Advertisement
ಏಕದಿನ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮೆರೆದಿದ್ದ ವಿಂಡೀಸ್ ಕಡೆಕಡೆಗೆ ವೈಫಲ್ಯ ಅನುಭವಿಸಿತ್ತು. ಅದನ್ನು ಟಿ20ಯಲ್ಲೂ ಮುಂದುವರಿಸಿದೆ. ಟಾಸ್ ಸೋತು ಕ್ಷೇತ್ರರಕ್ಷಣೆ ಆಯ್ದುಕೊಂಡರೂ ಅದರ ಹಣೆಬರಹವೇನು ಬದಲಾಗಲಿಲ್ಲ. ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡ ರೋಹಿತ್ ಬರೀ 61 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ನೆರವಿನಿಂದ 111 ರನ್ ಬಾರಿಸಿ ಹಲವು ದಾಖಲೆಗಳೊಂದಿಗೆ ಸಿಂಗಾರಗೊಂಡರು. ಧವನ್ ನಿಧಾನಗತಿಯಲ್ಲಿ 43 ರನ್ ಬಾರಿಸಿದರೆ, ರಾಹುಲ್ ಸ್ಫೋಟಕ 26 ರನ್ ಚಚ್ಚಿದರು. ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 195 ರನ್ ಗಳಿಸಿತು.
ಭಾರತ-ವೆಸ್ಟ್‌ಇಂಡೀಸ್
* ರೋಹಿತ್ ಶರ್ಮ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಲ್ಕು ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಮೂರು ಶತಕ ಹೊಡೆದಿರುವ ಕಾಲಿನ್ ಮುನ್ರೊ ಎರಡನೇ ಸ್ಥಾನದಲ್ಲಿದ್ದಾರೆ. ಇತರ ಯಾವುದೇ ಆಟಗಾರ ಎರಡಕ್ಕಿಂತ ಹೆಚ್ಚಿನ ಶತಕ ಹೊಡೆದಿಲ್ಲ.
* ಟಿ20ಯಲ್ಲಿ ಇದು ರೋಹಿತ್ ಅವರ ಆರನೇ ಶತಕವಾಗಿದೆ. ಕೇವಲ ನಾಲ್ಕು ಆಟಗಾರರು ಗರಿಷ್ಠ ಶತಕ ಹೊಡೆದಿದ್ದಾರೆ. 21 ಶತಕ ಹೊಡೆದಿರುವ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಬ್ರೆಂಡನ್ ಮೆಕಲಮ್, ಲ್ಯೂಕ್ ರೈಟ್ ಮತ್ತು ಮೈಕಲ್ ಕ್ಲಿಂಗರ್ ತಲಾ ಏಳು ಶತಕ ಹೊಡೆದಿದ್ದಾರೆ. ನಾಲ್ಕು ಅಂತಾರಾಷ್ಟ್ರೀಯ ಶತಕ ಸಹಿತ ಇನ್ನೆರಡು ಶತಕಗಳು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಐಪಿಎಲ್‌ನಲ್ಲಿ ಬಂದಿವೆ.
* ಟ್ವೆಂಟಿ20ರಲ್ಲಿ ರೋಹಿತ್ 50 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು 19 ಬಾರಿ ದಾಖಲಿಸಿದ್ದಾರೆ. ಈ ಸಾಧನೆಯಲ್ಲಿ ಅವರು ಕೊಹ್ಲಿ (18 ಸಲ) ಅವರನ್ನು ಹಿಂದಿಕ್ಕಿದ್ದಾರೆ.
* ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ 2203 ರನ್ ಪೇರಿಸಿ ಕೊಹ್ಲಿ, ಮೆಕಲಮ್ ಮತ್ತು ಶೋಯಿಬ್ ಮಲಿಕ್ ಅವರನ್ನು ಹಿಂದಿಕ್ಕಿದ್ದಾರೆ.
* ರೋಹಿತ್ 2018ರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾರೆ 69 ಸಿಕ್ಸರ್ ಬಾರಿಸಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಇದು ಬ್ಯಾಟ್ಸ್‌ಮನ್ ಓರ್ವರ ಗರಿಷ್ಠ ಸಾಧನೆಯಾಗಿದೆ. ರೋಹಿತ್ ಕಳೆದ ವರ್ಷ 65 ಸಿಕ್ಸರ್ ಬಾರಿಸಿದ್ದು ಈ ಬಾರಿ ಅದನ್ನು ಮುರಿದಿದ್ದಾರೆ. ರೋಹಿತ್ ಈ ವರ್ಷ ಏಕದಿನದಲ್ಲಿ 39, ಟ್ವೆಂಟಿ20ಯಲ್ಲಿ 29 ಮತ್ತು ಟೆಸ್ಟ್‌ನಲ್ಲಿ ಒಂದು ಸಿಕ್ಸರ್ ಬಾರಿಸಿದ್ದಾರೆ.
* ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಮತ್ತು ಧವನ್ ಜತೆಯಾಗಿ 1268 ರನ್ ಹೊಡೆದಿದ್ದಾರೆ. ಇದು ಜೋಡಿಯಾಗಿ ಗರಿಷ್ಠ ಸಾಧನೆಯಾಗಿದೆ. ಈ ಮೂಲಕ ಡೇವಿಡ್ ವಾರ್ನರ್ ಮತ್ತು ಶೇನ್ ವಾಟ್ಸನ್ ಜತೆಯಾಗಿ 1154 ರನ್ ಪೇರಿಸಿದ ಸಾಧನೆಯನ್ನು ಹಿಂದಿಕ್ಕಿದರು.