ಹೊಸದಿಲ್ಲಿ: “ಯುಪಿ ನೇ ಕಮಾಲ್ ಕರ್ ಕೆ ದಿಖಾ ದಿಯಾ’ (ಉತ್ತರ ಪ್ರದೇಶವು ಮೋಡಿ ಮಾಡಿ ಬಿಟ್ಟಿತು)…
ಇದು ಉತ್ತರಪ್ರದೇಶದಲ್ಲಿ ವಿಪಕ್ಷಗಳ ಕೂಟ ಇಂಡಿಯಾ ಸಾಧನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಉದ್ಗಾರ.
ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸಂಜೆ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, “ದೇಶದ ಜನರೇ ನಮಗೆ ನರೇಂದ್ರ ಮೋದಿ ಬೇಕಾಗಿಲ್ಲ’ ಎಂದು ತೀರ್ಮಾನಿಸಿದ್ದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದಿದ್ದಾರೆ. ದೇಶದ ಜನರಿಗೆ ಮೋದಿಯವರು ಪ್ರಧಾನಿಯಾಗಿ ಮುಂದುವರಿಯುವು ದು ಇಷ್ಟವಿಲ್ಲ ಎಂದು ಸಾಬೀತಾಗಿದೆ. ಅಮಿತ್ ಶಾ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಭವಿಷ್ಯವನ್ನೂ ನುಡಿದಿದ್ದಾರೆ.
ಇಂದು ತೀರ್ಮಾನ: ಇಂಡಿಯಾ ಒಕ್ಕೂಟದ ಮುಂದಿನ ಹೆಜ್ಜೆ ಬಗ್ಗೆ ಬುಧವಾರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ. ಒಕ್ಕೂಟಕ್ಕೆ ಜೆಡಿಯು ಮತ್ತು ಟಿಡಿಪಿ ಬೆಂಬಲದ ಬಗ್ಗೆ ಹಾಗೂ ಕೂಟದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಒಕ್ಕೂಟದ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಮೈತ್ರಿಪಕ್ಷಗಳ ಜತೆ ಚರ್ಚಿಸದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದರು.
ಉ.ಪ್ರ. ಜನರಿಂದ ರಕ್ಷಣೆ: ಉ.ಪ್ರ.ದ ಮತದಾರರು ಈ ದೇಶದ ಸಂವಿಧಾನ ರಕ್ಷಿಸಿ ದ್ದಾರೆ. ಅವರಿಗೆ ಧನ್ಯವಾದಗಳು ಎಂದು ರಾಹುಲ್ ಪ್ರತಿಪಾದಿಸಿದ್ದಾರೆ. ಈ ಚುನಾವಣೆ ಸಂವಿಧಾನ ರಕ್ಷಿಸುವ ಹೋರಾಟವಾಗಿತ್ತು. ಅದರಲ್ಲಿ ಉ.ಪ್ರ. ಯಶಸ್ವಿಯಾಗಿದೆ ಎಂದಿದ್ದಾರೆ.