Advertisement

ಲಿಯಾನ್‌ ಸ್ಪಿನ್‌ ಸುಳಿಯಲ್ಲಿ ಒದ್ದಾಡಿದ ಭಾರತ: ಗೆಲುವಿನ ನಿರೀಕ್ಷೆಯಲ್ಲಿ ಆಸ್ಟ್ರೇಲಿಯ

11:40 PM Mar 02, 2023 | Team Udayavani |

ಇಂದೋರ್‌: ನಥನ್‌ ಲಿಯಾನ್‌ ಅವರ ಮಾರಕ ಸ್ಪಿನ್‌ ಸುಳಿಯಲ್ಲಿ ಒದ್ದಾಡಿದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 163 ರನ್ನಿಗೆ ಆಲೌಟಾಗಿದ್ದು ತವರಿನಲ್ಲಿ ಅಪರೂಪದ ಸೋಲಿನ ಹಾದಿಯಲ್ಲಿದೆ. ಚೇತೇಶ್ವರ ಪೂಜಾರ ತಾಳ್ಮೆಯ ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸುವ ಪ್ರಯತ್ನಪಟ್ಟರೂ ಲಿಯಾನ್‌ ಉಗ್ರ ರೂಪ ತಾಳಿ ಭಾರತದ ಎಲ್ಲ ನಿರೀಕ್ಷೆಗಳನ್ನು ನುಚುjನೂರು ಮಾಡಿದರು. ಇದರಿಂದಾಗಿ ಮೂರನೇ ಟೆಸ್ಟ್‌ ಕೂಡ ಮೂರೇ ದಿನದಲ್ಲಿ ಮುಗಿಯುವುದು ಖಚಿತವಾಗಿದೆ.

Advertisement

ಈ ಮೊದಲು ಭಾರತ ಆಸ್ಟ್ರೇಲಿಯದ ಮೊದಲ ಇನ್ನಿಂಗ್ಸ್‌ನ ಆಟವನ್ನು ಬೇಗನೇ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಉಮೇಶ್‌ ಯಾದವ್‌ ಮತ್ತು ಸ್ಪಿನ್‌ ದಾಳಿಗೆ ಕುಸಿದ ಪ್ರವಾಸಿ ತಂಡ 197 ರನ್ನಿಗೆ ಸರ್ವಪತನ ಕಂಡಿತು. ಮೊದಲ ದಿನ ಉಸ್ಮಾನ್‌ ಖ್ವಾಜಾ ಅವರ ಉತ್ತಮ ಆಟದಿಂದಾಗಿ ಆಸ್ಟ್ರೇಲಿಯ 4 ವಿಕೆಟಿಗೆ 156 ರನ್‌ ಪೇರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಇದರೆ ದ್ವಿತೀಯ ದಿನ ವೇಗ ಮತ್ತು ಸ್ಪಿನ್‌ ದಾಳಿಗೆ ಕುಸಿದ ತಂಡ 41 ರನ್‌ ಗಳಿಸುವಷ್ಟರಲ್ಲಿ ಇನ್ನುಳಿದ ಆರು ವಿಕೆಟನ್ನು ಕಳೆದುಕೊಂಡಿತು. ಉಮೇಶ್‌ ಯಾದವ್‌ 3 ವಿಕೆಟ್‌ ಹಾರಿಸಿದ್ದರು.

ಮೊದಲ ಇನ್ನಿಂಗ್ಸ್‌ನಲ್ಲಿ 88 ರನ್‌ ಹಿನ್ನಡೆ ಪಡೆದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ ಸ್ಪಿನ್‌ ಮೋಡಿಗೆ ಶರಣಾದ ಕಾರಣ ತವರಿನಲ್ಲಿ ಸೋಲಿಗೆ ಸುಳಿಗೆ ಸಿಲುಕಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ 76 ರನ್‌ ಗಳಿಸಿದರೆ ಭಾರತದಲ್ಲಿ ಅಪರೂಪದ ಗೆಲುವು ದಾಖಲಿಸುವ ಅವಕಾಶ ಪಡೆದಿದೆ.

10 ವರ್ಷಗಳಲ್ಲಿ 2 ಸೋಲು
ಭಾರತ ಕಳೆದ 10 ವರ್ಷಗಳಲ್ಲಿ ತವರಿನಲ್ಲಿ ಕೇವಲ ಎರಡು ಟೆಸ್‌‌rಗಳಲ್ಲಿ ಸೋಲನ್ನು ಕಂಡಿದೆ. 2021ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ ಹಾಗೂ 2017ರಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರೀ ಅಂತರದಿಂದ ಸೋಲನ್ನು ಕಂಡಿದೆ. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ 333 ರನ್ನುಗಳಿಂದ ಜಯಭೇರಿ ಬಾರಿಸಿದ್ದರೆ ಇಂಗ್ಲೆಂಡ್‌ ತಂಡವು ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ 227 ರನ್ನುಗಳಿಂದ ಭಾರತವನ್ನು ಸೋಲಿಸಿತ್ತು.

ಪೂಜಾರ ಅರ್ಧಶತಕ
ಇಲ್ಲಿನ ಹೋಳ್ಕರ್‌ ಕ್ರೀಡಾಂಗಣ ದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮತ್ತೆ ಲಿಯಾನ್‌ ಅವರ ಸ್ಪಿನ್‌ ದಾಳಿಗೆ ಸಂಪೂರ್ಣ ಶರಣಾಯಿತು. ಆದರೆ ಪೂಜಾರ ಅವರ ತಾಳ್ಮೆಯ ಆಟದಿಂದಾಗಿ ಆತಿಥೇಯರ ಮೊತ್ತ 150ರ ಗಡಿ ದಾಟಿತು. ಲಿಯಾನ್‌ ಅವರ ಸ್ಪಿನ್‌ ಸುಳಿಯಲ್ಲಿ ಸಿಲುಕಿದ ಅಗ್ರಕ್ರಮಾಂಕದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗದೇ ಒದ್ದಾಡಿ ವಿಕೆಟ್‌ ಒಪ್ಪಿಸಿದರು. 142 ಎಸೆತ ಎದುರಿಸಿದ ಪೂಜಾರ 59 ರನ್‌ ಗಳಿಸಿ ಗಮನ ಸೆಳೆದರು. ಅವರು ಸ್ಟೀವನ್‌ ಸ್ಮಿತ್‌ ಅವರ ಅದ್ಭುತ ಕ್ಯಾಚ್‌ನಿಂದಾಗಿ ಔಟಾಗಬೇಕಾಯಿತು. . ಅವರಿಗೆ ಶ್ರೇಯಸ್‌ ಅಯ್ಯರ್‌ ಸ್ವಲ್ಪಮಟ್ಟಿಗೆ ನೆರವಿಗೆ ನಿಂತರು.

Advertisement

ಸಿರಾಜ್‌ ಅವರು ಕ್ಲೀನ್‌ಬೌಲ್ಡ್‌ ಆಗುವು ದರೊಂದಿಗೆ ಭಾರತದ ಆಟಕ್ಕೆ ಲಿಯಾನ್‌ ಅಂತ್ಯ ಹಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಹಾರಿಸಿದ್ದ ಲಿಯಾನ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ 64 ರನ್ನಿಗೆ 8 ವಿಕೆಟ್‌ ಕಿತ್ತು ಸಂಭ್ರಮಿಸಿದರು.

ಈಗಾಗಲೇ ಬಾರ್ಡರ್‌-ಗಾವಸ್ಕರ್‌ ಟ್ರೋಫಿಯನ್ನು ಉಳಿಸಿ ಕೊಂಡಿರುವ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲಿ ಗೇರಬೇಕಾದರೆ ಇನ್ನೊಂದು ಪಂದ್ಯದಲ್ಲಿ ಗೆಲ್ಲಬೇಕಾಗಿದೆ. ಫೈನಲ್‌ ಓವಲ್‌ನಲ್ಲಿ ಜೂ. 7ರಿಂದ ಆರಂಭವಾಗಲಿದೆ.

ಲಿಯಾನ್‌ ದಾಖಲೆ
ಆತಿಥೇಯರ ಬ್ಯಾಟಿಂಗ್‌ ಕುಸಿತಕ್ಕೆ ಕಾರಣಕರ್ತರಾದ ಲಿಯಾನ್‌ ಭಾರತ ವಿರುದ್ಧ ಗರಿಷ್ಠ ಬಾರಿ 5 ವಿಕೆಟ್‌ಗಳ ಗೊಂಚಲನ್ನು ಪಡೆದ ದಾಖಲೆ ನಿರ್ಮಿಸಿದರು. ಅವರು 9ನೇ ಬಾರಿ ಈ ಸಾಧನೆ ಮಾಡಿದ್ದರೆ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ ಎಂಟು ಬಾರಿ 5 ವಿಕೆಟ್‌ಗಳ ಗೊಂಚಲನ್ನು ಪಡೆದಿದ್ದರು. ಬಾರ್ಡರ್‌-ಗಾವಸ್ಕರ್‌ ಟ್ರೋಫಿಯಲ್ಲಿ ಗರಿಷ್ಠ ವಿಕೆಟ್‌ ಪಡೆದ ಅನಿಲ್‌ ಕುಂಬ್ಳೆ ಅವರ ಹೆಸರಲ್ಲಿದ್ದ ದಾಖಲೆಯನ್ನು ಲಿಯಾನ್‌ ಇದೀಗ ಅಳಿಸಿ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next