ನವದೆಹಲಿ : ಪ್ರಧಾನಮಂತ್ರಿ ಜನಧನ ಯೋಜನೆ, ಡಿಜಿಟಲ್ ಮೂಲಸೌಕರ್ಯ ಮತ್ತು ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಬಳಕೆಯಂತಹ ಕ್ರಮಗಳಿಂದಾಗಿ ಭಾರತವು ಹಣಕಾಸಿನ ಒಳಗೊಳ್ಳುವಿಕೆಯಲ್ಲಿ ಚೀನಾವನ್ನೇ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಭಾರತದಲ್ಲಿ ಪ್ರತಿ 1 ಲಕ್ಷ ವಯಸ್ಕರಿಗೆ 2015ರಲ್ಲಿ 13.6 ಬ್ಯಾಂಕ್ ಶಾಖೆಗಳಿದ್ದರೆ, 2020ರಲ್ಲಿ ಅದು 14.7ಕ್ಕೇರಿದೆ. ಇದು ಜರ್ಮನಿ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಿಂತಲೂ ಹೆಚ್ಚು ಎಂದು ಎಸ್‌ಬಿಐ ವರದಿ ಹೇಳಿದೆ.
ಹಣಕಾಸಿನ ಒಳಗೊಳ್ಳುವಿಕೆ ನೀತಿಗಳು ದೇಶದ ಆರ್ಥಿಕ ಪ್ರಗತಿಯ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಿದ್ದು, ಬಡತನ ನೀಗಿಸಲು, ಆದಾಯದ ಅಸಮಾನತೆ ತಗ್ಗಿಸಲು ಹಾಗೂ ಆರ್ಥಿಕ ಸ್ಥಿರತೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದೂ ವರದಿ ತಿಳಿಸಿದೆ.
2014ರಿಂದ ಜನಧನ ಯೋಜನೆಯ ಮೂಲಕ ಭಾರತವು ಎಲ್ಲರನ್ನೊಳಗೊಂಡ ಹಣಕಾಸು ವ್ಯವಸ್ಥೆಗೆ ಚಾಲನೆ ನೀಡಿತ್ತು. ಇದರ ನಂತರ ಡಿಜಿಟಲ್ ಮೂಲಸೌಕರ್ಯಗಳು ಹೆಚ್ಚಿದ್ದು ಮಾತ್ರವಲ್ಲದೇ, ಬ್ಯಾಂಕ್ ಶಾಖೆಗಳ ಮರುಮಾಪನವೂ ಹೆಚ್ಚಾಯಿತು. 2015 ಮತ್ತು 2020ರ ನಡುವೆ ಡಿಜಿಟಲ್ ಪಾವತಿಯ ಬಳಕೆ ಅತಿಯಾಗಿದ್ದು ಕೂಡ ಈ ರೀತಿಯಾಗಿ ಹಣಕಾಸಿನ ಒಳಗೊಳ್ಳುವಿಕೆ ಹೆಚ್ಚಾಗಲು ಕಾರಣ. ಪ್ರತಿ 1,000 ವಯಸ್ಕರ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟು ಪ್ರಮಾಣ 2015ರಲ್ಲಿ 183 ಇದ್ದಿದ್ದು, 2019ರಲ್ಲಿ 13,615ಕ್ಕೆ ಹೆಚ್ಚಳವಾಗಿದೆ ಎಂದೂ ವರದಿ ಹೇಳಿದೆ.
ಇದನ್ನೂ ಓದಿ : ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಚನ ಬಿಡುಗಡೆ ಮಾಡಿದ ಸಿಎಂ
ಇದೇ ವೇಳೆ, ಯಾವ ರಾಜ್ಯಗಳಲ್ಲಿ ಜನಧನ ಖಾತೆಯಲ್ಲಿ ಜಮೆಯಾದ ಮೊತ್ತವು ಹೆಚ್ಚಿದೆಯೋ ಅಂಥ ರಾಜ್ಯಗಳಲ್ಲಿ ಅಪರಾಧಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಆಲ್ಕೋಹಾಲ್ ಮತ್ತು ತಂಬಾಕು ಪದಾರ್ಥಗಳ ಸೇವನೆ ಪ್ರಮಾಣವೂ ಕಡಿಮೆಯಾಗಿದೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.