ಹುಬ್ಬಳ್ಳಿ: ಶ್ರೀಲಂಕಾ ‘ಎ’ ವಿರುದ್ಧದ ದ್ವಿತೀಯ ಟೆಸ್ಟ್‌ನ ಎರಡನೇ ದಿನಾಂತ್ಯಕ್ಕೆ ಭಾರತ ‘ಎ’ ತಂಡ 273 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.
ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡ ಅನ್ಮೋಲ್ಪ್ರೀತ್ ಸಿಂಗ್ (60 ರನ್), ಶ್ರೀಕರ್ ಭರತ್ (60 ರನ್) ಹಾಗೂ ಸಿದ್ದೇಶ್ ಲಾಡ್ (58 ರನ್) ಅರ್ಧ ಶತಕಗಳ ನೆರವಿನಿಂದ 46 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿದೆ. ಮೊದಲ ಇನಿಂಗ್ಸ್ ಮುನ್ನಡೆ 57 ಸೇರಿ ಒಟ್ಟಾರೆ 273 ರನ್ ಮುನ್ನಡೆ ಪಡೆದುಕೊಂಡಿದೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಶ್ರೀಕರ್ 2ನೇ ಇನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿ ಗಮನ ಸೆಳೆದರು.
ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಅಭಿಮನ್ಯು ಈಶ್ವರನ್ 3 ರನ್‌ಗೆ ವಿಕೆಟ್ ಒಪ್ಪಿಸಿದರೆ, ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ನಾಯಕ ಪ್ರಿಯಾಂಕ್ ಪಾಂಚಲ್ 15 ರನ್ ಗಳಿಸಿ ನಿರ್ಗಮಿಸಿದರು. ವಿಶ್ವ ಫರ್ನಾಂಡೊ ಉಭಯ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದು ಆಘಾತ ನೀಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕ್ರೀಸ್ ಕಚ್ಚಿ ನಿಂತಿದ್ದರಿಂದ ತಂಡದ ಮೊತ್ತ ಹೆಚ್ಚಿತು. ಶಿವಂ ದುಬೆ (5 ರನ್) ಹಾಗೂ ಆದಿತ್ಯ ಸರ್ವಟೆ (5 ರನ್) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೂ 2 ದಿನಗಳ ಆಟವಿದ್ದು, ಟೀಮ್ ಇಂಡಿಯಾ ಪರ ಜಯಂತ್ ಯಾದವ್, ಸಂದೀಪ್ ವಾರಿಯರ್, ಇಶಾನ್ ಪೊರೆಲ್ ಬ್ಯಾಟಿಂಗ್ ಮಾಡಬೇಕಿದೆ.
ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ 269, ದ್ವಿತೀಯ ಇನಿಂಗ್ಸ್ 46 ಓವರ್‌ಗೆ 216/6 (ಅನ್ಮೋಲ್ ಪ್ರೀತ್ ಸಿಂಗ್ 60, ಶ್ರೀಕರ್ ಭರತ್ 60, ಲಕ್ಷನ್ ಸಂದಕನ್ 48ಕ್ಕೆ2), ಶ್ರೀಲಂಕಾ ಮೊದಲ ಇನಿಂಗ್ಸ್ 212 ಆಲೌಟ್ (ಕಮಿಂದು ಮೆಂಡಿಸ್ 68, ಜಯಂತ್‌ಯಾದವ್ 24ಕ್ಕೆ3)
-ವಿಶ್ವನಾಥ ಕೋಟಿ