ಇಂಡಿ : ಮಹಾರಾಷ್ಟ್ರ ಗಡಿ ಭಾಗದಲ್ಲಿ ಮರಳು ಸಾಗಾಟ ವ್ಯಾಜ್ಯಕ್ಕೆ ಸಂಬಂಧಿಸಿ ಮೂವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಸಂಕಪ್ಪ ಪಾಟೀಲ್ ಮತ್ತು ಮೂವರು ಬೆಂಬಲಿಗರನ್ನು ಬಂಧಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ರೇವತಂಗಾವ ಗ್ರಾಮ ಪಂಚಾಯತ್ ಅಧ್ಯಕ್ಷೆಯ ಮಗ ಕಾಮೇಶ್ ಪಾಟೀಲ್ ಮತ್ತು ಇಬ್ಬರು ಸ್ನೇಹಿತರಿದ್ದ ಕಾರನ್ನು ಮಹಾರಷ್ಟ್ರ ಗಡಿ ಭಾಗದಲ್ಲಿ ತಡೆದು ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಮರಳು ವ್ಯಾಜ್ಯಕ್ಕೆ ಸಂಬಂಧಿಸಿ ಪಿಂಟೂ ಪಾಟೀಲ್ ಎಂಬಾತನ್ನು ಗುರಿಯಾಗಿಸಿಕೊಂಡು ಈ ಹಲ್ಲೆ ನಡೆಸಿದ್ದು, ತಪ್ಪಿ ಕಾಮೇಶ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕಾಮೇಶ್ ಮತ್ತು ಸ್ನೇಹಿತರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಝಳಕಿ ಪೊಲೀಸರು ಮಾಜಿ ಶಾಸಕ ರವಿಕಾಂತ ಪಾಟೀಲ್ ಮತ್ತು ಸಹಚರರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ತಡೆದ ಕಾರ್‌ಕ್ಕೆ ರವಿಕಾಂತ ಪಾಟೀಲ್ ಅವರಿಗೆ ದಂಧೆಕೋರರು ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ ಘಟನೆ ಜೂನ್ 24 ರಂದು ನಡೆದಿತ್ತು.
ಸೊಲ್ಲಾಪುರದ ಶೇಗಾಂವ ಗ್ರಾಮದ ಮರಳು ದಂಧೆ ನಡೆಸುತ್ತಿರುವ ಪಿಂಟು ಪಾಟೀಲ್ ನಾಲ್ವರು ಸಹಚರರೊಂದಿಗೆ ದಾಳಿ ನಡೆಸಿದ್ದ ಎಂದು ರವಿಕಾಂತ್ ಪಾಟೀಲ್ ದೂರು ನೀಡಿದ್ದಾರೆ.