Advertisement

ದುರಂತ ಅಂತ್ಯ ಕಂಡ “ಫಿಲಿಪ್‌ ಹ್ಯೂಸ್‌”ಗೆ 63 ಸೆಕೆಂಡ್‌ಗಳ ಗೌರವ

05:28 PM Nov 26, 2020 | mahesh |

ಸಿಡ್ನಿ: ಬೌನ್ಸರ್‌ ಏಟು ತಿಂದು ದಾರುಣವಾಗಿ ಸಾವನ್ನಪ್ಪಿದ ಕಾಂಗರೂ ನಾಡಿನ ಆರಂಭಕಾರ ಫಿಲಿಪ್‌ ಹ್ಯೂಸ್‌ ಅವರಿಗೆ ಶುಕ್ರವಾರದ ಮೊದಲ ಏಕದಿನ ಪಂದ್ಯ ವೇಳೆ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ಆಟಗಾರರು 63 ಸೆಕೆಂಡ್‌ಗಳ ಕಾಲ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಲಿದ್ದಾರೆ. ಸಿಡ್ನಿಯಲ್ಲಿ ನಡೆಯುವ ಈ ಪಂದ್ಯದ ದಿನವೇ (ನ. 27) ಹ್ಯೂಸ್‌ ಅವರ 6ನೇ ಪುಣ್ಯತಿಥಿ ಆಗಿರುವುದು ಕಾಕತಾಳೀಯ.

Advertisement

2014ರ ನ. 25ರಂದು ಸೌತ್‌ ಆಸ್ಟ್ರೇಲಿಯ ಪರ ಶೆಫೀಲ್ಡ್‌ ಶೀಲ್ಡ್‌ ಪಂದ್ಯ ಆಡುತ್ತಿದ್ದಾಗ ನ್ಯೂ ಸೌತ್‌ ವೇಲ್ಸ್‌ನ ಸೀನ್‌ ಅಬೋಟ್‌ ಅವರ ಬೌನ್ಸರ್‌ ಎಸೆತವೊಂದು ಹ್ಯೂಸ್‌ ಅವರ ತಲೆಗೆ ಬಡಿದು ಈ ದುರಂತ ಸಂಭವಿಸಿತ್ತು. ಕೋಮಾಕ್ಕೆ ಜಾರಿದ ಅವರು ಎರಡು ದಿನಗಳ ಜೀವನ್ಮರಣದ ಹೋರಾಟದ ಬಳಿಕ ಸಿಡ್ನಿಯ ಡಾರ್ಲಿಂಗ್‌ಹರ್ಸ್ಡ್ನ ಸೇಂಟ್‌ ವಿನ್ಸೆಂಟ್ಸ್‌ ಕ್ಲಿನಿಕ್‌ನಲ್ಲಿ ಸಾವನ್ನಪ್ಪಿದ್ದರು. ಕ್ರಿಕೆಟ್‌ ಜಗತ್ತು ಈ ಆಘಾತದಿಂದ ತತ್ತರಿಸಿತ್ತು.

ಹ್ಯೂಸ್‌ 63 ನಾಟೌಟ್‌
ಅಂತಿಮ ಇನ್ನಿಂಗ್ಸ್‌ ವೇಳೆ ಫಿಲಿಪ್‌ ಹ್ಯೂಸ್‌ 63 ರನ್‌ ಮಾಡಿ ಆಡುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿತ್ತು. ಇದಕ್ಕಾಗಿ ಮೊದಲ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ 63 ಸೆಕೆಂಡ್‌ಗಳ ಕಾಲ ಚಪ್ಪಾಳೆ ತಟ್ಟಿ ಗೌರವಿಸಲು ನಿರ್ಧರಿಸಲಾಗಿದೆ. ಬಳಿಕ ಆಸೀಸ್‌ ಕ್ರಿಕೆಟಿಗರು ಕಪ್ಪುಪಟ್ಟಿ ಧರಿಸಿ ಆಡಲಿಳಿಯಲಿದ್ದಾರೆ. ಕಾಕತಾಳೀಯವೆಂದರೆ, 2014ರ ಈ ದುರ್ಘ‌ಟನೆ ನಡೆದ್ದು ಕೂಡ ಸಿಡ್ನಿ ಅಂಗಳದಲ್ಲೇ. ಆಗಲೂ ಭಾರತ ತಂಡ ಆಸ್ಟ್ರೇಲಿಯ ಪ್ರವಾಸದಲ್ಲಿತ್ತು. ಅಂದಿನ ಬೌಲರ್‌ ಸೀನ್‌ ಅಬೋಟ್‌ ಈಗಿನ ಆಸೀಸ್‌ ತಂಡದ ಸದಸ್ಯನೂ ಆಗಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next