ಮಾಂಗ್ ಕಾಕ್: ಎಸಿಸಿ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ 2023 ಕೂಟದಲ್ಲಿ ಭಾರತ ಎ ತಂಡವು ಫೈನಲ್ ನಲ್ಲಿ ಬಾಂಗ್ಲಾದೇಶವನ್ನು 31 ರನ್ ಗಳಿಂದ ಮಣಿಸಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 20ಓವರ್ ಗಳಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು 127 ರನ್ ಗಳಿಸಿತ್ತು. ಕನಿಷ್ಠ ಮೊತ್ತವನ್ನು ದಾಖಲಿಸಿದ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠ ಆಟವನ್ನಾಡಿ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ಟೀಮ್ ಇಂಡಿಯಾದ ಪರವಾಗಿ ವೃಂದಾ ದಿನೇಶ್ 36 ರನ್ ಗಳಿಸಿದರೆ, ಕನಿಕಾ ಅಹುಜಾ 30 ರನ್ ಗಳಿಸಿದರು. ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲದೆ ಎರಡಂಕಿ ರನ್ ಗಳಿಸಿ ಔಟಾದರು.
ಅಲ್ಪ ಮೊತ್ತದ ಸವಾಲು ಬೆನ್ನಟ್ಟಲು ಬ್ಯಾಟಿಂಗ್ ಗಿಳಿದ ಬಾಂಗ್ಲಾ ಆಟಗಾರರು ಆರಂಭದಲ್ಲೇ ಭಾರತದ ಸ್ಪಿನ್ ಜಾಲದಲ್ಲಿ ಸಿಲುಕಿಕೊಂಡು ವಿಕೆಟ್ ಒಪ್ಪಿಸಿದರು. ಸೋಭಾನ ಮೊಸ್ತರಿ (16 ರನ್), ಸತಿ ರಾಣಿ (13 ರನ್) ತಂಡದ ಪರವಾಗಿ ಹೆಚ್ಚು ರನ್ ಗಳಿಸಿದರು. ನಹಿದಾ ಆಕ್ತರ್ 17 ರನ್ ಗಳಿಸಿ ಕೊನೆಯವರೆಗೂ ಇದ್ದರೂ ಉಳಿದ ಆಟಗಾರರು ಅವರಿಗೆ ಸಾಥ್ ನೀಡಲು ಆಗಿಲ್ಲ. ಅಂತಿಮವಾಗಿ ಬಾಂಗ್ಲಾ 19.2 ಓವರ್ ಗಳಲ್ಲಿ 96 ರನ್ ಗಳಿಸಿ ಸರ್ವಪತನವಾಯಿತು.
ಭಾರತದ ಪರವಾಗಿ ಕನ್ನಡತಿ ಶ್ರೇಯಾಂಕಾ ಪಾಟೀಲ್ 4 ವಿಕೆಟ್ ಗಳನ್ನು ಪಡೆದು ಮಿಂಚಿದರೆ, ಮನ್ನತ್ ಕಶ್ಯಪ್ 3 ಮಹತ್ವದ ವಿಕೆಟ್ ಗಳನ್ನು ಪಡೆದರು. ಇನ್ನು ಕನಿಕಾ ಅಹುಜಾ 2 ವಿಕೆಟ್ ಗಳನ್ನು ಪಡೆದರು.
ಒಂದು ಪಂದ್ಯ ಆಡಿ ಫೈನಲ್ ಗೆ ಬಂದಿದ್ದ ಭಾರತ: ಎಸಿಸಿ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ನ ಬಹುತೇಕ ಪಂದ್ಯಗಳಿಗೆ ಮಳೆ ಅಡ್ಡಿ ಆಗಿತ್ತು. ಇದರಿಂದ ಕೆಲ ಪಂದ್ಯಗಳು ರದ್ದುಗೊಂಡಿತ್ತು. ಭಾರತ ಮೊದಲು ಹಾಂಕಾಂಗ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಆ ಬಳಿಕ ಪಾಕಿಸ್ತಾನ, ನೇಪಾಳ ವಿರುದ್ಧದ ಭಾರತದ ಪಂದ್ಯಗಳು ರದ್ದಾಗಿದ್ದವು. ಶ್ರೀಲಂಕಾ ಎ ತಂಡದ ವಿರುದ್ಧದ ಸೆಮಿ ಫೈನಲ್ ಪಂದ್ಯವೂ ಮಳೆಯಿಂದ ರದ್ದಾದ ಕಾರಣ ಉತ್ತಮ ರನ್ ರೇಟ್ ಹೊಂದಿದ್ದ ಭಾರತವು ಫೈನಲ್ ಗೆ ಅರ್ಹತೆ ಪಡೆದಿತ್ತು.