ಇಂಡಿ: ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಿಬ್ಬರ ನಡುವೆ ಪೈಪೋಟಿ ನಡೆದಿದ್ದು, ಓರ್ವ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ತಾಲೂಕು ಪಂಚಾಯತ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಘಟನೆ ಸೋಮವಾರ ನಡೆದಿದೆ.
ಪ್ರತಿಭಟನೆ ನಡೆಸುತ್ತಿರುವ ಇಓ ಗುರುಶಾಂತಪ್ಪ ಬೆಳ್ಳುಂಡಗಿ ಅವರು ಜುಲೈ 29 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ಪಂಚಾಯತಿಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಪಂಚಾಯತ್ ಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದರು.
ಮತ್ತೆ ಸರ್ಕಾರ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಾ ಪಂಚಾಯತ್ ಕಾರ್ಯಾಲಯಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ, ನಾನು ಅಧಿಕಾರ ಸ್ವೀಕರಿಸಿ ಕೇವಲ ಒಂದು ವಾರ ಕಳೆದಿದೆ. ಆದರೆ ಒಂದೇ ವಾರದಲ್ಲಿ ಮತ್ತೆ ವರ್ಗಾವಣೆ ಹೇಗೆ ಸಾಧ್ಯ? ಜುಲೈ 29ರ ವರೆಗೆ ಸರ್ಕಾರ ವರ್ಗಾವಣೆಗೆ ದಿನಾಂಕ ನಿಗದಿಗೊಳಿಸಿತ್ತು, ಆದರೂ ಸಹ ಜುಲೈ 31 ರಂದು ಆದೇಶ ಹೊರಡಿಸಿ ಇಂಡಿ ತಾಲೂಕ ಪಂಚಾಯತ್ ಕಚೇರಿಗೆ ಬಾಬುರಾವ್ ರಾಠೋಡ ಅವರನ್ನು ಹೆಚ್ಚುರಿಯಾಗಿ ನಿಯುಕ್ತಿಗೊಳಿಸಿರುವುದು ಎಷ್ಟು ಸರಿ? ಎಂದು ಗುರುಶಾಂತಪ್ಪ ಬೆಳ್ಳುಂಡಗಿ ಪ್ರಶ್ನಿಸಿದ್ದಾರೆ.
ಈ ಕುರಿತು ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಅವರು ಸರ್ಕಾರ ನನ್ನನ್ನು ಏಕೆ ಕಡೆಗಣಿಸುತ್ತಿದೆ? ನಾನೊಬ್ಬ ನಿವೃತ್ತ ಸೈನಿಕನಾಗಿದ್ದರೂ ಸಹ ನನಗೆ ಯಾವುದೇ ಗೌರವ ನೀಡದೆ ಏಕಾಏಕಿ ಬೇರೆ ಬೇರೆ ಕಡೆ ವರ್ಗಾವಣೆ ಮಾಡುತ್ತಿರುವುದು ಎಷ್ಟು ಸರಿ? ನಾನು ಧರಣಿ ಕುಳಿತ ಸ್ಥಳಕ್ಕೆ ಯಾರೂ ಬಂದಿಲ್ಲ, ನಾನು ಸತ್ತ ಮೇಲೆ ನನ್ನ ಮಕ್ಕಳಿಗೆ 5 ಲಕ್ಷ ಪರಿಹಾರ ಕೊಡಲು ಬರುತ್ತಾರೆಯೇ? ಆಗ ನನಗೆ ಬಂದು ಸಾಂತ್ವನ ಹೇಳಲು ಸಾಧ್ಯವೇ ಎಂದು ದುಃಖಭರಿತರಾಗಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಅಧಿಕಾರ ವಹಿಸಿಕೊಂಡಿರುವ ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬುರಾವ್ ರಾಠೋಡ ಅವರನ್ನು ಪ್ರಶ್ನಿಸಲಾಗಿ ಸರ್ಕಾರದ ಆದೇಶದಂತೆ ನಾನು ಇಂಡಿ ತಾಲೂಕ ಪಂಚಾಯತಿಗೆ ಬಂದು ಅಧಿಕಾರ ಸ್ವೀಕರಿಸಿದ್ದೇನೆ. ನಾನು ಈಗಾಗಲೇ ವಿಜಯಪುರ ತಾಲೂಕಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುರಿಯಾಗಿ ಇಂಡಿಯಯನ್ನು ನನಗೆ ನೀಡಿದ್ದಾರೆ, ಆದೇಶದ ಪ್ರಕಾರ ಬಂದು ಅಧಿಕಾರ ಸ್ವೀಕರಿಸಿ ಕಾರ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಶಾಸಕರಿಗೆ ಕೇಳದೆ ಅಧಿಕಾರ ಸ್ವೀಕರಿಸಿಕೊಂಡ ಹಿನ್ನೆಲೆಯಲ್ಲಿ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ಮತ್ತೊಂದೆಡೆ ವರ್ಗಾವಣೆ ಮಾಡಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಶಾಸಕರು ಸರ್ಕಾರದ ಒಂದು ಭಾಗವಾಗಿದ್ದು ಸರ್ಕಾರವೇ ಆದೇಶ ಹೊರಡಿಸಿದೆ. ಹೀಗಾಗಿ ಅವರು ಹಸ್ತಕ್ಷೇಪ ಮಾಡಬಾರದಿತ್ತು ಎಂದು ಪ್ರತಿಕ್ರಿಸಿದ್ದು ಈ ವರ್ಗಾವಣೆಯಲ್ಲಿ ಶಾಸಕರ ಪಾತ್ರವಿದೆಯೇ ಎಂಬ ಶಂಕೆ ಸಹಜವಾಗಿಯೇ ವ್ಯಕ್ತವಾಗುತ್ತಿದೆ.