಥ ನೆರೆದೇಶಗಳಿಗೆ ಮಾತ್ರವೇ ನೂತನ ನಿಯಮ ವಿನಾಯಿತಿ ನೀಡಲಿದೆ. ಪ್ರಸ್ತುತ ನೆರೆರಾಷ್ಟ್ರಗಳಲ್ಲಿ ಚೀನ ಮತ್ತು ಪಾಕಿಸ್ಥಾನ ಈ ವ್ಯಾಪ್ತಿಗೆ ಒಳಪಡದೆ ಇರುವುದರಿಂದ, ಇವೆರಡೂ ಶತ್ರು ರಾಷ್ಟ್ರಗಳ ಹೂಡಿಕೆಗಳಿಗೆ ಭರ್ಜರಿ ಪೆಟ್ಟು ಬಿದ್ದಂತಾಗಿದೆ. ಅದರಲ್ಲೂ ಭಾರತದ ಮಾರುಕಟ್ಟೆಯಿಂದಲೇ ಮೇಲೆದ್ದ ಚೀನಕ್ಕೆ ಮತ್ತೆ ಕುಸಿಯುವ ಭೀತಿ ಎದುರಾಗಿದೆ.

ರಾಜ್ಯಗಳಿಗೆ ಪತ್ರ: ಚೀನಕ್ಕೆ ಕೇಂದ್ರ ಸರಕಾರ ನಿರ್ಬಂಧ ಹೇರುವುದು, ಅತ್ತ ರಾಜ್ಯ ಸರಕಾರಗಳು ಹೂಡಿಕೆಗೆ ವೇದಿಕೆ ಕಲ್ಪಿಸುವಂಥ ದ್ವಂದ್ವ ಪ್ರಸಂಗಗಳಿಗೂ ಇನ್ನು ಆಸ್ಪದವಿಲ್ಲ. ರಾಷ್ಟ್ರೀಯ ಭದ್ರತೆಗೆ ರಾಜ್ಯ ಸರ್ಕಾರಗಳ ಸಹಕಾರವನ್ನೂ ಕೇಂದ್ರ ಕೋರಿದೆ.

257 (1) ವಿಧಿ ಅನ್ವಯ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ 2017ರ ಸಾಮಾನ್ಯ ಹಣಕಾಸು ನಿಯಮಗಳ ತಿದ್ದುಪಡಿಗೆ ಬದ್ಧವಾಗಿರುವಂತೆ ಸೂಚಿಸಿ ಎಲ್ಲ ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಪತ್ರ ಬರೆದಿದೆ.
ನೆರೆರಾಷ್ಟ್ರದ ಹೂಡಿಕೆ ವಿಚಾರದಲ್ಲಿ ರಾಜ್ಯಸರಕಾರಗಳಿಗೂ ಗೃಹ ಮತ್ತು ವಿದೇಶಾಂಗ ಇಲಾಖೆಯ ಅನುಮತಿ ಕಡ್ಡಾಯ. ಈಗಾಗಲೇ ಆಹ್ವಾನಿಸಲಾದ ಟೆಂಡರ್‌ಗಳಿಗೂ ಅರ್ಹತಾ ಮೌಲ್ಯಮಾಪನ ನಡೆಸಲು ಕೇಂದ್ರ ಮುಂದಾಗಿದೆ. ಈ ಮೂಲಕ ಚೀನದ ಎಲ್ಲ ಹೂಡಿಕೆಗಳಿಗೂ ಗೇಟ್‌ಪಾಸ್‌ ಸಿಗಲಿದೆ.

ಮುಂದಿನವಾರ ಮತ್ತೆ ಸಭೆ: ಲಡಾಖ್‌ ಗಡಿಬಿಕ್ಕಟ್ಟು ಈಗ ಕಾರ್ಪ್ಸ್ ಕಮಾಂಡರ್‌ಗಳ ಮಟ್ಟದ 5ನೇ ಸಭೆಯನ್ನು ಎದುರು ನೋಡುತ್ತಿದೆ. ಪ್ಯಾಂಗಾಂಗ್‌ ಸರೋವರ, 17 ಎ ಗಸ್ತು ಪ್ರದೇಶ ಸೇರಿದಂತೆ ಎಲ್‌ಎಸಿಯ ಮತ್ತೆರಡು ವಿವಾದಿತ ಪ್ರದೇಶಗಳಿಂದ ವಾಪಸಾಗಲು ಚೀನ ಹಿಂದೇಟು ಹಾಕುತ್ತಿರುವುದರಿಂದ ಮುಂದಿನ ವಾರ ಈ ಸಭೆ ನಡೆಯಲಿದೆ.

ರಷ್ಯಾದಿಂದ ಬಾಹ್ಯಾಕಾಶ ಯುದ್ಧ: ಆರೋಪ
ಮಹತ್ವದ ಬೆಳವಣಿಗೆಯೊಂದರಲ್ಲಿ ರಷ್ಯಾ ಉಪಗ್ರಹ ಛೇದಕ ಕ್ಷಿಪಣಿಯ ಪರೀಕ್ಷಾರ್ಥ ಉಡಾವ‌ಣೆ ನಡೆಸಿದೆ. ಈ ಬಗ್ಗೆ ಬ್ರಿಟನ್‌ ಮತ್ತು ಅಮೆರಿಕ ಸರಕಾರಗಳು ಆತಂಕ ವ್ಯಕ್ತಪಡಿಸಿವೆ. ರಷ್ಯಾದ ಈ ಕ್ರಮ ಆಘಾತ ಮೂಡಿಸಿದೆ ಎಂದು ಅವೆರಡು ಪ್ರತಿಪಾದಿಸಿವೆ. ಯುನೈಟೆಡ್‌ ಕಿಂಗ್‌ಡಮ್‌ನ ಸೇನೆಯ ಉಪಗ್ರಹ ವಿಭಾಗ ವ್ಯಕ್ತಪಡಿಸಿದ ಅಭಿಪ್ರಾಯದ ಪ್ರಕಾರ ಈ ಕ್ಷಿಪಣಿಯ ತುಂಡುಗಳೇ ಆಗಸದಲ್ಲಿರುವ ವಿವಿಧ ರಾಷ್ಟ್ರಗಳ ಉಪಗ್ರಹಗಳಿಗೆ ತೊಂದರೆಯುಂಟುಮಾಡಲಿದೆ ಎಂದಿದೆ.

ಇಂಥ ಕ್ರಮ ಬಾಹ್ಯಾಕಾಶ ವ್ಯವಸ್ಥೆಯಲ್ಲಿನ ಸ್ಥಿರತೆಗೆ ಧಕ್ಕೆ ತರಲಿದೆ ಎಂದು ಅದು ಆತಂಕ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜತೆಗಿನ ಫೋನ್‌ ಮಾತುಕತೆ ವೇಳೆ ಪರೀಕ್ಷೆ ಬಗ್ಗೆ ಆಕ್ಷೇಪ ಮಾಡಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ರಷ್ಯಾ ಇದೇ ಮಾದರಿಯ ಉಪಗ್ರಹ ಛೇದಕ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರೂ, ಅದು ಸಣ್ಣ ಪ್ರಮಾಣದ್ದಾಗಿತ್ತು.

ಮಲಬಾರ್‌ಗೆ ಆಸೀಸ್‌ ಬಂದ್ರೆ ಇನ್ನೂ ಲಾಭ
ಭಾರತ, ಯುಎಸ್‌, ಜಪಾನ್‌ ರಾಷ್ಟ್ರಗಳ ಮಲಬಾರ್‌ ಸಮರನೌಕೆಗಳ ಅಭ್ಯಾಸದಲ್ಲಿ ಆಸ್ಟ್ರೇಲಿಯಾ ಪಾಲ್ಗೊಳ್ಳುತ್ತಿರುವುದು ಒಳ್ಳೆಯ ಸಂಗತಿ. ರಕ್ಷಣಾ ಹಿತಾಸಕ್ತಿಗಳಿಗೆ ಇದು ಲಾಭ ನೀಡಲಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪಕಾರ್ಯದರ್ಶಿ ಸ್ಟೀವನ್‌ ಬೀಗನ್‌ ಅಭಿಪ್ರಾಯಪಟ್ಟಿದ್ದಾರೆ. ಮಲಬಾರ್‌ ತಾಲೀಮಿನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ಈಗಾಗಲೇ ತುದಿಗಾಲಿನಲ್ಲಿ ನಿಂತಿದೆ. ಮುಂದಿನ 2 ವಾರಗಳೊಳಗೆ ಭಾರತ, ಆಸ್ಟ್ರೇಲಿಯಾಕ್ಕೆ ಈ ಸಂಬಂಧ ಅಧಿಕೃತ ಆಹ್ವಾನ ನೀಡಲಿದೆ.

ಮತ್ತಷ್ಟು ಚೀನ ಆ್ಯಪ್‌ನಿಷೇಧಕ್ಕೆ ನಿರ್ಧಾರ
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತದಲ್ಲಿ ಬಳಕೆಯಾಗುತ್ತಿರುವ ಚೀನ ಮೂಲದ ಮತ್ತಷ್ಟು ಮೊಬೈಲ್‌ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಇದರ ಭಾಗವಾಗಿ, ಹಲೋ ಲೈಟ್‌, ಶೇರ್‌ ಇಟ್‌ ಲೈಟ್‌, ಬಿಗೋ ಲೈಟ್‌ ಹಾಗೂ ವಿಎಫ್ವೈ ಲೈಟ್‌ ಎಂಬ ಆ್ಯಪ್‌ಗ್ಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತಗೆದುಹಾಕಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು, ಲಡಾಖ್‌ನಲ್ಲಿ ಭಾರತ-ಚೀನ ಸೈನಿಕರು ಮುಖಾಮುಖಿಯಾದ ಸಂದರ್ಭದಲ್ಲಿ ಚೀನ ಸೈನಿಕರು ಭಾರತೀಯ ಸೈನಿಕರ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿದ್ದರು. ಇದನ್ನು ಉಗ್ರವಾಗಿ ಖಂಡಿಸಿದ್ದ ಕೇಂದ್ರ ಸರಕಾರ, ಚೀನ ಮೂಲದ 59 ಮೊಬೈಲ್‌ ಆ್ಯಪ್‌ ಗಳನ್ನು ನಿಷೇಧಿಸಿತ್ತು. ಹಾಗಾಗಿ, ಭಾರತದಲ್ಲಿ ತುಂಬಾ ಜನಪ್ರಿಯವಾಗಿದ್ದ ಟಿಕ್‌ಟ್ಯಾಕ್‌ ಆ್ಯಪ್‌ ಕೂಡ ನಿಷೇಧಿಸಲ್ಪಟ್ಟಿದೆ. ಭಾರತೀಯ ಸಾರ್ವಭೌಮತ್ವಕ್ಕೆ, ಐಕ್ಯತೆಗೆ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವಂಥವು ಎಂದು ಕೇಂದ್ರ ಸರಕಾರ ಬಣ್ಣಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next