Advertisement

Election Polls: ಕಾಶ್ಮೀರ ಮುಕುಟ ಗೆದ್ದ ಇಂಡಿಯಾ; ಕಣಿವೆಯಲ್ಲಿ ಮತ್ತೆ ಎನ್‌ಸಿ ಪ್ರಾಬಲ್ಯ

11:15 PM Oct 08, 2024 | Team Udayavani |

ಶ್ರೀನಗರ: ಬರೋಬ್ಬರಿ 10 ವರ್ಷಗಳ ಬಳಿಕ ಜಮ್ಮು-ಕಾಶ್ಮೀರ ವಿಧಾನಸಭೆಗೆ ನಡೆದ ಚುನಾವಣೆ ಫ‌ಲಿತಾಂಶ ಮಂಗಳವಾರ ಪ್ರಕಟವಾಗಿದ್ದು, 90 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ 48 ಸ್ಥಾನಗಳನ್ನು ಗೆದ್ದುಕೊಂಡು ಸರ್ಕಾರ ರಚನೆಯತ್ತ ಹೆಜ್ಜೆಯಿಟ್ಟಿವೆ. ಬಿಜೆಪಿ 29 ಸ್ಥಾನಗಳನ್ನು ಗೆದ್ದುಕೊಂಡು 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ 4, ಪಕ್ಷೇತರರು 7, ಆಮ್‌ ಆದ್ಮಿ ಪಕ್ಷ 1, ಸಿಪಿಎಂ1, ಜಮ್ಮು-ಕಾಶ್ಮೀರ ಪೀಪಲ್‌ ಕಾನ್ಫರೆನ್ಸ್‌ ಪಕ್ಷ 1 ಸ್ಥಾನಗಳಲ್ಲಿ ಜಯಗಳಿಸಿವೆ.

Advertisement

ಅಚ್ಚರಿಯೆಂಬಂತೆ, 2014ರ ವಿಧಾನಸಭೆ ಚುನಾವಣಾ ಫ‌ಲಿತಾಂಶಕ್ಕೆ ಹೋಲಿಕೆ ಮಾಡಿದರೆ ಬಿಜೆಪಿ ಈ ಬಾರಿ ಸಾಮರ್ಥ್ಯವನ್ನು ಉತ್ತಮಪಡಿಸಿಕೊಂಡಿದೆ. ಆ ಸಂದರ್ಭದಲ್ಲಿ ಬಿಜೆಪಿ 75 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 25ರಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ತನ್ನ ಸ್ಥಾನವನ್ನು 29ಕ್ಕೆ ಏರಿಸಿಕೊಳ್ಳುವ ಮೂಲಕ ಜಮ್ಮು ವಲಯದಲ್ಲಿನ ಪ್ರಾಬಲ್ಯವನ್ನು ಮುಂದುವರಿಸಿಕೊಂಡು, ಕಾಶ್ಮೀರದಲ್ಲೂ ಪ್ರಭಾವ ಬೀರಿರುವುದನ್ನು ಸಾಬೀತುಪಡಿಸಿದೆ. ನ್ಯಾಷನಲ್‌ ಕಾನ್ಫರೆನ್ಸ್‌ ಈ ಬಾರಿ 56ರಲ್ಲಿ ಸ್ಪರ್ಧಿಸಿ 42ರಲ್ಲಿ ಗೆದ್ದಿದೆ. 39 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದ್ದ ಕಾಂಗ್ರೆಸ್‌ 6ರಲ್ಲಿ ಮಾತ್ರ ಜಯ ಸಾಧಿಸಲು ಶಕ್ತವಾಗಿದೆ.

ಹೊಸತಾಗಿ ರಚನೆಯಾಗಲಿರುವ ವಿಧಾನಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಒಟ್ಟು 346 ಮಂದಿ ಅಭ್ಯರ್ಥಿಗಳ ಪೈಕಿ 7ಕ್ಕೆ ಏರಿಕೆಯಾಗಿದೆ. 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 3 ಮಂದಿ ಇದ್ದರು. ಜಮ್ಮು ವಲಯದ ಛಾಂಬ್‌ ಕ್ಷೇತ್ರದಿಂದ ಕಾಂಗ್ರೆಸ್‌ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಸತೀಶ್‌ ಶರ್ಮಾ, ಸುರಾನ್‌ಕೋಟ್‌ ಕ್ಷೇತ್ರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದಿಂದ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮೊಹಮ್ಮದ್‌ ಅಕ್ರಂ ಗೆದ್ದ ಪಕ್ಷೇತರ ಅಭ್ಯರ್ಥಿಗಳ ಪೈಕಿ ಪ್ರಮುಖರಾಗಿದ್ದಾರೆ.

ಖಾತೆ ತೆರೆದ ಆಪ್‌: ಹರ್ಯಾಣದಲ್ಲಿ ಒಂದೂ ಸ್ಥಾನವನ್ನೂ ಗೆಲ್ಲುಲು ವಿಫ‌ಲವಾಗಿದ್ದ ಆಮ್‌ ಆದ್ಮಿ ಪಾರ್ಟಿ(ಆಪ್‌) ಕಣಿವೆ ರಾಜ್ಯದಲ್ಲಿ ಖಾತೆ ತೆರಿದೆದ.

ದೋಡಾ ಜಿಲ್ಲೆಯಲ್ಲಿ ಆಪ್‌ ಅಭ್ಯರ್ಥಿ ಮೆಹ್ರಾಜ್‌ ಮಲಿಕ್‌ ಬಿಜೆಪಿ ನಾಯಕ ಗಜಯ್‌ ಸಿಂಗ್‌ ರಾಣಾ ವಿರುದ್ಧ 4538 ಮತಗಳ ಅಂತರದಿಂದ ಗೆದ್ದಿದ್ದಾರೆ. ಆಪ್‌ ಅಭ್ಯರ್ಥಿಗೆ 23228 ಮತಗಳು ಬಂದಿವೆ.

Advertisement

ಉಗ್ರರ ದಾಳಿಯಿಂದ ಅಪ್ಪನ ಕಳೆದುಕೊಂಡಿದ್ದ ಮಹಿಳೆ ಜಯಭೇರಿ

2019ರಲ್ಲಿ ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಉಗ್ರರ ದಾಳಿಗೆ ತಂದೆಯನ್ನು ಕಳೆದುಕೊಂಡಿದ್ದ ಶಗುನ್‌ ಪರಿಹಾರ್‌ ಎಂಬ ಮಹಿಳೆಗೆ ಬಿಜೆಪಿ ಟಿಕೆಟ್‌ ನೀಡಿ ಸ್ಪರ್ಧಿಸಲು ಅವಕಾಶ ಕಲ್ಪಿಸಿತ್ತು. ಕಿಶ್ತ್ವಾರ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು ನ್ಯಾಷನಲ್‌ ಕಾನ್ಫರೆನ್ಸ್‌ನ ಹಿರಿಯ ನಾಯಕ ಸಜ್ಜಾದ್‌ ಅಹ್ಮದ್‌ ಕಿಚಲೂ ವಿರುದ್ಧ 521 ಮತಗಳ ಅಂತರದಿಂದ ಗೆದ್ದಿದ್ದಾರೆ. ಪರಿಹಾರ್‌ ಅವರಿಗೆ 29053 ಮತಗಳು ಬಂದಿವೆ.

ಗೆದ್ದ ಪ್ರಮುಖರು

ಒಮರ್‌ ಅಬ್ದುಲಾ (ಎನ್‌ಸಿ), ಗಂದೇರ್‌ಬಾಲ್‌, ಬದ್ಗಾಂ

ಗುಲಾಮ್‌ ಅಹ್ಮದ್‌ ಮಿರ್‌, ಕಾಂಗ್ರೆಸ್‌, ದೂರು

ಸಜ್ಜದ್‌ ಗನಿ ಲೋನ್‌, ಜೆಕೆಪಿಎಫ್, ಹಂದ್ವಾರಾ

ತಾರೀಖ್‌ ಕರ್ರಾ, ಕಾಂಗ್ರೆಸ್‌, ಕೇಂದ್ರ ಶಾಲ್ಟೆಂಗ್‌

ಶಗುನ್‌ ಪರಿಹಾರ್‌, ಬಿಜೆಪಿ, ಕಿಶ್ತ್ವಾರ್‌

ಮೆಹ್ರಾಜ್‌ ಮಲಿಕ್‌, ಆಪ್‌, ದೋಡಾ

ಸೋತ ಪ್ರಮುಖರು

ಇಲ್ತಿಜಾ ಮುಫ್ತಿ, ಪಿಡಿಪಿ, ಶ್ರೀಗುಫಾರ-ಬಿಜ್‌ಬೆಹರಾ

ಚೌಧರಿ ಜುಲ್ಫಿಕರ್‌ ಅಲಿ, ಬಿಜೆಪಿ, ಬುಧಾಲ್‌

ಖುರ್ಷೀದ್‌ ಅಹ್ಮದ್‌ ಶೇಖ್‌, ಕುಲ್ಗಾಮ್‌

ಖಾಲಿದ್‌ ಸುಹರ್‌ವಾರ್ಡಿ, ಎನ್‌ಸಿ, ದೋಡಾ

ರವೀಂದರ್‌ ರೈನಾ, ಬಿಜೆಪಿ, ನೌಶೇರಾ

ಸಜ್ಜದ್‌ ಗನಿ ಲೋನ್‌, ಜೆಕೆಪಿಎಫ್, ಕುಪ್ವಾರ

Advertisement

Udayavani is now on Telegram. Click here to join our channel and stay updated with the latest news.

Next