Advertisement

ಶರ್ಮಾ-ರಾಹುಲ್ ಶತಕ ; ಯಾದವ್ ಹ್ಯಾಟ್ರಿಕ್ ಪುಳಕ : ಭಾರತಕ್ಕೆ 107 ರನ್ ಗಳ ಜಯ

09:41 AM Dec 19, 2019 | Hari Prasad |

ವಿಶಾಖಪಟ್ಟಣಂ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸರ್ವಾಂಗೀಣ ಆಟದ ಪ್ರದರ್ಶನವನ್ನು ನೀಡಿದ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು 107 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ರೋಹಿತ್ ಶರ್ಮಾ ಮತ್ತು ರಾಹುಲ್ ಅವರ ಭರ್ಜರಿ ಶತಕ ಮತ್ತು ಕುಲದೀಪ್ ಯಾದವ್ ಅವರ ಹ್ಯಾಟ್ರಿಕ್ ವಿಕೆಟ್ ಸಾಧನೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

Advertisement

ಈ ಮೂಲಕ ಚೆನ್ನೈನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಕೊಹ್ಲಿ ಪಡೆ ಪ್ರತೀಕಾರ ತೀರಿಸಿಕೊಂಡಿದೆ. ಈ ಗೆಲುವಿನ ಮೂಲಕ ಏಕದಿನ ಸರಣಿ ಗೆಲುವಿನ ಆಸೆಯನ್ನು ಭಾರತ ಜೀವಂತವಿರಿಸಿಕೊಂಡಿದೆ.

ವೆಸ್ಟ್ ಇಂಡೀಸ್ 43.3 ಓವರ್ ಗಳಲ್ಲಿ 280 ರನ್ ಗಳಿಗೆ ಆಲೌಟ್ ಆಗುವುದರೊಂದಿಗೆ 107 ರನ್ ಗಳಿಂದ ಭಾರತಕ್ಕೆ ಶರಣಾಯಿತು. ಭರ್ಜರಿ 159 ರನ್ ಗಳನ್ನು ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ರೋಹಿತ್ ಶರ್ಮಾ ಅವರು ಪಂದ್ಯಶ್ರೇಷ್ಠ ಪುರಸ್ಕಾರ ಪಡೆದರು.

ಪ್ರಾರಂಭದಲ್ಲಿ ರೋಹಿತ್ ಶರ್ಮಾ ಅವರ ಭರ್ಜರಿ 159 ರನ್, ಕೆ.ಎಲ್. ರಾಹುಲ್ (102) ಅವರ ಅಮೋಘ ಶತಕ, ಮಧ್ಯಮ ಕ್ರಮಾಂಕದಲ್ಲಿ ಸಿಡಿದ ರಿಷಭ್ ಪಂತ್ (16 ಎಸೆತೆಗಳಲ್ಲಿ 39) ಆಟ ಹಾಗೂ ಶ್ರೇಯಸ್ ಅಯ್ಯರ್ (53) ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಭಾರತ ನಿಗದಿತ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು.

ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಗೆ ಆರಂಭಿಕ ಆಟಗಾರರಾದ ಎವಿನ್ ಲೆವಿಸ್ (30) ಹಾಗೂ ಕಳೆದ ಪಂದ್ಯದ ಹೀರೋ ವಿಕೆಟ್ ಕೀಪರ್ ಶೈ ಹೋಪ್ (78) ಎಚ್ಚರಿಕೆಯ ಆರಂಭ ಒದಗಿಸಿದರು. ಆದರೆ ತಂಡದ ಮೊತ್ತ 61 ಆಗಿದ್ದಾಗ ಲೆವಿಸ್ ಅವರು ಶಾರ್ದೂಲ್ ಠಾಕೂರ್ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಕಳೆದ ಪಂದ್ಯದ ಗೆಲುವಿನ ರೂವಾರಿ ಹೆಟ್ ಮೇರ್ (04) ರನೌಟಾದರು, ಇದರ ಬೆನ್ನಿಗೇ ರೋಸ್ಟನ್ ಚೇಸ್ (04) ಅವರನ್ನು ಜಡೇಜಾ ಬೌಲ್ಡ್ ಮಾಡಿದರು. ಈ ಹಂತದಲ್ಲಿ ಇಂಡೀಸ್ ಪರಿಸ್ಥಿತಿ 86ಕ್ಕೆ 3 ಆಗಿತ್ತು.


ಈ ಹಂತದಲ್ಲಿ ಹೋಪ್ ಅವರ ಜೊತೆ ಸೇರಿದ ನಿಕೊಲಸ್ ಪೂರಣ್ (75) ಬಿರುಸಿನ ಆಟಕ್ಕೆ ಕೈಹಾಕಿದರು. ಒಂದೆಡೆ ಹೋಪ್ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದ್ದರೆ ಇನ್ನೊಂದೆಡೆ ಪೂರಣ್ ಮುನ್ನುಗ್ಗಿ ಬಾರಿಸಲಾರಂಭಿಸಿದರು. ಈ ಜೋಡಿ ನಾಲ್ಕನೇ ವಿಕೆಟಿಗೆ ಬರೋಬ್ಬರಿ 106 ರನ್ ಗಳ ಜೊತೆಯಾಟ ನೀಡಿತು.

Advertisement

ಈ ಹಂತದಲ್ಲಿ ವೆಸ್ಟ್ ಇಂಡೀಸ್ ಗೆಲ್ಲುವ ಅವಕಾಶ ಕಾಣಿಸುತ್ತಿತ್ತು. ಆದರೆ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿ 75 ರನ್ ಗಳಿಸಿದ್ದ ಪೂರಣ್ ಅವರನ್ನು ಮಹಮ್ಮದ್ ಶಮಿ ಔಟ್ ಮಾಡುವುದರೊಂದಿಗೆ ಈ ಜೋಡಿ ಬೇರ್ಪಟ್ಟಿತು ಮತ್ತು ಕೆರಿಬಿಯನ್ನರ ಗೆಲುವಿನ ಆಸೆಯೂ ಸಹ ಕ್ಷೀಣಿಸಿತು. ಪೂರಣ್ ಔಟಾದ ಬಳಿಕ ಕ್ರೀಸಿಗಿಳಿದ ನಾಯಕ ಕೈರನ್ ಪೊಲಾರ್ಡ್ ಸೊನ್ನೆ ಸುತ್ತಿ ಔಟಾದರು. ಈ ಹಂತದಲ್ಲಿ ಮಹಮ್ಮದ್ ಶಮಿ ಅವರಿಗೆ ಹ್ಯಾಟ್ರಿಕ್ ವಿಕೆಟ್ ಸಾಧಿಸುವ ಅವಕಾಶವಿತ್ತು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವೆಸ್ಟ್ ಇಂಡೀಸ್ ನಾಯಕ ಕೈರನ್ ಪೊಲಾರ್ಡ್ ಇಬ್ಬರೂ ಗೋಲ್ಡನ್ ಡಕ್ ಔಟಾಗಿದ್ದು ಈ ಪಂದ್ಯದ ವಿಶೇಷವಾಗಿತ್ತು.


ಬಳಿಕ ತಂಡದ ಮೊತ್ತ 210 ಆಗುವಷ್ಟರಲ್ಲಿ ಶತಕದತ್ತ ಮುನ್ನುಗ್ಗುತ್ತಿದ್ದ ಶೈನ್ ಹೋಪ್ (78) ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟಾದರು ಇದರ ಬೆನ್ನಿಗೇ ಹೋಲ್ಡರ್ (11) ಸ್ಟಂಪ್ ಔಟಾದರು, ನಂತರ ಜೋಸೆಫ್ (0) ವಿಕೆಟ್ ಬೀಳುವುದರೊಂದಿಗೆ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.

ಬಳಿಕ 9ನೇ ವಿಕೆಟಿಗೆ ಕೀಮೋ ಪೌಲ್ (46) ಮತ್ತು ಕ್ಯಾರಿ ಪೀರೆ (21) ಸೇರಿಕೊಂಡು ಹೋರಾಟ ಸಂಘಟಿಸಿದಾದರೂ ಅದು ವೆಸ್ಟ್ ಇಂಡೀಸ್ ಸೋಲಿನ ಅಂತರವನ್ನು ಕಡಿಮೆಗೊಳಿಸಲಷ್ಟೇ ಸಹಾಯಕವಾಯ್ತು. ಇವರಿಬ್ಬರು 50 ರನ್ ಗಳ ಜೊತೆಯಾಟ ನೀಡಿದರು. ಕೊನೆಯದಾಗಿ ಕೀಮೋ ಪೌಲ್ ಅರ್ಧಶತಕ ವಂಚಿತನಾಗಿ ಔಟಾಗುವುದರೊಂದಿಗೆ ಭಾರತ 107 ರನ್ ಗಳಿಂದ ಜಯಶಾಲಿಯಾಯಿತು.

ಹ್ಯಾಟ್ರಿಕ್ ವೀರ ಕುಲದೀಪ್ ಯಾದವ್ ಸೇರಿದಂತೆ ಭಾರತದ ಬೌಲಿಂಗ್ ದಾಳಿ ಶಿಸ್ತಿನಿಂದ ಕೂಡಿತ್ತು. ಯಾದವ್ ಮತ್ತು ಶಮಿ ತಲಾ 03 ವಿಕೆಟ್ ಪಡೆದು ಮಿಂಚಿದರೆ, ರವೀಂದ್ರ ಜಡೇಜಾ 02 ವಿಕೆಟ್ ಪಡೆದರು ಇನ್ನೊಂದು ವಿಕೆಟ್ ಶಾರ್ದೂಲ್ ಠಾಕೂರ್ ಪಾಲಾಯಿತು. ಹೈಟ್ ಮೇರ್ ರನೌಟಾದರು.

Advertisement

Udayavani is now on Telegram. Click here to join our channel and stay updated with the latest news.

Next