ವಿಜಯಪುರ: ಜಯಪ್ರಕಾಶ ನಾರಾಯಣ ಅವರ ಸಿದ್ದಾಂತದ ಹಿನ್ನೆಲೆಯ ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿರುವ ಹಾಗೂ ಕೌಟುಂಬಿಕ ಪಕ್ಷ ಕಟ್ಟಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಇಂಡಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜನಾದೇಶ ಇಲ್ಲದೇ ಮುಖ್ಯಮಂತ್ರಿಯಾಗಿದ್ದ ನೀವು ಅಧಿಕಾರ ನಡೆಸುವಲ್ಲಿ ವಿಫಲರಾಗಿ ಕಾಂಗ್ರೆಸ್ ಟೀಕಿಸುತ್ತಿದ್ದೀರಿ. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ:12 ವರ್ಷ ದಲೈಲಾಮಾ ಭದ್ರತೆಯಲ್ಲಿ ಯೋಧನಂತೆ ಸೇವೆ ಸಲ್ಲಿಸಿದ್ದ ಶ್ವಾನ ಹರಾಜಿನಲ್ಲಿ ಮಾರಾಟ
ಪ್ರಜಾಪ್ರಭುತ್ವಕ್ಕೆ ಮಾರಕವಾದ ಜನಾದೇಶದ ಸರ್ಕಾರಗಳನ್ನು ಉರುಳಿಸಿ ಅಧಿಕಾರಕ್ಕೆ ಏರುವ ಅನೈತಿಕ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರು, ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದೀರಿ. ಅನೈತಿಕ ಮಾರ್ಗದಿಂದ ಅಧಿಕಾರಕ್ಕೆ ಬಂದು ಸಾಧಿಸಿದ್ದೇನು ಎಂದು ಪ್ರಶ್ನಿಸಿದರು.
ಇಂಡಿ ತಾಲೂಕ ಕೇಂದ್ರವನ್ನು ಜಿಲ್ಲಾ ಕೇಂದ್ರವಾಗಿ ಮಾಡುವುದು ಹಾಗೂ ಬರ ಪೀಡಿತ ಈ ನೆಲವನ್ನು ಸಮಗ್ರ ನೀರಾವರಿ ಮಾಡುವುದು ನನ್ನ ರಾಜಕೀಯ ಭವಿಷ್ಯದ ಕನಸು. ಇದನ್ನು ಸಾಕಾರಗೊಳಿಸುವಲ್ಲಿ ಕ್ಷೇತ್ರದ ಜನರು ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.