ಮೆಲ್ಬರ್ನ್: ಆಸ್ಟ್ರೇಲಿಯಾದ ಪ್ರತಿಷ್ಠಿತ ‘ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ’ ಗೌರವಕ್ಕೆ ಉಡುಪಿ ಸಮೀಪದ ಬೆಳ್ಮಣ್ಣುವಿನಲ್ಲಿ ಜನಿಸಿರುವ ಪ್ರಿಯಾ ಸೆರಾವೊ ಭಾಜನರಾಗಿದ್ದಾರೆ. ಗುರುವಾರ ರಾತ್ರಿ ಮೆಲ್ಬರ್ನ್ನಲ್ಲಿ ನಡೆದ ‘ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ’ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಪ್ರಿಯಾ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡರು.
ಉಗಾಂಡ ಮೂಲದವರಾದ ಬೆಲ್ಲಾ ಕಸಿಂಬಾ ಎಂಬವರು ರನ್ನರ್ ಪ್ರಶಸ್ತಿ ಗಳಿಸಿದರು. 27 ವರ್ಷದ ಸೆರಾವೊ, ವಿಕ್ಟೋರಿಯಾ ವಿವಿಯ ಕಾನೂನು ಪದವೀಧರೆಯಾಗಿದ್ದು ಆಸ್ಟ್ರೇಲಿಯಾಕ್ಕೆ 11 ವರ್ಷದವರಾಗಿದ್ದಾಗ ತಮ್ಮ ಕುಟುಂಬದೊಂದಿಗೆ ವಲಸೆ ಬಂದಿದ್ದರು.
‘ಸಾಂಸ್ಕೃತಿಕ ವೈವಿಧ್ಯಕ್ಕೆ ಸಂದ ಗೌರವ’: ಗೌರವ ಸ್ವೀಕರಿಸಿ ಮಾತನಾಡಿದ ಸೆರಾವೊ, ”ಈ ವೇದಿಕೆಯಲ್ಲಿ ಆಸ್ಟ್ರೇಲಿಯಾಕ್ಕೆ ಸೇರದ ಇಬ್ಬರು ಅನ್ಯ ವರ್ಣೀಯರಿಗೆ ಎರಡು ಗೌರವ (ವಿನ್ನರ್ ಮತ್ತು ರನ್ನರ್‌ಅಪ್) ಸಿಕ್ಕಿರುವುದು ಹೆಮ್ಮೆಯ ವಿಚಾರ.
ಆಸ್ಟ್ರೇಲಿಯಾದ ರಾಜಕೀಯದಲ್ಲಾಗಲೀ, ಮಾಧ್ಯಮಗಳಲ್ಲಾಗಲಿ, ಉದ್ಯಮ ಕ್ಷೇತ್ರಗಳಲ್ಲಾಗಲೀ ಅನ್ಯವರ್ಣೀಯರನ್ನು ನಾವು ಹೆಚ್ಚಾಗಿ ಕಾಣಲಾಗುವುದಿಲ್ಲ. ಹಾಗಾಗಿ, ನನ್ನ ಈ ಗೆಲುವು ಸಾಂಸ್ಕೃತಿಕ ವೈವಿಧ್ಯತೆಗೆ ಸಂದ ಗೌರವ” ಎಂದಿದ್ದಾರೆ.