Advertisement

ಅಭ್ಯರ್ಥಿಗಳ ಸ್ವತಂತ್ರ ಹರಣ?

11:19 AM Oct 14, 2017 | Team Udayavani |

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ  ಚುನಾವಣೆಗಳಲ್ಲಿ ಪಕ್ಷೇತರ ಅಥವಾ ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆಗೆ ಕಡಿವಾಣ ಹಾಕಲಾಗುತ್ತದೆಯೇ? ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಇವರಿಂದಲೇ ಚುನಾವಣಾ  ವ್ಯವಸ್ಥೆಯಲ್ಲಿ ಅಸ್ಥಿರತೆ ಮೂಡುತ್ತಿದೆ ಎಂಬ ಆರೋಪ ಮಾಡಲಾಗಿದೆ. 

Advertisement

ಹೀಗಾಗಿ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆಗೆ ಕಡಿವಾಣ ಹಾಕಬೇಕು ಎಂದು  ಕೋರಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಅಭಿಪ್ರಾಯ ಕೋರಿ  ನೋಟಿಸ್‌ ನೀಡಲಾಗಿದೆ. 

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ,  ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಕಾನೂನು  ಸಚಿವಾಲಯ ಮತ್ತು ಚುನಾವಣಾ ಆಯೋಗಗಳು ಇನ್ನು 4 ವಾರಗಳಲ್ಲಿ ಉತ್ತರ ನೀಡಬೇಕಿದೆ.

 ಚುನಾವಣಾ ವ್ಯವಸ್ಥೆಯಲ್ಲಿ ಅಸ್ಥಿರತೆ ಮತ್ತು ಮತಗಳು ಹಂಚಿಹೋಗುವುದಕ್ಕೆ ಕಾರಣವಾಗುತ್ತಿರುವ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆಗೆ ಕಡಿವಾಣ ಹಾಕಬೇಕು ಎಂದು ಪಿಐಎಲ್‌ನಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಸಾಧಕ  ಬಾಧಕಗಳ ಬಗ್ಗೆ ಹೇಳುವಂತೆ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ  ಯೋಗಕ್ಕೆ ಕೋರ್ಟ್‌ ನೋಟಿಸ್‌ ನೀಡಿದೆ.

ಒಂದು ವೇಳೆ, ಸರ್ಕಾರ ಮತ್ತು ಆಯೋಗ ಇದಕ್ಕೆ ಒಪ್ಪಿಗೆನೀಡಿ, ಸುಪ್ರೀಂಕೋರ್ಟ್‌ ಕೂಡ ಪೂರಕ ತೀರ್ಪು ನೀಡಿದಲ್ಲಿ ಪಕ್ಷೇತರ ಅಭ್ಯರ್ಥಿಗಳ ಜಮಾನ ಕೊನೆಯಾಗಲಿದೆ. ಎರಡು ಕ್ಷೇತ್ರಗಳ ಸ್ಪರ್ಧೆಯೂ ಬೇಡ: ಚುನಾವಣಾ  ವ್ಯವಸ್ಥೆಯಲ್ಲಿನ ಸುಧಾರಣೆಗಾಗಿ ಯಾವುದೇ ಅಭ್ಯರ್ಥಿಗಳು ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂಬ  ಬಗ್ಗೆಯೂ ಮನವಿ ಸಲ್ಲಿಸಲಾಗಿದೆ.

Advertisement

2004ರಲ್ಲೇ ಈ ಬಗ್ಗೆ ಚರ್ಚೆ ಶುರುವಾಗಿತ್ತು. ಆದರೆ ಇದುವರೆಗೂ ಈ ಸಂಪ್ರದಾಯಕ್ಕೆ ಕಡಿವಾಣ ಹಾಕಿಲ್ಲದು ಅರ್ಜಿದಾರರು ಮನವಿ ಮಾಡಿದ್ದಾರೆ. ಏಕಕಾಲದಲ್ಲಿ 2 ಕ್ಷೇತ್ರಗಳಲ್ಲಿ ನಿಲ್ಲುವ ವ್ಯಕ್ತಿ, ಈ ಎರಡರಲ್ಲೂ ಗೆದ್ದರೆ ಒಂದನ್ನು ಇರಿಸಿಕೊಂಡು ಮತ್ತೂಂದನ್ನು ಬಿಡಬೇಕಾಗುತ್ತದೆ. ಆಗ ಅನಿವಾರ್ಯವಾಗಿ ಉಪಚುನಾ ವಣೆ ನಡೆಸ ಬೇಕಾಗುತ್ತದೆ.

ಈ ಪ್ರಕ್ರಿಯೆಯಿಂದ ದೇಶದ ಬೊಕ್ಕಸಕ್ಕೆ ನಷ್ಟವೇ ಹೊರತು, ಲಾಭವೇನಿಲ್ಲ. ಹೀಗಾಗಿ ಯಾರೂ ಎರಡು ಕಡೆಯಿಂದ ಸ್ಪರ್ಧೆ ಮಾಡದಂತೆ ಮಾಡಬೇಕು ಎಂದು ಅರ್ಜಿದಾರರು  ಕೋರಿದ್ದಾರೆ. ಜತೆಗೆ ಕೇಂದ್ರ ಚುನಾವಣಾ ಆಯೋಗವೇ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವವರಿಗೆ ಕಡಿವಾಣ ಹಾಕಲು ಕೆಲವೊಂದು ಶಿಫಾರಸು ಗಳನ್ನೂ ನೀಡಿದೆ.

ಇದರ ಪ್ರಕಾರ, ಎರಡು ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ, ಒಂದರಲ್ಲಿ ರಾಜೀನಾಮೆ ನೀಡಿದ ಬಳಿಕ ಆ ಕ್ಷೇತ್ರದ ಉಪಚುನಾವಣೆಯ ಸಂಪೂರ್ಣ ವೆಚ್ಚವನ್ನು ಆತನೇ ಭರಿಸಬೇಕು. ಆದರೆ ಕೇಂದ್ರ ಸರ್ಕಾರ ಇದುವರೆಗೂ ಈ ಸಲಹೆಗಳನ್ನು ಜಾರಿಗೆ ತಂದೇ  ಇಲ್ಲ ಎಂದೂ ಅರ್ಜಿಯಲ್ಲಿ ಉಲ್ಲೇಖೀಸಲಾಗಿದೆ. 

ಏಕಕಾಲದ ಚುನಾವಣೆ?
ಇಡೀ ದೇಶದಲ್ಲೇ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಸಾಧ್ಯಾಸಾಧ್ಯತೆಗಳ ಕುರಿತಂತೆ ಚರ್ಚೆ ನಡೆಯುತ್ತಿರುವಾಗಲೇ ಸುಪ್ರೀಂಕೋರ್ಟ್‌  ಕೂಡ ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ.

ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು  ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿ ಅಭಿಪ್ರಾಯ ಕೇಳಿದೆ. ಒಂದೇ ಬಾರಿಗೆ ಚುನಾವಣೆ ನಡೆದರೆ ಖರ್ಚು ವೆಚ್ಚ ಕಡಿಮೆಯಾಗುತ್ತದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದೇ ವೇಳೆ ಚುನಾವಣಾ ನಂತರದ ಮತಎಣಿಕೆಗಾಗಿ ಟೋಟಲೈಸರ್‌ ಎಂಬ  ವ್ಯವಸ್ಥೆ ತರಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಇದರಿಂದಾಗಿ ಒಮ್ಮೆಗೇ 14 ಮತಕೇಂದ್ರಗಳ ಮತಗಳನ್ನು ಎಣಿಸಬಹುದಾಗಿದೆ. ಆಗ ಮತಕೇಂದ್ರವೊಂದರಲ್ಲಿ ಯಾರಿಗೆ ಹೆಚ್ಚು ಓಟು ಬಿದ್ದಿವೆ ಎಂಬುದನ್ನು ತಿಳಿಯಲು ಕಷ್ಟವಾಗುತ್ತದೆ. ಇದರಿಂದಾಗಿ  ದ್ವೇಷದ ರಾಜಕಾರಣ ತಪ್ಪುತ್ತದೆ ಎಂದು ಉಲ್ಲೇಖೀಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next