ಹೊಸದಿಲ್ಲಿ: ಜೀವ ಕೈಯಲ್ಲಿ ಹಿಡಿದು ಯಾವಾಗ ತಾಯ್ನಾಡು ಎಂದು ಕಾತರಿಸುತ್ತಿದ್ದ 4 ಸಾವಿರ ಅನಿವಾಸಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ವಂದೇ ಭಾರತ್ ಯೋಜನೆಯ ಗುರಿಯಂತೆ, ಮೇ 15ರ ಒಳಗೆ ಇನ್ನು 11 ಸಾವಿರ ಭಾರತೀಯರು ತಾಯ್ನಾಡಿಗೆ ಮರಳಲಿದ್ದಾರೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯಾ ಸಲಿಲ ಶ್ರೀವಾಸ್ತವ ಹೇಳಿದ್ದಾರೆ.
ಸೋಮವಾರ ಬೆಳಗಿನಿಂದ ತಡರಾತ್ರಿವರೆಗೆ 6 ವಿಮಾನಗಳು ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಳಿದಿವೆ. ಲಂಡನ್ – ಬೆಂಗಳೂರು ಸೇರಿದಂತೆ ಢಾಕಾ- ಮುಂಬಯಿ, ಅಬುಧಾಬಿ- ಹೈದರಾಬಾದ್, ಕೌಲಾ ಲಂಪುರ್- ಚೆನ್ನೈ ಹಾಗೂ ಬಹ್ರೈನ್‌ನಿಂದ ಹೊರಟ ವಿಶೇಷ ವಿಮಾನ ಕಲ್ಲಿಕೋಟೆಯನ್ನು ತಡರಾತ್ರಿ ತಲುಪಿದೆ.
ಅಲ್ಲದೆ, ಏರ್ ಇಂಡಿಯಾ- ಎಐ 1617 ವಿಮಾನದಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಿಂದ ಮುಂಬಯಿ ಮಾರ್ಗವಾಗಿ ಹೈದರಾಬಾದ್‌ಗೆ 118 ಅನಿವಾಸಿ ಭಾರತೀಯರು ಆಗಮಿಸಿದ್ದಾರೆ. ಏರ್‌ಕ್ರಾಫ್ಟ್ ನಿಂದಲೇ 20- 25 ಮಂದಿಯ ತಂಡ ಮಾಡಿ, ಸೂಕ್ತ ಸ್ಕ್ರೀನಿಂಗ್ ನಡೆಸಿ, ಕ್ವಾರಂಟೈನ್ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಸೋಂಕಿತರಿಲ್ಲ: ರವಿವಾರದಿಂದ ಬಂದಿಳಿದಿರುವ ವಿಮಾನಗಳ 827 ಪ್ರಯಾಣಿಕರಿಗೆ ಮುಂಬಯಿನಲ್ಲಿ ಅಗತ್ಯ ಸೂಚನೆಗಳನ್ನು ನೀಡಿ, ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತಿದೆ.
ಲಂಡನ್, ಸಿಂಗಾಪುರ, ಮನಿಲಾ, ಸ್ಯಾನ್‌ಫ್ರಾನ್ಸಿಸ್ಕೋದಿಂದ ಬಂದಿರುವ ಪ್ರಯಾಣಿಕರಲ್ಲಿ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಹಾಗಾಗಿ, ಯಾರನ್ನೂ ಐಸೋಲೇಶನ್ ವಾರ್ಡ್‌ಗೆ ಸ್ಥಳಾಂತರಿಸಿಲ್ಲ ಎಂದು ಬೃಹತ್ ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ.