Advertisement

India-Australia: ಟೆಸ್ಟ್‌  ವಿಶ್ವಕಪ್‌ ಫೈನಲ್‌ ಓವರ್‌ ಟು ಓವಲ್‌…

11:47 PM Jun 06, 2023 | Team Udayavani |

ಲಂಡನ್‌: ಎರಡು ವರ್ಷಗಳ ಅವಧಿಯ ಎರಡನೇ ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ತೆರೆ ಬೀಳುವ ಹೊತ್ತು ಸಮೀಪಿಸಿದೆ. ಲಂಡನ್‌ನ ಐತಿಹಾ ಸಿಕ “ಕೆನ್ನಿಂಗ್ಟನ್‌ ಓವಲ್‌’ ಅಂಗಳದಲ್ಲಿ ಬುಧವಾರ ದಿಂದ ಭಾರತ-ಆಸ್ಟ್ರೇಲಿಯ ತಂಡಗಳ ನಡುವೆ ದೊಡ್ಡ ಮಟ್ಟದ ಹಣಾಹಣಿ ನಡೆಯಲಿದೆ.

Advertisement

ಇಲ್ಲಿಯ ತನಕ ಐಪಿಎಲ್‌ ಗುಂಗಿನಲ್ಲಿ ತೇಲಾಡುತ್ತಿದ್ದವರೆಲ್ಲ 5 ದಿನಗಳ ಕ್ರಿಕೆಟ್‌ ಕದನವನ್ನು ಕಣ್ತುಂಬಿಸಿಕೊಳ್ಳುವ ಕಾಲವಿದು. ಟೆಸ್ಟ್‌ ಕ್ರಿಕೆಟ್‌ನಲ್ಲೂ ಚುಟುಕು ಕ್ರಿಕೆಟ್‌ನಷ್ಟೇ ರೋಚಕತೆ, ಕೌತುಕ, ಥ್ರಿಲ್‌… ಎಲ್ಲವೂ ಇದೆ ಎಂಬುದನ್ನು ನಿರೂಪಿಸಲು ಇತ್ತಂಡಗಳಿಗೆ ಸಿಕ್ಕಿರುವ ಅಪೂರ್ವ ಅವಕಾಶವೂ ಇದಾಗಿದೆ.

ಭಾರತಕ್ಕೆ ಇದು ಸತತ 2ನೇ ಫೈನಲ್‌. ಕಳೆದ ಸಲ ನ್ಯೂಜಿಲ್ಯಾಂಡ್‌ಗೆ ಶರಣಾಗುವ ಮೂಲಕ “ಗದೆ’ಯಿಂದ ವಂಚಿತವಾಗಿತ್ತು. ಈ ಬಾರಿ ಕಾಂಗರೂ ಮೇಲೆ ಗದಾಪ್ರಹಾರ ಮಾಡಲು ಯಶಸ್ವಿಯಾದೀತೇ ಎಂಬುದು ಎಲ್ಲರ ನಿರೀಕ್ಷೆ. ಇನ್ನೊಂದೆಡೆ ಆಸ್ಟ್ರೇಲಿಯಕ್ಕೆ ಇದು ಮೊದಲ ಫೈನಲ್‌. ಮುಂದೆ ಇಂಗ್ಲೆಂಡ್‌ ನೆಲದಲ್ಲೇ ಆ್ಯಶಸ್‌ ಸರಣಿಯನ್ನು ಆಡಲಿದೆ. ಹೀಗಾಗಿ ಭಾರತದೆದುರಿನ ಫೈನಲ್‌ ಆಸೀಸ್‌ ಪಾಲಿಗೆ ಪ್ರತಿಷ್ಠೆಯ ಕದನವೂ ಆಗಿದೆ.

ಐಸಿಸಿ ಟ್ರೋಫಿಗಳ ಬರಗಾಲ
ಭಾರತ ಸದ್ಯ ಐಸಿಸಿ ಟ್ರೋಫಿಗಳ ತೀವ್ರ ಬರಗಾಲದಲ್ಲಿದೆ. 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿದ್ದೇ ಕೊನೆ, ಅನಂತರ ಟೀಮ್‌ ಇಂಡಿಯಾ ಐಸಿಸಿ ಪ್ರಶಸ್ತಿಗಳ ನಂಟನ್ನೇ ಕಡಿದುಕೊಂಡಿದೆ. ಈ ಒಂದು ದಶಕದಲ್ಲಿ ಐಸಿಸಿ ಸರಣಿಯ 3 ಫೈನಲ್‌ಗ‌ಳನ್ನು ಸೋತರೆ, 4 ಸಲ ಸೆಮಿಫೈನಲ್‌ನಲ್ಲೇ ಆಟ ಮುಗಿಸಿದೆ. 2021ರ ಟಿ20 ವಿಶ್ವಕಪ್‌ನಿಂದ ಬಹಳ ಬೇಗ ನಿರ್ಗಮಿಸಿತ್ತು.

ವಿಶ್ವಕಪ್‌ ಟೆಸ್ಟ್‌ ಆವೃತ್ತದ 6 ಸರಣಿಗಳಲ್ಲಿ ಭಾರತ ಕೇವಲ ಒಂದರಲ್ಲಷ್ಟೇ ಸೋತಿತ್ತು. ಅದು ದಕ್ಷಿಣ ಆಫ್ರಿಕಾ ಎದುರಿನ ವಿದೇಶಿ ಸರಣಿ.

Advertisement

ಆಸ್ಟ್ರೇಲಿಯದಲ್ಲಿ ಸರಣಿ ಜಯಿಸಿದ್ದು, ಇಂಗ್ಲೆಂಡ್‌ನ‌ಲ್ಲಿ ಡ್ರಾ ಸಾಧಿಸಿದ್ದೆಲ್ಲ ಈ ಅವಧಿಯಲ್ಲಿ ಭಾರತ ದಾಖಲಿಸಿದ ಅಮೋಘ ಸಾಹಸಗಳಾಗಿವೆ. ಹೀಗಾಗಿ ಐಸಿಸಿ ಟ್ರೋಫಿಯ ಬರ ಎನ್ನುವುದು ಈ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದು ಕೋಚ್‌ ರಾಹುಲ್‌ ದ್ರಾವಿಡ್‌ ಅವರ ದೃಢ ನಂಬಿಕೆ.

ಓವಲ್‌ ದಾಖಲೆ
ವಿಶೇಷವೆಂದರೆ, ಇಷ್ಟು ಕಾಲ ಓವಲ್‌ನಲ್ಲಿ ಕೇವಲ ಇಂಗ್ಲೆಂಡ್‌ ವಿರುದ್ಧ ಆಡುತ್ತಿದ್ದ ಇತ್ತಂಡಗಳು ಈಗ ಈ ಐತಿಹಾಸಿಕ ಅಂಗಳದಲ್ಲಿ ಮೊದಲ ಬಾರಿಗೆ ಪರಸ್ಪರ ಎದುರಾಗುತ್ತಿವೆ. ಇಂಗ್ಲೆಂಡ್‌ ಎದುರು ಓವಲ್‌ನಲ್ಲಿ ಆಡಿದ 14 ಟೆಸ್ಟ್‌ಗಳಲ್ಲಿ ಭಾರತ ಕೇವಲ ಎರಡನ್ನು ಗೆದ್ದಿದೆ. ಐದನ್ನು ಸೋತಿದೆ. ಇನ್ನೊಂದೆಡೆ ಆಸ್ಟ್ರೇಲಿಯ ಇಲ್ಲಿ ಆಡಿದ 38 ಟೆಸ್ಟ್‌ಗಳಲ್ಲಿ ಏಳನ್ನು ಗೆದ್ದು, 17ರಲ್ಲಿ ಎಡವಿದೆ.

ಬೇಕಿದೆ ತಾಳ್ಮೆ, ಏಕಾಗ್ರತೆ
ಟೆಸ್ಟ್‌ ಕ್ರಿಕೆಟ್‌ ಅಂದರೆ ನಿಂತು ಆಡು ವುದು. ಇದು ವಿಪರೀತ ತಾಳ್ಮೆ, ಏಕಾಗ್ರತೆ ಯನ್ನು ಬಯಸುತ್ತದೆ. ಆದರೆ ಈಗಿನ ಟಿ20 ಜಮಾನಾದಲ್ಲಿ ಕ್ರಿಕೆಟಿಗರಿಗೆ ಕ್ರೀಸ್‌ ಆಕ್ರಮಿಸಿ ಕೊಂಡು ಬ್ಯಾಟಿಂಗ್‌ ಮಾಡುವುದೇ ದೊಡ್ಡ ಸಮಸ್ಯೆ. ಆದರೂ ಆಸ್ಟ್ರೇಲಿಯ, ಭಾರತದಂಥ ತಂಡಗಳಲ್ಲಿ “ಟೆಸ್ಟ್‌ ತಳಿ’ಗಳಿರುವುದು ಸಮಾಧಾನಕರ ಸಂಗತಿ. ಹೀಗಾಗಿ ಈ ಫೈನಲ್‌ 5ನೇ ದಿನಕ್ಕೆ ವಿಸ್ತರಿಸಲ್ಪಡಲಿದೆ ಎಂಬುದು ಕ್ರಿಕೆಟ್‌ ಪ್ರಿಯರ ನಂಬಿಕೆ.

ಕಳೆದ ಫೈನಲ್‌ನಲ್ಲಿ ಆಡಿದ ಪಂತ್‌, ಇಶಾಂತ್‌ ಮತ್ತು ಬುಮ್ರಾ ಬಿಟ್ಟು ಉಳಿದವರೆಲ್ಲ ಈಗಲೂ ಭಾರತ ತಂಡದಲ್ಲಿದ್ದಾರೆ. ನಿಂತು ಆಡುವ ವಿಚಾರಕ್ಕೆ ಬಂದರೆ ಆಸ್ಟ್ರೇಲಿಯದ ತ್ರಿವಳಿ ವೇಗಿಗಳಾದ ಸ್ಟಾರ್ಕ್‌, ಕಮಿನ್ಸ್‌, ಬೋಲ್ಯಾಂಡ್‌ ಹಾಗೂ ಸ್ಪಿನ್ನರ್‌ ಲಿಯಾನ್‌ ಆಕ್ರಮಣವನ್ನು ತಡೆದು ನಿಲ್ಲುವುದು ಮುಖ್ಯ. ರೋಹಿತ್‌, ಗಿಲ್‌, ಪೂಜಾರ, ಕೊಹ್ಲಿ, ರಹಾನೆ ಇದರಲ್ಲಿ ಯಶಸ್ಸು ಕಾಣಬೇಕಿದೆ.

ಕೆಲವು ಜಟಿಲ ಆಯ್ಕೆಗಳು
ಕಳೆದೆರಡು ವರ್ಷಗಳಲ್ಲಿ ಭಾರತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ತಂಡದಲ್ಲಿ ಖಾಯಂ ಸದಸ್ಯರ ಸಂಖ್ಯೆ ಭರಪೂರವಾಗಿದೆ. ಅಂತಿಮ ಹನ್ನೊಂದರ ಆಯ್ಕೆ ವೇಳೆ ಒಂದೆರಡು ವಿಭಾಗಗಳಲ್ಲಿ ಹೆಚ್ಚು ಯೋಚಿಸಬೇಕಾಗುತ್ತದೆ. ಅವಳಿ ಸ್ಪಿನ್ನರ್‌ಗಳ ಅಗತ್ಯವಿದೆಯೇ ಎಂಬುದು ಮುಖ್ಯ ಪ್ರಶ್ನೆ. “ಬೇಕು’ ಅಂತಾದರೆ ಜಡೇಜ ಮತ್ತು ಅಶ್ವಿ‌ನ್‌ ಇರುತ್ತಾರೆ. ಒಬ್ಬರೇ ಸಾಕು ಅಂತಿದ್ದರೆ ಅಶ್ವಿ‌ನ್‌ ಹೊರಗುಳಿಯುವ ಸಾಧ್ಯತೆ ಹೆಚ್ಚು. ಆಗ ಇವರ ಸ್ಥಾನಕ್ಕೆ 4ನೇ ಸೀಮರ್‌ ಯಾರು ಎಂಬುದನ್ನೂ ಯೋಚಿಸಬೇಕಾಗುತ್ತದೆ. ಆದರೆ ಆಸ್ಟ್ರೇಲಿಯದ ಆಟಗಾರರು ಸ್ಪಿನ್‌ ಎಸೆತಗಳಿಗೆ ತಿಣುಕಾಡುವುದರಿಂದ ಅವಳಿ ಸ್ಪಿನ್‌ ದಾಳಿ ಸೂಕ್ತ ಎಂಬುದು ಬಹುತೇಕ ಮಂದಿಯ ಅಭಿಪ್ರಾಯ.

ಕೀಪರ್‌ ಯಾರಾಗಬಹುದು, ಕೆ.ಎಸ್‌. ಭರತ್‌ ಅವರನ್ನೇ ಮುಂದುವರಿಸಬೇಕೇ ಅಥವಾ ಬೀಸು ಹೊಡೆತಗಾರನೂ ಆಗಿರುವ ಇಶಾನ್‌ ಕಿಶನ್‌ ಅವರನ್ನು ಆಡಿಸಬೇಕೇ ಎಂಬುದು ಮತ್ತೂಂದು ಪ್ರಶ್ನೆ.

ಆಸ್ಟ್ರೇಲಿಯ ಕೂಡ ಸಮರ್ಥ ಬ್ಯಾಟರ್‌ಗಳ ಟೆಸ್ಟ್‌ ಪಡೆಯನ್ನು ಹೊಂದಿದೆ. ಖ್ವಾಜಾ, ಲಬುಶೇನ್‌, ಸ್ಮಿತ್‌ ಇವರಲ್ಲಿ ಪ್ರಮುಖರು. ಸ್ಮಿತ್‌ ಅವರಂತೂ ಓವಲ್‌ ಅಂಗಳದಲ್ಲಿ ನೂರನ್ನು ಸಮೀಪಿಸಿದ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ.
ಹೆಡ್‌, ಗ್ರೀನ್‌, ಕ್ಯಾರಿ ಕೂಡ ಕ್ರೀಸ್‌ ಆಕ್ರಮಿಸಿಕೊಳ್ಳಬಲ್ಲರು. ಚಿಂತೆ ಇರುವುದು ಓಪನರ್‌ ವಾರ್ನರ್‌ ಫಾರ್ಮ್ ವಿಷಯದಲ್ಲಿ ಮಾತ್ರ.

ನ್ಯೂಜಿಲ್ಯಾಂಡ್‌ ಮೊದಲ ಚಾಂಪಿಯನ್‌
ಚೊಚ್ಚಲ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್‌ ಆಗಿ ಮೂಡಿಬಂದ ತಂಡ ನ್ಯೂಜಿಲ್ಯಾಂಡ್‌. ಫೈನಲ್‌ನಲ್ಲಿ ಅದು ವಿರಾಟ್‌ ಕೊಹ್ಲಿ ನಾಯಕತ್ವದ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿ ಟ್ರೋಫಿ ಎತ್ತಿತು.
ಈ ಪಂದ್ಯ ನಡೆದದ್ದು 2021ರ ಜೂನ್‌ನಲ್ಲಿ. ಸ್ಥಳ, ಸೌತಾಂಪ್ಟನ್‌ನ “ರೋಸ್‌ ಬೌಲ್‌ ಸ್ಟೇಡಿಯಂ’. ಆದರೆ ಪಂದ್ಯ ಮಳೆಯ ಹೊಡೆತಕ್ಕೆ ಸಿಲುಕಿ ಅಷ್ಟರ ಮಟ್ಟಿಗೆ ನಿರಾಸೆ ಮೂಡಿಸಿತು. ಭಾರೀ ಮಳೆಯಿಂದ ಮೊದಲ ದಿನವೇ ಆಟ ಸಾಗಲಿಲ್ಲ. 4ನೇ ದಿನದಾಟವೂ ಸಂಪೂರ್ಣವಾಗಿ ನಷ್ಟವಾಯಿತು. ಹೀಗಾಗಿ ಪಂದ್ಯವನ್ನು ಮೀಸಲು ದಿನಕ್ಕೆ ವಿಸ್ತರಿಸುವುದು ಅನಿವಾರ್ಯವಾಯಿತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಕೈಲ್‌ ಜೇಮಿಸನ್‌ ದಾಳಿಗೆ ತತ್ತರಿಸಿ 217 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಜೇಮಿಸನ್‌ 31 ರನ್ನಿತ್ತು 5 ವಿಕೆಟ್‌ ಕೆಡವಿದರು. 49 ರನ್‌ ಮಾಡಿದ ಅಜಿಂಕ್ಯ ರಹಾನೆ ಭಾರತದ ಟಾಪ್‌ ಸ್ಕೋರರ್‌. ಜವಾಬಿತ್ತ ನ್ಯೂಜಿಲ್ಯಾಂಡ್‌ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ವೈಫ‌ಲ್ಯ ಕಂಡಿತು. ಸ್ಕೋರ್‌ 249ಕ್ಕೆ ನಿಂತಿತು. ಶಮಿ 4, ಇಶಾಂತ್‌ 3, ಅಶ್ವಿ‌ನ್‌ 2 ವಿಕೆಟ್‌ ಕೆಡವಿದರು. ಡೇವನ್‌ ಕಾನ್ವೇ ಅವರಿಂದ ಅರ್ಧ ಶತಕ ದಾಖಲಾಯಿತು (54). ನಾಯಕ ಕೇನ್‌ ವಿಲಿಯಮ್ಸನ್‌ 49 ರನ್‌ ಹೊಡೆದರು.
ದ್ವಿತೀಯ ಸರದಿಯಲ್ಲೂ ಭಾರತದ ಬ್ಯಾಟಿಂಗ್‌ ಚೇತರಿಕೆ ಕಾಣಲಿಲ್ಲ. 32 ರನ್‌ ಹಿನ್ನಡೆ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಭಾರತ, 5ನೇ ದಿನದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿತ್ತು. ಪೂಜಾರ ಮತ್ತು ಕೊಹ್ಲಿ ಕ್ರೀಸ್‌ನಲ್ಲಿದ್ದರು. ತುಸು ಎಚ್ಚರಿಕೆಯಿಂದ ಆಡಿದ್ದರೆ ಸೋಲಿನ ಅವಮಾನದಿಂದ ಪಾರಾಗಬಹುದಿತ್ತು. ಆದರೆ ಕಿವೀಸ್‌ ವೇಗಿಗಳು ಭಾರತದ ನಡು ಮುರಿದರು. 170ಕ್ಕೆ ಸರ್ವಪತನ ಕಂಡಿತು. 41 ರನ್‌ ಮಾಡಿದ ಪಂತ್‌ ಅವರದೇ ಹೆಚ್ಚಿನ ಗಳಿಕೆ.

ನ್ಯೂಜಿಲ್ಯಾಂಡ್‌ ಗೆಲುವಿಗೆ 139 ರನ್‌ ಸಾಕಿತ್ತು. ಸಾಕಷ್ಟು ಸಮಯವೂ ಇತ್ತು. ಅದು 45.5 ಓವರ್‌ಗಳಲ್ಲಿ 2 ವಿಕೆಟಿಗೆ 140 ರನ್‌ ಬಾರಿಸಿ ಇತಿಹಾಸ ನಿರ್ಮಿಸಿತು.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಇಶಾನ್‌ ಕಿಶನ್‌/ಕೆ.ಎಸ್‌. ಭರತ್‌ (ವಿ.ಕೀ), ಆರ್‌. ಅಶ್ವಿ‌ನ್‌, ಶಾದೂìಲ್‌ ಠಾಕೂರ್‌/ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌.

ಆಸ್ಟ್ರೇಲಿಯ: ಡೇವಿಡ್‌ ವಾರ್ನರ್‌, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಶೇನ್‌, ಸ್ಟೀವನ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಕ್ಯಾಮರಾನ್‌ ಗ್ರೀನ್‌, ಅಲೆಕ್ಸ್‌ ಕ್ಯಾರಿ (ವಿ.ಕೀ.), ಪ್ಯಾಟ್‌ ಕಮಿನ್ಸ್‌ (ನಾಯಕ), ಮಿಚೆಲ್‌ ಸ್ಟಾರ್ಕ್‌, ಸ್ಕಾಟ್‌ ಬೋಲ್ಯಾಂಡ್‌, ನಥನ್‌ ಲಿಯಾನ್‌.

Advertisement

Udayavani is now on Telegram. Click here to join our channel and stay updated with the latest news.

Next