ನವದೆಹಲಿ: ದೇಶದಲ್ಲಿ ಕೋವಿಡ್ -19 ಸೊಂಕಿತರ ಸಂಖ್ಯೆ 1.6 ಲಕ್ಷದ ಗಡಿ ದಾಟಿದ್ದು, ವೈರಸ್ ಹಾಟ್ ಸ್ಪಾಟ್ ದೇಶಗಳಲ್ಲಿ ಭಾರತವೂ 9ನೇ ಸ್ಥಾನಕ್ಕೇರಿದೆ. ಮಾತ್ರವಲ್ಲದೆ ಮೃತರ ಸಂಖ್ಯೆ ಕೂಡ ಚೀನಾದ ಅಂಕಿ ಅಂಶಗಳನ್ನು ಮೀರಿಸಿದೆ ಎಂದು ಎನ್ ಡಿಟಿವಿ ವರದಿ ತಿಳಿಸಿದೆ.
ಭಾರತದಲ್ಲಿ ವೈರಸ್ ಸೋಂಕಿತರ ಸಂಖ್ಯೆ 1.65,386ಕ್ಕೆ ಏರಿಕೆಯಾಗಿದ್ದು, ಇದು ಚೀನಾದಲ್ಲಿನ ವೈರಸ್ ಸೋಂಕಿತರ ಸಂಖ್ಯೆಗಿಂತ (84,106) ದುಪ್ಪಟ್ಟಾಗಿದೆ. ಮಾತ್ರವಲ್ಲದೆ ಮೃತರ ಪ್ರಮಾಣದಲ್ಲೂ ಭಾರತ (4,711) ಚೀನಾವನ್ನು (4,634) ಮೀರಿಸಿದೆ.
ಚೀನಾದಲ್ಲಿ 2019ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಕೋವಿಡ್ -19 ವೈರಸ್ ಕಾಣಿಸಿಕೊಂಡು, ಜಗತ್ತಿನಾದ್ಯಂತ ಪಸರಿಸಲು ಆರಂಭಿಸಿತು. ಇಲ್ಲಿಯವರೆಗೂ ಸುಮಾರು 57 ಲಕ್ಷಕ್ಕಿಂತ ಹೆಚ್ಚು ಜನರು ವೈರಾಣುವಿನಿಂದ ಭಾದೀತರಾಗಿದ್ದು, ಸುಮಾರು 3.5 ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೇ ಚೀನಾದಲ್ಲಿ ವೈರಸ್ ಪೀಡಿತರ ಪ್ರಕರಣಗಳು ಕಡಿಮೆಯಾಗಿದ್ದು, ಅಮೆರಿಕಾ, ಬ್ರೆಜಿಲ್, ಸ್ಪೇನ್, ಇಟಲಿ ಮುಂತಾದ ರಾಷ್ಟ್ರಗಳಲ್ಲಿ ವೈರಸ್ ಮಾರಾಣಾಂತಿಕವಾಗಿ ಪರಿಣಮಿಸಿದೆ.
ಅಮೆರಿಕಾದಲ್ಲಿ ಅತೀ ಹೆಚ್ಚು ಅಂದರೆ 17 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು, 1 ಲಕ್ಷಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ. ರಷ್ಯಾ, ಯುಕೆ, ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ, ಇದೀಗ ಭಾರತದಲ್ಲೂ ಈ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಮತ್ತೊಂದೆಡೆ ಟರ್ಕಿ ಟಾಪ್ ಹತ್ತು ಹಾಟ್ ಸ್ಪಾಟ್ ಗಳಲ್ಲಿ ಗುರುತಿಸಿಕೊಂಡರೆ ಜಗತ್ತಿನಾದ್ಯಂತ ವೈರಸ್ ಪಸರಿಸಿದ ಚೀನಾದ 14 ನೇ ಸ್ಥಾನಕ್ಕೆ ಇಳಿದಿದೆ.
ಭಾರತದಲ್ಲಿ ಲಾಕ್ ಡೌನ್ ಸಡಿಲಿಕೆಯ ನಂತರ ವೈರಸ್ ಭಾದೀತರ ಪ್ರಮಾಣ ದ್ವಿಗುಣಗೊಳ್ಳುತ್ತಲೇ ಇದೆ. ದೇಶಾದ್ಯಂತ ಸಂಚಾರ ಸೇರಿದಂತೆ ವಿವಿಧ ನಿರ್ಬಂಧಗಳು ಸಡಿಲಗೊಂಡಿದ್ದು ತವರು ರಾಜ್ಯಗಳಿಗೆ ಮರಳುತ್ತಿರುವವರಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಅಧಿಕವಾಗುತ್ತಿದೆ.