ಹೊಸದಿಲ್ಲಿ: ಲಾಕ್‌ಡೌನ್ ವೇಳೆ ಭಾರತದ ವಿವಿಧೆಡೆ ಸಿಲುಕಿದ್ದ 72 ದೇಶಗಳ ಸುಮಾರು 60 ಸಾವಿರ ವಿದೇಶಿಗರನ್ನು ಕೇಂದ್ರ ಸರಕಾರ ಇದುವರೆಗೆ ಸ್ಥಳಾಂತರಿಸಿದೆ.
ಭಾರತದ ಅಲ್ಲಲ್ಲಿ ಕ್ವಾರಂಟೈನ್ ಮುಗಿಸಿರುವ ಈ ವಿದೇಶಿ ಪ್ರಜೆಗಳು ಈಗ ಸ್ವರಾಷ್ಟ್ರಗಳಿಗೆ ಮರಳಿದ್ದಾರೆ.
ಅಲ್ಲದೆ, ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ವಲಸಿಗರನ್ನು ಕರೆತರಲೂ ತೀವ್ರ ಚರ್ಚೆ ನಡೆಯುತ್ತಿದೆ. ‘ವಲಸಿಗ ಸಮದಾಯಕ್ಕೆ ಅಗತ್ಯವಿರುವ ಎಲ್ಲ ನೆರವನ್ನೂ ನೀಡುತ್ತಿದ್ದೇವೆ.
ಗಲ್ಫ್ ಮತ್ತು ಇತರೆ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಕರೆತರಲು ಈಗಾಗಲೇ ಕಾರ್ಯಾಚರಣೆ ಸಾಗಿದೆ.
ದೆಹಲಿಯಲ್ಲಿರುವ ವಿದೇಶಗಳ ರಾಯಭಾರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ, ಆಯಾ ದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಕೋರಲಾಗಿದೆ. ಮಾಲ್ಡಿವ್ಸ್, ಕುವೈತ್ ಸೇರಿದಂತೆ ಕೆಲವು ದೇಶಗಳಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು (ಆರ್‌ಆರ್‌ಟಿ) ರಚಿಸಲಾಗಿದೆ.
ಕಂಟ್ರೋಲ್ ರೂಮ್‌ಗಳಿಗೆ ವಿದೇಶಗಳಿಂದ ಬಂದಂಥ 10 ಸಾವಿರಕ್ಕೂ ಹೆಚ್ಚು ಕರೆ, 30 ಸಾವಿರ ಇಮೇಲ್ ದೂರುಗಳನ್ನು ಸ್ವೀಕರಿಸಲಾಗಿದ್ದು, ಸೂಕ್ತ ಸ್ಪಂದನೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿದೇಶಾಂಗ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.