ನವ ದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ತಾರ್ಕಿಕ ಅಂತ್ಯಕ್ಕೆ ಬಂದಂತೆ ಕಾಣಿಸುತ್ತಿದ್ದು, ಪೂರ್ವ ಲಡಾಖ್‌ನ ಗೋಗ್ರಾ ಹೈಟ್ಸ್ ನಿಂದ ಸೇನೆ ವಾಪಸ್ ತೆಗೆದುಕೊಳ್ಳಲು ಉಭಯ ಕಡೆಯವರೂ ಒಪ್ಪಿದ್ದಾರೆ.
ಗಾಲ್ವಾನ್ ಘರ್ಷಣೆ ನಂತರ ಈ ಭಾಗದ ಗಡಿಯಲ್ಲಿ ಎರಡೂ ಸೇನೆಗಳು ಜಮಾವಣೆಗೊಂಡಿದ್ದವು. ಶನಿವಾರ ನಡೆದ ಮಾತುಕತೆ ವೇಳೆ ಎರಡೂ ಪಕ್ಷಗಳು ಇಲ್ಲಿಂದ ಸೇನೆ ವಾಪಸ್ ತೆಗೆದುಕೊಳ್ಳಲು ಒಪ್ಪಿಕೊಂಡಿವೆ. ಆದರೆ, ಹಾಟ್ ಸ್ಪ್ರಿಂಗ್ ನಿಂದ ಸೇನೆ ವಾಪಸ್ ತೆಗೆದುಕೊಳ್ಳುವ ಬಗ್ಗೆ ಉಭಯ ಪಕ್ಷಗಳಲ್ಲಿ ಇನ್ನೂ ಯಾವುದೇ ನಿರ್ಧಾರವಾಗಿಲ್ಲ.
ಸುಮಾರು 6 ತಿಂಗಳ ನಂತರ ಭಾರತ ಮತ್ತು ಚೀನಾದ ಕಾರ್ಪ್ ಕಮಾಂಡರ್‌ಗಳ ಮಟ್ಟದ ಮಾತುಕತೆ ನಡೆದಿತ್ತು. ವಾಸ್ತವ ಗಡಿ ನಿಯಂತ್ರಣ ರೇಖೆಯ ಚೀನಾ ಭಾಗದಲ್ಲಿರುವ ಮಾಲ್ಡೋನಲ್ಲಿ 9 ಗಂಟೆಗಳ ಕಾಲ ಈ ಮಾತುಕತೆ ನಡೆದಿದ್ದು, ಹೆಚ್ಚು ಕಡಿಮೆ ಈ ಸಭೆ ಫಲಪ್ರದವಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ ಸದ್ಯದಲ್ಲೇ ಮತ್ತೂಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 1674 ಪಾಸಿಟಿವ್ ಪ್ರಕರಣ ಪತ್ತೆ; 38 ಜನರು ಸಾವು
ಆರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಪ್ಯಾಂಗೋಂಗ್ ಲೇಕ್ ಪ್ರದೇಶದಿಂದ ಸೇನೆ ವಾಪಸ್ ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿದ್ದರು.