ಇಂಡಿ: ಭೀಕರ ಬರಗಾಲಕ್ಕೆ ತುತ್ತಾದ ತಾಲೂಕು. ಕೆಂಡದಂತಹ ಬಿಸಿಲು ಸುಡು ಗಾಳಿಯಿಂದ ಬಸವಳಿದು ನೀರಿಗಾಗಿ ಹುಡುಕಾಡುವ ಜನಕ್ಕೆ ಹೋಟೆಲ್ಗಳಿಗೆ ಹೋದರೆ ಕನಿಷ್ಠ ಐದು ರೂ. ಖರ್ಚು ಮಾಡಿ ಚಹಾ ಕುಡಿದರೆ ಒಂದು ಲೋಟ ನೀರು ನೀಡುವ ಸಮಯದಲ್ಲಿ ಉಚಿತವಾಗಿ ತಣ್ಣನೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಯುವಕನೊಬ್ಬ ಇತರರಿಗೆ ಮಾದರಿಯಾಗಿದ್ದಾನೆ.
ಬಸ್ ನಿಲ್ದಾಣದ ಮುಂಭಾಗ, ಸಿಂದಗಿ ರಸ್ತೆಯ ಮಿನಿ ವಿಧಾನಸೌಧ ಮುಂಭಾಗ, ಪೊಲೀಸ್ ಠಾಣೆ ಹತ್ತಿರ, ಅಂಬೇಡ್ಕರ್ ಹಾಗೂ ಮಹಾವೀರ ವೃತ್ತದಲ್ಲಿ ಮಡಿಕೆಗಳಲ್ಲಿ ತಣ್ಣನೆ ನೀರು ತುಂಬಿಸಿ ಬಿಸಿಲಿನಿಂದ ಬಾಯಾರಿದ ಜನರ ದಾಹ ತಣಿಸುತ್ತಿರುವ ಪಟ್ಟಣದ ಬೀರಪ್ಪ ನಗರದ ನಿವಾಸಿ ಸಂಜು ಪವಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಮಾ. 15ರಿಂದಲೇ ಪಟ್ಟಣದ ವಿವಿಧೆಡೆ ತನ್ನ ಸ್ವಂತ ಖರ್ಚಿನಿಂದ 30 ಮಡಿಕೆ ಖರೀದಿಸಿ ಪ್ರತಿ ದಿನ ಕನಿಷ್ಠ ಎರಡು ಬಾರಿಯಾದರೂ ಅವುಗಳಿಗೆ ನೀರು ತುಂಬಿಸುತ್ತಾನೆ. ಗ್ರಾಮೀಣ ಭಾಗದಿಂದ ಬಂದ ಜನರಿಗೆ ಹಾಗೂ ಬಿಸಿಲಿನಲ್ಲಿ ತಿರುಗಾಡಿ ಬಾಯಾರಿದ ಸ್ಥಳೀಯರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ನೀರಿನ ಸೇವೆ ಮಾಡುತ್ತಿದ್ದಾನೆ. ಪಟ್ಟಣಕ್ಕೆ ಬರುವ ಪ್ರವಾಸಿಗರು, ವಿವಿಧ ಗ್ರಾಮಗಳ ಜನರು ಬಾಯ್ತುಂಬ ಹರಸಿ ಹಾರೈಸುತ್ತ ಹೋಗುತ್ತಿದ್ದಾರೆ.
ಬರದ ನಾಡಿನಲ್ಲಿ ನೀರು ನೀಡುತ್ತಿರುವ ಸಂಜು ಪವಾರ ಅವರ ಕಾರ್ಯವನ್ನು ಜನ ಸಾಮಾನ್ಯರು ಶ್ಲಾಘಿಸುತ್ತಿದ್ದಾರೆ. ಸರ್ಕಾರ ಮಾಡದಿರುವ ಕಾರ್ಯವನ್ನು ಸಂಜು ಪವಾರ ಮಾಡುತ್ತಿದ್ದಾರೆ. ಸ್ವಂತ ಟ್ರ್ಯಾಕ್ಟರ್ ಹೊಂದಿರುವ ಅವರು ಬೇರೆಯವರ ಹತ್ತಿರ ಹಣ ಕೊಟ್ಟು ನೀರು ತುಂಬಿಸಿಕೊಂಡು ಬಂದು ಮಡಿಕೆ ತುಂಬಿಸುತ್ತಿದ್ದಾರೆ. ಮಡಿಕೆಯಲ್ಲಿ ನೀರು ಖಾಲಿಯಾದೊಡನೆ ಅವರು ತಡಮಾಡದೆ ಮತ್ತೆ ನೀರು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ಮಡಿಕೆ ಇಟ್ಟ ದಿನದಿಂದ ಬಾಟಲ್ ನೀರಿಗೆ ಮೊರೆ ಹೋಗಿದ್ದ ಇಂಡಿ ಪಟ್ಟಣದ ಜನ ಮಡಿಕೆ ನೀರಿಗೆ ಮರಳಿರುವುದು ವಿಶೇಷವಾಗಿದೆ. ಸಂಜು ಪವಾರ ಮಾಡಿದ ಈ ಕಾರ್ಯವನ್ನು ಪ್ರತಿ ಗ್ರಾಮ ಹಾಗೂ ಪಟ್ಟಣಗಳಲ್ಲಿ ಗ್ರಾಪಂ, ಪಪಂ, ಪುರಸಭೆಯವರು ಮಾಡಿದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದೆಂದು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಪ್ರತಿ ಬಾರಿಯೂ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗುತ್ತಿದೆ. ಹಳ್ಳಿಗಳಿಂದ ಬಂದ ಜನ, ಕಾಲೇಜು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವುದನ್ನು ಕಂಡು ಈ ಕಾರ್ಯ ಮಾಡಿದ್ದೇನೆ. ನನ್ನದೇ ಸ್ವಂತ ಟ್ಯಾಂಕರ್ ಇರುವುದರಿಂದ ನೀರು ಕೊಟ್ಟು ಹಣ ತುಂಬಿಕೊಂಡು ಮಡಿಕೆ ತುಂಬಿಸಿ ಕೈಲಾದಷ್ಟು ಸೇವೆ ಮಾಡುತ್ತಿದ್ದೇನೆ.
•
ಸಂಜು ಪವಾರ, ಬೀರಪ್ಪ ನಗರದ ನಿವಾಸಿ
ಕಳೆದ ನಾಲ್ಕು ವರ್ಷಗಳಿಂದ ಪಟ್ಟಣದ ಯುವಕ ಸಂಜು ಪವಾರ ಜನರ ನೀರಿನ ದಾಹ ತೀರಿಸುವ ಕೆಲಸ ಮಾಡುತ್ತಿದ್ದಾನೆ. ನೀರು ಪೂರೈಸುತ್ತಿರುವವನಿಗೆ ಒಳ್ಳೆಯದಾಗುತ್ತದೆ. ಬೇಸಿಗೆಯಲ್ಲಿ ಇಂತಹ ಕಾರ್ಯ ಮಾಡಿದ ಕಾರ್ಯ ಶ್ಲಾಘನೀಯ. ತಾಲೂಕಿಗೆ ಸಂಜು ಪವಾರ ಒಬ್ಬ ಮಾದರಿ ಯುವಕನಾಗಿದ್ದಾನೆ.
•
ಅಶೋಕಗೌಡ ಬಿರಾದಾರ,
ಸ್ಥಳೀಯ ನಿವಾಸಿ
ಉಮೇಶ ಬಳಬಟ್ಟಿ