ಬ್ರಿಸ್ಟ್ನ್: ಆತಿಥೇಯ ಆಸ್ಟ್ರೇಲಿಯ ತಂಡವು ಮೈದಾನದ ಒಳಗೆ ಮತ್ತು ಹೊರಗೆ ಬಹಳಷ್ಟು ಸಂಕಷ್ಟ ಅನುಭವಿಸುತ್ತಿರುವ ಕಾರಣ ಬುಧವಾರದಿಂದ ಆರಂಭವಾಗುವ ಟ್ವೆಂಟಿ20 ಸರಣಿಯಲ್ಲಿ ಭಾತರವೇ ಗೆಲ್ಲುವ ಫೇವರಿಟ್ ತಂಡವೆನಿಸಿದೆ. ಅಡಿಲೇಡ್‌ನಲ್ಲಿ ಡಿ. 6ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ ಮೇಲುಗೈ ಸಾಧಿಸುವ ಗುರಿ ಇಟ್ಟುಕೊಂಡಿರುವ ಭಾರತವು ಮೂರು ಪಂದ್ಯಗಳ ಟ್ವೆಂಟಿ20 ಸರಣಿಯಲ್ಲಿಯೂ ಪ್ರಾಬಲ್ಯ ಸ್ಥಾಪಿಸಲು ಇಚ್ಛಿಸಿದೆ. ಭಾರತವು 2017ರ ನವೆಂಬರ್‌ನಿಂದ ಆರಂಭವಾಗಿ ಇಷ್ಟರ ವರೆಗೆ ಆಡಿದ ಏಳು ಟ್ವೆಂಟಿ20 ಅಂತಾರಾಷ್ಟ್ರೀಯ ಸರಣಿಯನ್ನು ಗೆದ್ದ ಸಾಧನೆ ಮಾಡಿದೆ. ಈ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಕಳೆದ ವರ್ಷದ ಜುಲೈಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯದಾಗಿ ಸೋಲನ್ನು ಕಂಡಿತ್ತು. ಇನ್ನೊಂದು ಸಂತೋಷದ ವಿಷಯವೆಂದರೆ ಈ ಹಿಂದೆ ಆಸ್ಟ್ರೇಲಿಯಕ್ಕೆ ಪ್ರವಾಸಗೈದ ವೇಳೆ ಭಾರತ ತಂಡವು ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ20 ಸರಣಿಯನ್ನು 3-0 ಅಂತರದಿಂದ ಜಯಿಸಿತ್ತು. ಹೀಗಾಗಿ ಭಾರತೀಯ ತಂಡವು ಗೆಲುವಿನ ಆತ್ಮವಿಶ್ವಾಸದಲ್ಲಿದೆ.
ಸಮಸ್ಯೆಯಲ್ಲಿ ಆಸ್ಟ್ರೇಲಿಯ
ಕಳೆದ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೆಂಡಿನ ರೂಪ ಕೆಡಿಸಿದ ಪ್ರಕರಣ ಬೆಳಕಿಗೆ ಬಂದ ಬಳಿಕ ಆಸ್ಟ್ರೇಲಿಯ ಕ್ರಿಕೆಟ್ ಭಾರೀ ಸಮಸ್ಯೆಯಲ್ಲಿ ಸಿಲುಕಿತು. ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ನಿಷೇಧಕ್ಕೆ ಒಳಗಾಗಿರುವುದು ತಂಡದ ನಿರ್ವಹಣೆಯ ಮೇಲೆ ಪರಿಣಾಮ ಬಿತ್ತು. ಈ ಮೂವರು ಕ್ರಿಕೆಟಿಗರ ಮೇಲಿನ ನಿಷೇಧವನ್ನು ಬೇಗನೇ ತೆಗೆಯುವಂತೆ ಆಸ್ಟ್ರೇಲಿಯನ್ ಕ್ರಿಕೆಟರ್ ಅಸೋಸಿಯೇಶನ್ ಮನವಿ ಮಾಡಿದ್ದರೂ ಕ್ರಿಕೆಟ್ ಆಸ್ಟ್ರೇಲಿಯ ಇದನ್ನು ಪುರಸ್ಕರಿಸಲಿಲ್ಲ.
ಸ್ಮಿತ್ ಮತ್ತು ವಾರ್ನರ್ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯದ ಫಲಿತಾಂಶವೇ ಬದಲಾಗಿ ಹೋಗಿದೆ. ನಿಷೇಧದ ಬಳಿಕ ಆಸ್ಟ್ರೇಲಿಯ ಇನ್ನೂ ಟ್ವೆಂಟಿ20ಯಲ್ಲಿ ಯಾವುದೇ ಸರಣಿ ಜಯಿಸಿಲ್ಲ. ಜೂನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕೈಕ ಪಂದ್ಯದಲ್ಲಿ ಸೋತಿದ್ದರೆ ಜಿಂಬಾಬ್ವೆಯಲ್ಲಿ ನಡೆದ ಟಿ20 ತ್ರಿಕೋನ ಸರಣಿಯ ಫೈನಲ್‌ನಲ್ಲಿ ಪಾಕಿಸ್ಥಾನಕ್ಕೆ ಶರಣಾಗಿತ್ತು. ಆಬಳಿಕ ಯುಎಇಯಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಮತ್ತೆ ಪಾಕಿಸ್ಥಾನ ವಿರುದ್ಧ 0-3 ಅಂತರದಿಂದ ಸೋತಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಮಳೆಯಿಂದ ತೊಂದರೆಗೊಳಗಾದ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ ಈ ಸರಣಿ ತವರಿನಲ್ಲಿ ನಡೆಯುವ ಕಾರಣ ಆಸ್ಟ್ರೇಲಿಯ ಹೊಸ ಉತ್ಸಾಹದಿಂದ ಆಡುವ ನಿರೀಕ್ಷೆಯಿದೆ. ಪಿಚ್‌ನ ಲಾಭ ಪಡೆದು ಮೇಲುಗೈ ಸಾಧಿಸಲು ಪ್ರಯತ್ನಿಸಬಹುದು.
ಇಂಗ್ಲೆಂಡಿನಲ್ಲಿ ನಾಯಕ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಮೂರನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಿದ್ದರೂ ಅವರಿಂದ ಪರಿಣಾಮಕಾರಿ ಬ್ಯಾಟಿಂಗ್ ನಿರ್ವಹಣೆ ಬಂದಿರಲಿಲ್ಲ. ಆದರೂ ಅವರನ್ನು ಈ ಸರಣಿಗೆ ಉಳಿಸಿಕೊಳ್ಳಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಅವರನ್ನು ಆಟವಾಡುವ ಬಳಗದಲ್ಲಿ ಸೇರ್ಪಡೆ ಮಾಡಲಾಗಿದೆ. ಮನೀಷ್ ಪಾಂಡೆ ಅವರನ್ನು ಹೊರಗಿಡಲಾಗಿದೆ.
ಪಂತ್ ಕೀಪಿಂಗ್ ಕರ್ತವ್ಯ ನಿಭಾಯಿಸುವುದು ಖಚಿತವಾಗಿದೆ. ಅವರು ನೆಟ್‌ನಲ್ಲಿ ಕೋಚ್ ರವಿಶಾಸ್ತ್ರಿ ಮಾರ್ಗದರ್ಶನದಡಿ ಬಹಳಷ್ಟು ಹೊತ್ತು ಕೀಪಿಂಗ್ ಅಭ್ಯಾಸ ನಡೆಸಿದರು. ಕಾರ್ತಿಕ್ ಫೀಲ್ಡಿಂಗ್ ಅಭ್ಯಾಸ ಮಾತ್ರ ಮಾಡಿದರು. ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಯಾವ ರೀತಿಯ ಬೌಲಿಂಗ್ ದಾಳಿ ಸಂಘಟಿಸುವ ಬಗ್ಗೆ ಭಾರತ ಆಲೋಚಿಸುತ್ತಿದೆ. ಇಲ್ಲಿನ ಗಾಬಾ ಪಿಚ್ ವೇಗಕ್ಕೆ ನೆರವಾಗುವ ಕಾರಣ ಭುವನೇಶ್ವರ್, ಬುಮ್ರಾ ಮತ್ತು ಖಲೀಲ್ ಅಹ್ಮದ್ ಆರಂಭಿಕ ದಾಳಿಯ ನೇತೃತ್ವ ವಹಿಸುವ ಸಾಧ್ಯತೆಯಿದೆ. ಕುಲದೀಪ್ ಮತ್ತು ಚಾಹಲ್ ಅವರಲ್ಲಿ ಒಬ್ಬರು ಸ್ಪಿನ್ ದಾಳಿ ನಡೆಸುವ ನಿರೀಕ್ಷೆಯಿದೆ.
ಆಸ್ಟ್ರೇಲಿಯ ತಂಡವೂ ಸ್ಪಿನ್ ದಾಳಿ ಸಂಘಟಿಸುವ ಬಗ್ಗೆ ಪರಿಶೀಲಿಸುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ವೇಗಿಗಳು ಮಾತ್ರ ಬೌಲಿಂಗ್ ಮಾಡಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ ತಂಡದಲ್ಲಿರುವ ಏಕೈಕ ಸ್ಪಿನ್ನರ್. ಆದರೆ ಪಿಚ್ ಪರಿಶೀಲಿಸಿ ಆಟವಾಡುವ ಬಳಗವನ್ನು ಆಯ್ಕೆ ಮಾಡಲು ಆಸ್ಟ್ರೇಲಿಯ ನಿರ್ಧರಿಸಿದೆ.
ಭಾರತಕ್ಕೆ ಕೊಹ್ಲಿ ಬಲ
ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಇದ್ದರೆ ತಂಡಕ್ಕೆ ಆನೆಬಲ ಇದ್ದಂತೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಭಾರತೀಯ ತಂಡದ ಸವಾಲನ್ನು ಯಾವ ರೀತಿ ಫಿಂಚ್ ಬಳಗ ಎದುರಿಸಲಿದೆ ಎಂಬುದೇ ಕುತೂಹಲದ ಸಂಗತಿಯಾಗಿದೆ. 2016ರಲ್ಲಿ ಟಿ20 ಸರಣಿ ಕ್ಲೀನ್‌ಸ್ವೀಪ್‌ಗೈದಾಗ ಕೊಹ್ಲಿ ಮೂರು ಪಂದ್ಯಗಳಲ್ಲಿ 199 ರನ್ ಸಿಡಿಸಿದ್ದರು. ಕೊಹ್ಲಿ ಆಗಮನದಿಂದಾಗಿ ಓರ್ವ ಪ್ರಮುಖ ಬ್ಯಾಟ್ಸ್‌ಮನ್ ಅವರಿಗೆ ಜಾಗ ಬಿಟ್ಟುಕೊಡಬೇಕಾಗಿದೆ.
ಉಭಯ ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಕೆಎಲ್ ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಕೃಣಾಲ್ ಪಾಂಡ್ಯ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಖಲೀಲ್ ಅಹ್ಮದ್, ವಾಷಿಂಗ್ಟನ್ ಸುಂದರ್.
ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ), ಆಸ್ಟನ್ ಅಗರ್, ಜಾಸನ್ ಬೆಹೆನ್‌ಡಾಫ್, ಅಲೆಕ್ಸ್ ಕ್ಯಾರೆ, ನಥನ್ ಕೌಲ್ಟರ್ ನೈಲ್, ಬೆನ್ ಮೆಕ್‌ಡರ್ಮಟ್, ಗ್ಲೆನ್ ಮ್ಯಾಕ್ಸ್‌ವೆಲ್, ಡಿ’ಆರ್ಸಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್, ಮಾರ್ಕಸ್ ಸ್ಟಾಯಿನಿಸ್, ಆ್ಯಂಡ್ರೂ ಟೈ, ಆ್ಯಡಂ ಝಂಪ
ಪಂದ್ಯ ಆರಂಭ: ಅಪರಾಹ್ನ 1.20