Advertisement

ಫರ್ಸ್ಟ್ ಟೆಸ್ಟ್: ಬುಮ್ರಾ ಘಾತಕ ದಾಳಿ ; ಭಾರತಕ್ಕೆ 318 ರನ್ನುಗಳ ಭರ್ಜರಿ ಜಯ

09:52 AM Aug 28, 2019 | Team Udayavani |

ನಾರ್ತ್ ಸೌಂಡ್ (ಆ್ಯಂಟುಗುವಾ): ಐಸಿಸಿ ವಿಶ್ವ ಚಾಂಪಿಯನ್ ಶಿಪ್ ನಡಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 318 ರನ್ನುಗಳ ಭರ್ಜರಿ ಜಯ ದಾಖಲಿಸಿದೆ.

Advertisement

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 343 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ಗೆಲುವಿಗೆ 419 ರನ್ನುಗಳ ಕಠಿಣ ಗುರಿ ನಿಗದಿಯಾಗಿತ್ತು. ಆದರೆ ವೇಗಿ ಜಸ್ಪೀತ್ ಬುಮ್ರಾ ಅವರ ಘಾತಕ ದಾಳಿಗೆ ಪಟಪಟನೆ ಉದುರಿದ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳು ಯಾವುದೇ ಹಂತದಲ್ಲಿ ಪ್ರತಿರೋಧವನ್ನೇ ತೋರಲಿಲ್ಲ. ಅಂತಿಮವಾಗಿ ವೆಸ್ಟ್ ವಿಂಡೀಸ್ 100 ರನ್ನುಗಳಿಗೆ ಆಲೌಟ್ ಆಗುವ ಮೂಲಕ ತನ್ನ ಹೋರಾಟವನ್ನು ಮುಗಿಸಿತು.

ಎರಡನೇ ಇನ್ನಿಂಗ್ಸ್ ನ ತನ್ನ ಮಾರಕ ಸ್ಪೆಲ್ ನಲ್ಲಿ ವೇಗಿ ಬುಮ್ರಾ ಅವರು 5 ವಿಕೆಟ್ ಗಳನ್ನು ಪಡೆದು ವೆಸ್ಟ್ ಇಂಡೀಸ್ ನ ಬ್ಯಾಟಿಂಗ್ ಸರದಿಯನ್ನು ಚಿಂದಿ ಉಡಾಯಿಸಿದರು.

ಎರಡನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ (102) ದಾಖಲಿಸಿದ ಮತ್ತು ಪ್ರಥಮ ಇನ್ನಿಂಗ್ಸ್ ನಲ್ಲಿ 81 ರನ್ ಸಿಡಿಸಿದ್ದ ಅಜಿಂಕ್ಯ ರಹಾನೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪ್ರಥಮ ಇನ್ನಿಂಗ್ಸ್ ನಲ್ಲಿ ತೋರಿಸಿದ ಬ್ಯಾಟಿಂಗ್ ಛಾತಿಯಷ್ಟನ್ನೂ ಸಹ ಎರಡನೇ ಇನ್ನಿಂಗ್ಸ್ ನಲ್ಲಿ ತೋರಿಸಲು ಕೆರಿಬಿಯನ್ ಬ್ಯಾಟ್ಸ್ ಮನ್ ಗಳು ವಿಫಲರಾದರು. ವೆಸ್ಟ್ ವಿಂಡೀಸ್ ಬ್ಯಾಟಿಂಗ್ ಸರದಿಯಲ್ಲಿ ರೋಸ್ಟನ್ ಚೇಸ್ (12) ಮತ್ತು ಕೆಮರ್ ರೋಚ್ (38) ಮತ್ತು ಮಿಗ್ವೆಲ್ ಕಮಿನ್ಸ್ ( ಔಟಾಗದೆ 19) ಮಾತ್ರವೇ ಎರಡಂಕೆ ಮೊತ್ತವನ್ನು ದಾಟಿದರು. ಮೊದಲ ಇನ್ನಿಂಗ್ಸ್ ನಲ್ಲೂ ಸಹ ಚೇಸ್ (48) ಅವರದ್ದೇ ಅಧಿಕ ಮೊತ್ತವಾಗಿತ್ತು.

Advertisement

ಭಾರತದ ಮೊದಲ ಇನ್ನಿಂಗ್ಸ್ ಬೌಲಿಂಗ್ ನಲ್ಲಿ ವೇಗಿ ಇಶಾಂತ್ ಶರ್ಮಾ 5 ವಿಕೆಟ್ ಕಿತ್ತು ಗಮನ ಸೆಳೆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ವೇಗಿ ಬುಮ್ರಾ 5 ವಿಕೆಟ್ ಕಿತ್ತು ವಿಜೃಂಭಿಸಿದರು. ಇಶಾಂತ್ ಶರ್ಮಾ 3 ವಿಕೆಟ್ ಮತ್ತು ಮಹಮ್ಮದ್ ಶಮಿ 2 ವಿಕೆಟ್ ಪಡೆದುಕೊಂಡರು.

ಮಿಂಚಿದ ರಹಾನೆ ; ಶತಕ ವಂಚಿತ ಹನುಮ ವಿಹಾರಿ


ಭಾರತದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ನಲ್ಲಿ ನಾಯಕ ವಿರಾಟ್ ಕೊಹ್ಲಿ (51), ಶತಕವೀರ ಅಜಿಂಕ್ಯ ರಹಾನೆ (102) ಮತ್ತು ಚೊಚ್ಚಲ ಶತಕ ವಂಚಿತ ಹನುಮ ವಿಹಾರಿ (93) ಈ ಮೂವರ ಬ್ಯಾಟಿಂಗ್ ಸಾಹಸದಿಂದ 343 ರನ್ನುಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ಚೊಚ್ಚಲ ಶತಕದ ನಿರೀಕ್ಷೆಯಲ್ಲಿದ್ದ ಯುವ ಪ್ರತಿಭೆ ಹನುಮ ವಿಹಾರಿ 93 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ನಿರಾಶೆ ಅನುಭವಿಸಿದರು. ವಿಹಾರಿ ಔಟಾದೊಡನೆ ನಾಯಕ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು.

ವೆಸ್ಟ್ ಇಂಡೀಸ್ ಬೌಲರ್ ಗಳ ಪರ ರೋಸ್ಟನ್ ಚೇಸ್ 4 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲೂ ಚೇಸ್ 2 ವಿಕೆಟ್ ಪಡೆದಿದ್ದರು.

ಭಾರತ ಪ್ರಥಮ ಇನ್ನಿಂಗ್ಸ್ : 297ಕ್ಕೆ ಆಲೌಟ್

ರಾಹುಲ್ 44, ರಹಾನೆ 81, ಜಡೇಜಾ 58 ; ರೋಚ್ 4 ವಿಕೆಟ್, ಗೇಬ್ರಿಯಲ್ 3 ವಿಕೆಟ್

ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್: 222ಕ್ಕೆ ಆಲೌಟ್

ರೋಸ್ಟನ್ ಚೇಸ್ 48, ಹೋಲ್ಡರ್ 39, ಹೈಟ್ಮೇರ್ 35, ಹೋಪ್ 24 ; ಇಶಾಂತ್ ಶರ್ಮಾ 5 ವಿಕೆಟ್

ಭಾರತ ದ್ವಿತೀಯ ಇನ್ನಿಂಗ್ಸ್ : 343/7 ಇನ್ನಿಂಗ್ಸ್ ಡಿಕ್ಲೇರ್ಡ್

ರಹಾನೆ 102, ಹನುಮ ವಿಹಾರಿ 93, ವಿರಾಟ್ ಕೊಹ್ಲಿ 51 ; ರೋಸ್ಟನ್ ಚೇಸ್ 4 ವಿಕೆಟ್

ವೆಸ್ಟ್ ಇಂಡೀಸ್ ದ್ವಿತೀಯ ಇನ್ನಿಂಗ್ಸ್: 100ಕ್ಕೆ ಆಲೌಟ್

ರೋಚ್ 38, ಮಿಗ್ವೆಲ್ ಕಮಿನ್ಸ್ ( ಔಟಾಗದೆ 19) ; ಜಸ್ಪ್ರೀತ್ ಬುಮ್ರಾ 5 ವಿಕೆಟ್

ಫಲಿತಾಂಶ: ಭಾರತಕ್ಕೆ 318 ರನ್ನುಗಳ ಜಯ



Advertisement

Udayavani is now on Telegram. Click here to join our channel and stay updated with the latest news.

Next