ಹೊಸದಿಲ್ಲಿ: ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಮಂಗಳವಾರ ಸಂಸತ್ ಅಧಿವೇಶನದಲ್ಲಿ ಮೊದಲ ಬಾರಿಗೆ ಮಾತನಾಡಿದ್ದು, ರೈತರು ಮತ್ತು ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾವಿಸಿ ಗಮನ ಸೆಳೆದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ಸುಮಲತಾ ಮೊದಲಿಗೆ ನನ್ನ ಮಂಡ್ಯದ ಸ್ವಾಭಿಮಾನಿ ಜನತೆಗೆ ಧನ್ಯವಾದಗಳು ಎಂದರು. ಆ ಬಳಿಕ ನಿರರ್ಗಳವಾಗಿ ಇಂಗ್ಲೀಷ್‌ನಲ್ಲಿ ಕ್ಷೇತ್ರದ ರೈತರ ಸಮಸ್ಯೆಗಳನ್ನು ಬಿಡಿಸಿಟ್ಟರು.
ನನ್ನ ಕೇತ್ರ ವ್ಯಾಪ್ತಿಯಲ್ಲಿ ತೀವ್ರ ನೀರಿನ ಅಭಾವವಿದೆ. ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆಯಿಂದ ಕಬ್ಬು ಮತ್ತು ಭತ್ತ ಬೆಳೆಗಾರರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉತ್ಪನ್ನಗಳಿಗೆ ಅಸಮರ್ಪಕ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳು ಬಾಕಿ ಮರುಪಾವತಿ ನೀಡದೆ ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ ಸಾಲ ಮನ್ನಾ ಭರವಸೆಯ ನ್ನು ಈಡೇರಿಸಲು ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದರು.
ತೀವ್ರವಾಗಿರುವ ಕುಡಿಯುವ ನೀರಿನ ಬಿಕ್ಕಟ್ಟು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಇದು ನೂರಾರು ಹತಾಶ ರೈತರ ಆತ್ಮಹತ್ಯೆಗಳಿಗೆ ಸಿದ್ಧ ಸೂತ್ರವಾಗಬಹುದು ಎಂದು ನನಗೆ ಹೆದರಿಕೆಯಾಗುತ್ತಿದೆ. ಗಂಭೀರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕ್ರಮಗಳನ್ನು ಒದಗಿಸುವಂತೆ ನಾನು ಪ್ರಧಾನಮಂತ್ರಿ ಮತ್ತು ಜಲ ಶಕ್ತಿ ಮಿಶನ್‌ಗೆ ಮನವಿ ಮಾಡುತ್ತೇನೆ ಎಂದರು.