ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13,600 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಪ್ರಕೃತ ಹಾಂಕಾಂಗ್ ನಲ್ಲಿರುವ ಬಗ್ಗೆ ಭಾರತ ಸರಕಾರಕ್ಕೆ ಮಾಹಿತಿ ಸಿಕ್ಕಿದ್ದು ಆತನನ್ನು ಕೂಡಲೇ ಬಂಧಿಸಿ ಭಾರತಕ್ಕೆ ರವಾನಿಸುವಂತೆ ಹಾಂಕಾಂಗ್ ಸರಕಾರವನ್ನು ಭಾರತ ಇಂದು ಗುರುವಾರು ಕೇಳಿಕೊಂಡಿದೆ.
ಹಾಂಕಾಂಗ್ ಅಧಿಕಾರಿಗಳ ಪ್ರತಿಕ್ರಿಯೆಯನ್ನು ಭಾರತ ಸರಕಾರ ಈಗ ಎದುರು ನೋಡುತ್ತಿದೆ.
ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡುತ್ತಾ, “ನೀರವ್ ಮೋದಿಯನ್ನು ಬಂಧಿಸುವಂತೆ ನಾವು ಹಾಂಕಾಂಗ್ ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ. ಅವರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.
ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಹಿಡಿದೊಪ್ಪಿಸುವ ಬಗ್ಗೆ ಭಾರತ ಮತ್ತು ಹಾಂಕಾಂಗ್ ನಡುವೆ ಒಪ್ಪಂದ ಇದೆ. ಆ ಪ್ರಕಾರ ನೀರವ್ ಮೋದಿಯನ್ನು ಬಂಧಿಸಿ ಭಾರತಕ್ಕೆ ಒಪ್ಪಿಸುವಂತೆ ನಾವು ಹಾಂಕಾಂಗ್ ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ; ಅವರ ಉತ್ತರಕ್ಕಾಗಿ ನಾವು ಈಗಲೂ ಕಾಯುತ್ತಿದ್ದೇವೆ’ ಎಂದು ರವೀಶ್ ಕುಮಾರ್ ಹೇಳಿದರು.
ಹಾಂಕಾಂಗ್‌ನಲ್ಲಿರುವ ಭಾರತೀಯ ದೂತಾವಾಸಕ್ಕೆ ತಿಳಿದು ಬಂದಿರುವ ಪ್ರಕಾರ ಹಾಂಕಾಂಗ್‌ನ ನ್ಯಾಯಾಂಗ ಇಲಾಖೆಯು ಭಾರತದ ಕೋರಿಕೆಯ ಪ್ರಕಾರ ನೀರವ್ ಮೋದಿ ಬಂಧನಕ್ಕೆ ತಾತ್ಕಾಲಿಕ ಆದೇಶವನ್ನು ಹೊರಡಿಸುವುದನ್ನು ಪರಿಶೀಲಿಸುತ್ತಿದೆ ಎಂದು ಎಂದು ರವೀಶ್ ಕುಮಾರ್ ಹೇಳಿದರು.