ಚೆನ್ನೈ: ಮಧ್ಯಮ ವೇಗಿಗಳಾದ ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಸೇನ್ ಅವರ ಘಾತಕ ದಾಳಿ ನೆರವಿನಿಂದ ನ್ಯೂಜಿಲೆಂಡ್ “ಎ’ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ “ಎ’ 7 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪ್ರವಾಸಿ ತಂಡ 40.2 ಓವರ್‌ಗಳಲ್ಲಿ 167ಕ್ಕೆ ಕುಸಿದರೆ, ಭಾರತ “ಎ’ 31.5 ಓವರ್‌ಗಳಲ್ಲಿ 3 ವಿಕೆಟಿಗೆ 170 ರನ್ ಬಾರಿಸಿತು. ಶಾರ್ದೂಲ್ ಠಾಕೂರ್ 4, ಕುಲದೀಪ್ ಸೇನ್ 3 ವಿಕೆಟ್ ಕಿತ್ತು ಆರಂಭದಲ್ಲೇ ನ್ಯೂಜಿಲೆಂಡ್ “ಎ’ ತಂಡದ ಹಳಿ ತಪ್ಪಿಸಿದರು.
19ನೇ ಓವರ್ ಆರಂಭದ ವೇಳೆ ಅದು 74ಕ್ಕೆ 8 ವಿಕೆಟ್ ಕಳೆದುಕೊಂಡು ಚಡಪಡಿಸುತ್ತಿತ್ತು. 9ನೇ ವಿಕೆಟಿಗೆ ಜತೆಗೂಡಿದ ಮೈಕಲ್ ರಿಪ್ಪನ್ ಮತ್ತು ಜೋ ವಾಕರ್ ಸೇರಿಕೊಂಡು ಹೋರಾಟವೊಂದನ್ನು ಸಂಘಟಿಸಿದರು. 89 ರನ್ ಒಟ್ಟುಗೂಡಿಸಿದರು. ನೂರರೊಳಗೆ ಕುಸಿಯಬೇಕಿದ್ದ ಕಿವೀಸ್ 160ರ ಗಡಿ ದಾಟಿತು.
ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್: ಇಂದ್ರಜಿತ್ ಶತಕ; ದಕ್ಷಿಣಕ್ಕೆ ಮುನ್ನಡೆ
ಸಂಜು ಸ್ಯಾಮ್ಸನ್ ಪಡೆಗೆ ಈ ಮೊತ್ತವೇನೂ ಸವಾಲಾಗಿ ಕಾಡಲಿಲ್ಲ. ಸ್ವತಃ ಸ್ಯಾಮ್ಸನ್ (ಅಜೇಯ 29) ಮತ್ತು ಪ್ರಚಂಡ ಫಾರ್ಮ್ನಲ್ಲಿರುವ ರಜತ್ ಪಾಟೀದಾರ್ (ಅಜೇಯ 45) 4ನೇ ವಿಕೆಟಿಗೆ 69 ರನ್ ಒಟ್ಟುಗೂಡಿಸಿ ನಿರಾಯಾಸವಾಗಿ ತಂಡವನ್ನು ದಡ ಸೇರಿಸಿದರು. ಔಟಾದವರೆಂದರೆ ಪೃಥ್ವಿ ಶಾ (17), ಋತುರಾಜ್ ಗಾಯಕ್ವಾಡ್ (41) ಮತ್ತು ರಾಹುಲ್ ತ್ರಿಪಾಠಿ (31). ಇವರನ್ನು 101ರ ಮೊತ್ತದ ವೇಳೆ ಕೆಡವಿದ ನ್ಯೂಜಿಲ್ಯಾಂಡ್‌ಗೆ ಮತ್ತೆ ಯಶಸ್ಸು ಸಿಗಲಿಲ್ಲ.ದ್ವಿತೀಯ ಪಂದ್ಯ ರವಿವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್ ಎ’-40.2 ಓವರ್‌ಗಳಲ್ಲಿ 167 (ರಿಪ್ಪನ್ 61, ವಾಕರ್ 36, ಒ’ಡೊನೆಲ್ 22, ಶಾರ್ದೂಲ್ ಠಾಕೂರ್ 32ಕ್ಕೆ 4, ಕುಲದೀಪ್ ಸೇನ್ 30ಕ್ಕೆ 3, ಕುಲದೀಪ್ ಯಾದವ್ 22ಕ್ಕೆ 1). ಭಾರತ ಎ’-31.5 ಓವರ್‌ಗಳಲ್ಲಿ 3 ವಿಕೆಟಿಗೆ 170 (ಶಾ 17, ಗಾಯಕ್ವಾಡ್ 41, ತ್ರಿಪಾಠಿ 31, ಸ್ಯಾಮ್ಸನ್ ಔಟಾಗದೆ 29, ಪಾಟೀದಾರ್ ಔಟಾಗದೆ 45).