ಹೊಸದಿಲ್ಲಿ: ಬಾಂಗ್ಲಾದೇಶದಿಂದ ಅಸ್ಸಾಂನಲ್ಲಿ ಬಂದು ನೆಲೆಸಿದ್ದ ಏಳು ಮಂದಿ ನಾಗರಿಕರು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಕೇಂದ್ರ ಸರಕಾರ ಕಪ್ಪುಪಟ್ಟಿಗೆ ಸೇರಿಸಿದೆ.
ಜಲಾಲುದ್ದೀನ್ ಉಸ್ಮಾನಿ, ಅಹ್ಮದ್ ಹುಸೇನ್ ಅಲಿಯಾಸ್ ಮಫ್ತಿ ಹುಸೇನ್, ಅಬು ತಾಹಿರ್, ಮೊಹಮ್ಮದ್ ಜಕಾರಿಯ, ಖಾವಾಜಾ ಬದ್ರು ಧ್ದೋಝಾ ಹೈದರ್, ಹಜ್ರತ್ ಮೌಲಾನಾ ರಫೀಕುಲ್, ಜನಪ್ರಿಯ ಹಾಡುಗಾರರಾಗಿರುವ ಮುನಿಯಾ ಮೂನ್ ಅಲಿಯಾಸ್ ಮುಹೈನ್‌ಮೆನ್ ಉನ್ ನಹರ್ ಎಂಬವರ ವಿರುದ್ಧ ಕೇಂದ್ರ ಗೃಹ ಇಲಾಖೆ ಈ ಕ್ರಮ ಕೈಗೊಂಡಿದೆ. ಅವರ ವೀಸಾಗಳನ್ನೂ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಮೂಲಗಳು ತಿಳಿಸಿವೆ.
ಅಸ್ಸಾಂ ಪೊಲೀಸ್ ಇಲಾಖೆಯ ಗುಪ್ತಚರ ದಳವು, ಈ ಏಳು ಮಂದಿ ಅಸ್ಸಾಂ ಹಾಗೂ ದೇಶದ ಇನ್ನಿತರ ಭಾಗಗಳಲ್ಲಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆಂದು ಕೇಂದ್ರಕ್ಕೆ ಮಾಹಿತಿ ನೀಡಿತ್ತು. ಈ ಏಳು ಮಂದಿಯು ಕೆಲವು ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಜನರ ಮುಂದೆ ಭಾರತ ವಿರೋಧಿ ಭಾಷಣಗಳನ್ನು ಮಾಡುತ್ತಿದ್ದರು. ಇತ್ತೀಚೆಗೆ ಬಯಲಿಗೆ ಬಂದಿದ್ದ ಅನ್ಸಾರುಲ್ಲಾ ಬಾಂಗ್ಲಾ ಟೀಂ ಎಂಬ ಪ್ರಕರಣದ ತನಿಖೆ ವೇಳೆ ಈ ಏಳು ಮಂದಿಯ ಚಟುವಟಿಕೆ ತಿಳಿದುಬಂದಿ ದ್ದವು ಎಂದು ಮೂಲಗಳು ತಿಳಿಸಿವೆ.