Advertisement
ಭಾರತಕ್ಕೆ ಬ್ಯಾಟಿಂಗೇ ಸಮಸ್ಯೆಸೆಂಚುರಿಯನ್ನಲ್ಲೂ ಟೀಮ್ ಇಂಡಿಯಾದ ಪ್ರಧಾನ ಸಮಸ್ಯೆ ಬ್ಯಾಟಿಂಗ್ ವಿಭಾಗದ ಸುತ್ತವೇ ಗಿರಕಿ ಹೊಡೆ ಯುತ್ತಿದೆ. ಸಾಮಾನ್ಯವಾಗಿ ಆಫ್ರಿಕಾದಂಥ ಫಾಸ್ಟ್ ಟ್ರ್ಯಾಕ್‌ಗಳಲ್ಲಿ ಎಚ್ಚರಿಕೆ, ತಾಳ್ಮೆ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ಹೆಚ್ಚು ಮಹತ್ವ ಪಡೆಯುತ್ತದೆ. ಅದರಲ್ಲೂ ಕೊನೆಯ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಲಭಿಸಿದರಂತೂ ಅಪಾಯ ತಪ್ಪಿದ್ದಲ್ಲ. ಬಹುಶಃ ಕೇಪ್‌ಟೌನ್‌ನಲ್ಲಿ ಸ್ವತಃ ದಕ್ಷಿಣ ಆಫ್ರಿಕಾವೇ ಚೇಸಿಂಗಿಗೆ ಇಳಿದರೆ ದಡ ತಲಪುವಲ್ಲಿ ಎಡವುತ್ತಿತ್ತೋ ಏನೋ, ಇರಲಿ… ಸೆಂಚುರಿಯನ್‌ನಲ್ಲಿ ಮೇಲುಗೈ ಸಾಧಿಸಬೇಕಾದರೆ ಭಾರತದ ಬ್ಯಾಟಿಂಗ್ ವಿಭಾಗ ಕ್ಲಿಕ್ ಆಗಲೇಬೇಕು. ನಿಂತು ಆಡುವುದನ್ನು ಇನ್ನಾದರೂ ರೂಢಿಸಿಕೊಳ್ಳಬೇಕು. ಮುಖ್ಯವಾಗಿ ಆರಂಭಿಕರಿಂದ ಭದ್ರ ಬುನಾದಿ ನಿರ್ಮಾಣಗೊಳ್ಳಬೇಕು, ನಾಯಕ ಕೊಹ್ಲಿ ಬ್ಯಾಟಿನಿಂದ ರನ್ ಹರಿದು ಬರಬೇಕು, ಆಫ್ ಸ್ಟಂಪ್‌ನಿಂದಾಚೆ ಹೋಗುವ ಎಸೆತಗಳನ್ನು ಕೆಣಕುವ ದುಸ್ಸಾಹಸವನ್ನು ಬಿಟ್ಟುಬಿಡಬೇಕು, ಶಾರ್ಟ್‌ಪಿಚ್ ಎಸೆತಗಳಿಗೆ ಶಾಕ್ ಟ್ರೀಟ್‌ಮೆಂಟ್ ಕೊಡುವ ತಾಕತ್ತು ತೋರಬೇಕು, ಹೊಡೆತಗಳ ಆಯ್ಕೆಯಲ್ಲಿ ಜಾಣ್ಮೆ ಪ್ರದರ್ಶಿಸಬೇಕು, ದ್ರಾವಿಡ್-ಲಕ್ಷ್ಮಣ್ ಜೋಡಿಯ ಶೇ. 25ರಷ್ಟಾದರೂ ಬ್ಯಾಟಿಂಗ್ ಪರಿಪೂರ್ಣತೆ ಹೊಂದಿರಬೇಕು. ಆಗಷ್ಟೇ ಭಾರತದ ಮೇಲೆ ನಂಬಿಕೆ ಮೂಡಲು ಸಾಧ್ಯ!
ಕೇಪ್‌ಟೌನ್ ಟೆಸ್ಟ್‌ನಲ್ಲಿ ಕೆ.ಎಲ್. ರಾಹುಲ್ ಮತ್ತು ಅಜಿಂಕ್ಯ ರಹಾನೆ ಅವರನ್ನು ಹೊರಗಿರಿಸಿದ್ದು ತಪ್ಪು ಎಂದು ಸೋಲಿನ ಬಳಿಕ ವಾದಿಸಲಾಗುತ್ತಿದೆ. ಇವರಿಬ್ಬರ ವಿದೇಶಿ ದಾಖಲೆ ಉತ್ತಮವಿದ್ದುದರಿಂದ ಅವಕಾಶ ನೀಡಬೇಕಿತ್ತು ಎನ್ನಲಾಗುತ್ತಿದೆ. ಆದರೆ ತಂಡದ ಬ್ಯಾಟಿಂಗ್ ವಿಭಾಗದ ಬದಲಾವಣೆಗೆ ಸಂಭವಿಸಿದಂತೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಧವನ್ ಬದಲು ರಾಹುಲ್, ರೋಹಿತ್ ಬದಲು ರಹಾನೆ ಆಡಬಹುದೆಂಬ ಸುದ್ದಿಯಷ್ಟೇ ಹರಿದಾಡುತ್ತಿದೆ. ಆದರೆ ಶುಕ್ರವಾರದ ಅಭ್ಯಾಸದ ವೇಳೆ ರಹಾನೆ ಬಹುತೇಕ ಹೊತ್ತು ಪ್ರೇಕ್ಷಕನಾಗಿ ಉಳಿದಿದ್ದರು. ಇನ್ನೊಂದೆಡೆ ರೋಹಿತ್-ಕೊಹ್ಲಿ ಸಾಕಷ್ಟು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಇದನ್ನು ಗಮನಿಸುವಾಗ ರಹಾನೆ ಎಂಟ್ರಿ ಅನುಮಾನ ಮೂಡಿಸುತ್ತದೆ. ರಹಾನೆಯಂತೆ ಧವನ್ ಕೂಡ ನೆಟ್ಸ್‌ನಲ್ಲಿ ಫಾಸ್ಟ್ ಬೌಲಿಂಗ್ ಎದುರಿಸಲಿಲ್ಲ. ಆದರೆ ರಾಹುಲ್, ವಿಜಯ್, ಪೂಜಾರ ಕಠಿನ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು ಗಮನಾರ್ಹ. ಕೀಪರ್ ಸಾಹಾ ಬದಲು ಪಾರ್ಥಿವ್ ಪಟೇಲ್ ಅವರನ್ನು ಆಡಿಸುವ ಸುಳಿವು ಸಿಕ್ಕಿದೆ. ಸೆಂಚುರಿಯನ್ ಟ್ರ್ಯಾಕ್ ಭಾರತದ ಬೌಲರ್‌ಗಳ ಪಾಲಿಗೆ ಮತ್ತೆ ಯಶಸ್ಸು ತಂದುಕೊಡುವುದರಲ್ಲಿ ಅನುಮಾನವಿಲ್ಲ. ಕೇಪ್‌ಟೌನ್‌ನಲ್ಲಿ ಭಾರತದ ಬ್ಯಾಟಿಂಗ್ ಕೈಕೊಟ್ಟರೂ ಬೌಲರ್‌ಗಳು 20 ವಿಕೆಟ್ ಉಡಾಯಿಸಿ ಮೆರೆದಿದ್ದಾರೆ. ಇದೇನೂ ಸಾಮಾನ್ಯ ಸಾಧನೆಯಲ್ಲ. ಆದರೆ ಸೆಂಚುರಿಯನ್ ಅಂಗಳ ಸ್ವಿಂಗ್‌ಗೆ ಒಲಿಯದ ಕಾರಣ ಭುವನೇಶ್ವರ್ ಕುಮಾರ್ ಬದಲು ಅನುಭವಿ ಇಶಾಂತ್ ಶರ್ಮ ಆಡುವ ಸಾಧ್ಯತೆಯೊಂದು ಗೋಚರಿಸುತ್ತಿದೆ.
Related Articles
72 ರನ್ನುಗಳಿಂದ ಗೆದ್ದರೂ ದಕ್ಷಿಣ ಆಫ್ರಿಕಾ ಕೂಡ ಬ್ಯಾಟಿಂಗ್ ಸಮಸ್ಯೆಯಿಂದ ನರಳುತ್ತಿರುವುದನ್ನು ಮರೆಯು ವಂತಿಲ್ಲ. ಕೇಪ್‌ಟೌನ್ ಪಂದ್ಯದ 4ನೇ ದಿನ ಆತಿಥೇಯರ 8 ವಿಕೆಟ್ ಕೇವಲ 65 ರನ್ ಅಂತರದಲ್ಲಿ ಹಾರಿಹೋಗಿತ್ತು. ಇದು ಡು ಪ್ಲೆಸಿಸ್ ಬಳಗದ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಭಾರತದಂತೆ ಆಫ್ರಿಕಾ ಬ್ಯಾಟ್ಸ್‌ಮನ್‌ಗಳೂ ಬೇರೂರಿ ನಿಲ್ಲಬೇಕಿದೆ. ವೇಗಿ ಡೇಲ್ ಸ್ಟೇನ್ ಗೈರು ತಂಡಕ್ಕೊಂದು ಹಿನ್ನಡೆಯೇ ಅಲ್ಲ ಎಂಬುದನ್ನು ಕೇಪ್‌ಟೌನ್ ಪಂದ್ಯದ ಅಂತಿಮ ಇನ್ನಿಂಗ್ಸ್‌ನಲ್ಲಿ ಫಿಲಾಂಡರ್ ಸಾಬೀತುಪಡಿಸಿದ್ದಾರೆ. ಸ್ಟೇನ್ ಬದಲು ಯುವ ವೇಗಿ ಲುಂಗಿ ಎನ್‌ಗಿಡಿ ತವರಿನಂಗಳದಲ್ಲಿ ಟೆಸ್ಟ್ ಕ್ಯಾಪ್ ಧರಿಸಬಹುದು.
Advertisement