ವಾಷಿಂಗ್ಟನ್: ಭಾರತದ ವಿರುದ್ಧ ಕೆನಡಾ ತನ್ನ ಕಿರಿಕ್ ಮುಂದುವರಿಸಿದ್ದು, ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂಬುದನ್ನು ಮತ್ತೂಮ್ಮೆ ಹೇಳಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈಗಾಗಲೇ ನಾವು ಮಿತ್ರರಾಷ್ಟ್ರಗಳೊಂದಿಗೆ ಹಂಚಿಕೊಂಡಿದ್ದೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಹೇಳಿದ್ದರೆ, ಭಾರತದ ಮೇಲೆ ನಿರ್ಬಂಧ ವಿಧಿಸುವ ಸುಳಿವನ್ನು ವಿದೇಶಾಂಗ ಸಚಿವೆ ನೀಡಿದ್ದಾರೆ.
ಕೆನಡಾದ 6 ರಾಯಭಾರಿಗಳನ್ನು ಭಾರತ ಹೊರಗಟ್ಟಿದ ಬೆನ್ನಲ್ಲೇ ಟ್ರಾಡೊ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದು, ನಮಗೆ ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ. ಆದರೆ ಭಾರತ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಬಳಸಿ ಕೊಂಡು ಕೆನಡಾದ ಪ್ರಜೆಗಳ ಮೇಲೆ ದಾಳಿ ಮಾಡಿದ್ದು ತಪ್ಪು. ನಾನು ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ.
ಭಾರತದ ಮೇಲೆ ನಿರ್ಬಂಧ ಸಾಧ್ಯತೆ: ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿರುವ ಬೆನ್ನಲ್ಲೇ ಭಾರತದ ಮೇಲೆ ನಿರ್ಬಂಧ ವಿಧಿಸುವ ಸಾಧ್ಯತೆಗಳ ಬಗ್ಗೆ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಮಾತನಾಡಿದ್ದಾರೆ. ಭಾರತದ ಮೇಲೆ ನಿರ್ಬಂಧ ವಿಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಎಲ್ಲವೂ ಸಚಿವಾಲಯದ ಮುಂದಿದೆ, ಯಾವುದೇ ತೀರ್ಮಾನ ಕೈಗೊಳ್ಳಬಹುದು ಎಂದಿದ್ದಾರೆ.
ಭಾರತದಿಂದ ತೀಕ್ಷ್ಣ ಪ್ರತಿಕ್ರಿಯೆ: ಅದೇ ಹಳೇ ಟ್ರಾಡೊ ಅದೇ ಹಳೇ ಮಾತುಗಳನ್ನಾಡುತ್ತಿದ್ದಾರೆ. ಭಾರತದ ಅಧಿಕಾರಿಗಳ ಪಾತ್ರದ ಬಗ್ಗೆ ಕೆನಡಾ ಯಾವುದೇ ಸಾಕ್ಷ್ಯ ನೀಡುತ್ತಿಲ್ಲ. ಪೊಲೀಸರನ್ನು ಬಳಕೆ ಮಾಡಿಕೊಂಡು ಭಾರತದ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ ಎಂದಿದೆ. ಭಾರತದ ಕೈವಾಡವಿದೆ ಎಂದು ಹೇಳುವುದ ಕ್ಕಾಗಿ ಕೆನಡಾ ಪ್ರಧಾನಿ ಟ್ರಾಡೊ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಭಾರತ ಈ ವಿವರಣೆ ನೀಡಿದೆ. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಟ್ರಾಡೊರಿಗೆ ಅಷ್ಟು ಮಟ್ಟಿಗಿನ ಖಾತ್ರಿ ಇದ್ದರೆ ರಾಯಲ್ ಮೌಂಟೆಡ್ ಕೆನೆಡಿಯನ್ ಪೊಲೀಸರು ಏಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಕೆನಡಾ ಸರಕಾರ ಯಾಕೆ ಭಾರತದ ವಿರುದ್ಧ ಯಾವುದೇ ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಭಾರತ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಇದು ಕಳವಳಕಾರಿ: ಕಿವೀಸ್ ಪಿಎಂ: ಕೆನಡಾದಲ್ಲಿ ನಡೆಯುತ್ತಿರುವ ಕ್ರಿಮಿನಲ್ ತನಿಖೆಯ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಕೆನಡಾ ಮಾಡುತ್ತಿರುವ ಆರೋಪಗಳು ಖಚಿತವಾದರೆ ಇದು ಹೆಚ್ಚು ಕಳವಳಕಾರಿ ಎಂದು ನ್ಯೂಜಿಲೆಂಡ್ ಪ್ರಧಾನಿ ವಿನ್‌ಸ್ಟನ್ ಪೀಟರ್ಸ್ ಹೇಳಿದ್ದಾರೆ.
ಭಾರತ, ಕೆನಡಾ ನಡುವೆ 5 ಗಂಟೆ ರಹಸ್ಯ ಸಭೆ: ವಾಷಿಂಗ್ಟನ್ ಪೋಸ್ಟ್
ಭಾರತ ಮತ್ತು ಕೆನಡಾದ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೆನಡಾದ ಸಹವರ್ತಿಗಳ ನಡುವೆ ರಹಸ್ಯ ಸಭೆ ನಡೆದಿದೆ ಎಂದು ಕೆನಡಾದ ಅಧಿಕಾರಿಗಳನ್ನು ಉಲ್ಲೇಖೀಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಕಳೆದ ವಾರ ಸಿಂಗಾಪುರ ದಲ್ಲಿ ಈ ಸಭೆ ನಡೆದಿದ್ದು, ಸುಮಾರು 5 ಗಂಟೆ ಉಭಯ ದೇಶದ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯ ಸಮಯದಲ್ಲಿ ಅಜಿತ್ ದೋವಲ್ ಅವರು ಲಾರೆನ್ಸ್ ಬಿಷ್ಣೋಯಿ ಯಾರು ಎಂಬುದು ಗೊತ್ತೇ ಇಲ್ಲ ಎಂಬ ನಡೆದುಕೊಂಡರು ಎಂದು ಕೆನಡಾ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಬಿಷ್ಣೋಯ್ ಗ್ಯಾಂಗ್ ಬಳಕೆ: ಕೆನಡಾ ಪೊಲೀಸ್
ಕೆನಡಾದಲ್ಲಿ ನಡೆಯುತ್ತಿರುವ ಟಾರ್ಗೆಟ್ ಕಿಲ್ಲಿಂಗ್‌ನಲ್ಲಿ ಭಾರತದ ಸಿಬಂದಿ ಬಿಷ್ಣೋಯ್ ಗ್ಯಾಂಗನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆನಡಾ ಪೊಲೀಸರು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆನಡಾ ಪೊಲೀಸ್ ಕಮಿಷನರ್, ದಕ್ಷಿಣ ಏಷ್ಯಾದ ಪ್ರಜೆಗಳನ್ನು ಕೆನಡಾದಲ್ಲಿ ಗುರಿ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಖಲಿಸ್ಥಾನಿ ಪರವಾದವರೇ ಗುರಿಯಾಗುತ್ತಿದ್ದಾರೆ ಎಂದಿದ್ದಾರೆ.