ಕಲಬುರಗಿ: ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಸುಧಾರಣಾ ಕ್ರಮ ಕೈಗೊಂಡಿದ್ದಕ್ಕೆ ಪ್ರತಿಷ್ಠಿತ “ರಾಷ್ಟ್ರ ಮಟ್ಟದ ಇಂಡಿಯಾ ಬಸ್ ಸೇಫ್ಟಿ ಅವಾರ್ಡ್-2018 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಲಬಿಸಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಮಲೇಶಿಯಾದ ಕೌಲಾಲಂಪುರದಲ್ಲಿ ಜು. 7ರಂದು ನಡೆದ ರಾಷ್ಟ್ರಮಟ್ಟದ ಸಮಾರಂಭದಲ್ಲಿ ಮಲೇಶಿಯಾ ಪ್ರವಾಸೋದ್ಯಮ ಒಕ್ಕೂಟದ ಅಧ್ಯಕ್ಷ ಉಜಾದಿ ಉದಾನೀಸ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ರಾಷ್ಟ್ರದ ಎಲ್ಲ ಜಿಲ್ಲೆಗಳ ಸಾರಿಗೆ ಸಂಸ್ಥೆಗಳು ಇಂಡಿಯಾ ಬಸ್ ಸೇಫ್ಟಿ ಅವಾರ್ಡ್‌ಗಾಗಿ ಪೈಪೋಟಿಯಲ್ಲಿದ್ದವು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಥಮಾದ್ಯತೆ ನೀಡಿದ್ದಕ್ಕಾಗಿ 2017-18ನೇ ಸಾಲಿನಲ್ಲಿ ಅಪಘಾತಗಳ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.
ಇದನ್ನು ಪರಿಗಣಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಲಾಗಿದೆ. ಸಮಾರಂಭದಲ್ಲಿ ಮಲೇಶಿಯಾ ಪ್ರವಾಸೋದ್ಯಮ ಇಲಾಖೆ ಪ್ರಧಾನ ನಿರ್ದೇಶಕ ಡಾಟುಕು ಸೆರಿ ಮಿರ್ಜಾ ಮೊಹಮ್ಮದ್ ತಯಾಬ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.
ರಾಷ್ಟ್ರದಲ್ಲಿರುವ ಎಲ್ಲ ಸಾರಿಗೆ ಸಂಸ್ಥೆಗಳೊಂದಿಗೆ ಬಸ್ ಅಲಾಯಿನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಅರ್ನಸ್ಟ್ ಆ್ಯಂಡ್ ಯಂಗ್ ಎಲ್‌ಎಲ್‌ಪಿ ಮತ್ತು ಅಭಿ ಬಸ್ ಡಾಟ್ ಕಾಂ ನವರು ಹಲವಾರು ಬಾರಿ ಟೆಲಿಕಾನ್ ರೆನ್ಸನಲ್ಲಿ ಸಂಸ್ಥೆಗಳ ಮಾಹಿತಿ ಪಡೆದು ಅತ್ಯುತ್ತಮ ಬಸ್ ಸೇಪ್ಟಿ ಅವಾರ್ಡ್‌ಗಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು. ಕೌಲಾಲಂಪುರದಲ್ಲಿ ಜು. 7ರಂದು ನಡೆದ ಅಂತಿಮ ಸುತ್ತಿನ ಆಯ್ಕೆ ಸಮಾರಂಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಷ್ಟ್ರಮಟ್ಟದಲ್ಲಿಯೇ ಪ್ರಥಮ ದರ್ಜೆಯಲ್ಲಿ ಆಯ್ಕೆಯಾಗಿರುವುದು ಹೆಮ್ಮೆ ತರುವ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಮಟ್ಟದ ಸಮಾರಂಭಕ್ಕೆ ಹಾಜರಾಗುವಂತೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ಸಾರಿಗೆ ಖಾತೆ ಸಚಿವರು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರಶಸ್ತಿ ಬರಲು ಮಾರ್ಗದರ್ಶನ ನೀಡಿದ ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರ ಕಠಿಣ ಪರಿಶ್ರಮ, ಕರ್ತವ್ಯ ನಿಷ್ಠೆ ಬಹುಮುಖ್ಯವಾಗಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರಿಗೆ ಇನ್ನು ಉತ್ತಮ ಹಾಗೂ ಸುರಕ್ಷಿತ ಸಾರಿಗೆ ಸೇವೆ ಒದಗಿಸಲು ಪ್ರಯಾಣಿಕರ ವಿಶ್ವಾಸಕ್ಕೆ ಪಾತ್ರರಾಗುವಂತೆ ಎಲ್ಲರೂ ಪ್ರಯತ್ನಿಸಬೇಕು ಎಂದು ಕೋರಿದ್ದಾರೆ.