Advertisement

ಶಾಲೆ ಉಳಿವಿಗಾಗಿ ಜೈಲಿಗೆ ಹೋಗದ ಸ್ವಾತಂತ್ರ್ಯ ಹೋರಾಟಗಾರ

06:10 AM Aug 07, 2017 | |

ಉಡುಪಿ: ಕುರ್ಕಾಲು ಗಣಪಯ್ಯ ಶೆಟ್ಟಿಯವರು ತಮ್ಮ ಗುರುಗಳಾದ ಪಂಜೆ ಮಂಗೇಶ ರಾವ್‌, ಉಳ್ಳಾಲ ಮಂಗೇಶ ರಾಯರ ಪ್ರೇರಣೆಯಿಂದ ಇತ್ತ ಶೈಕ್ಷಣಿಕ ಕ್ರಾಂತಿಯನ್ನೂ ಅತ್ತ ಸ್ವಾತಂತ್ರ್ಯ ಹೋರಾಟವನ್ನೂ ಏಕಕಾಲದಲ್ಲಿ ನಡೆಸಿದವರು.
 
ಮನೆಯ ಚಾವಡಿಯಲ್ಲಿಯೇ ಶಾಲೆ
ಶೆಟ್ಟಿಯವರು ಆರಂಭದಲ್ಲಿ ಕುರ್ಕಾಲಿನ ಪಾಲೆಮಾರು ಮನೆಯ ಚಾವಡಿಯಲ್ಲಿಯೇ 1918ರಲ್ಲಿ ಶಾಲೆ ತೆರೆದರು. ಶಾಲಾ ಪರಿವೀಕ್ಷಣಾಧಿಕಾರಿಗಳ ಸಲಹೆಯಂತೆ ಮಂಗಳೂರಿನ ಶಿಕ್ಷಕ ತರಬೇತಿ ಕೇಂದ್ರಕ್ಕೆ ಸೇರಿ ಕಲಿತಾಗ ಗುರುಗಳಾಗಿ ದೊರಕಿದ್ದು ಮಂಗೇಶ ರಾವ್‌ದ್ವಯರು. ಮೊದಲು ಅಕ್ಷರ ದೇವತೆ ಗಣಪತಿ ಹೆಸರಿನಲ್ಲಿ ಶಾಲೆ ಆರಂಭಿಸಿದ್ದರೆ ಬಳಿಕ 1926ರಲ್ಲಿ ಮಧ್ವಾಚಾರ್ಯರ ಜನ್ಮ ಸ್ಥಳದ ಪಕ್ಕದಲ್ಲಿ ಕುಂಜಾರುಗಿರಿಯ ಗ್ರಾಮ ದೇವತೆ ಗಿರಿಜಾ ಹೆಸರಿನಲ್ಲಿ ಶಾಲೆಯನ್ನು ತೆರೆದರು.
  
ಜಗ್ಗದ ವ್ಯಕ್ತಿತ್ವ
1920ರಲ್ಲಿ ಮಹಾತ್ಮಾ ಗಾಂಧಿಯವರು ಅಸಹಕಾರ ಚಳವಳಿಗೆ ಕರೆ ನೀಡಿದಾಗ ಪ್ರಭಾವಿತರಾದ ಶೆಟ್ಟಿಯವರು ಆ ಕಾಲದ ಸ್ವಾತಂತ್ರ್ಯ ಹೋರಾಟಗಾರರಿಗೆ ತೀರ್ಥಕ್ಷೇತ್ರವೆನಿಸಿದ ಕಟಪಾಡಿ ಪಾಂಗಾಳ ನಾಯಕ್‌ ಮನೆಯವರೊಡನೆ ಹೋರಾಟ ನಡೆಸಿದರು.

Advertisement

ಗಾಂಧೀಜಿಯವರು 1934 ಫೆಬ್ರವರಿ 25ರಂದು
ಕರಾವಳಿಗೆ ಭೇಟಿ ನೀಡಿದ ಸಂದರ್ಭ ಮೂಲ್ಕಿಯಿಂದ ಉಡುಪಿಗೆ ಹೋಗುವ ಮಾರ್ಗದಲ್ಲಿ ಕಟಪಾಡಿಯಲ್ಲಿ ಸುಮಾರು 15 ನಿಮಿಷ ಭಾಷಣ ಮಾಡಿದಾಗ, 1937ರಲ್ಲಿ ಎ.ಬಿ. ಶೆಟ್ಟಿಯವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಪಂಡಿತ್‌ ಜವಾಹರಲಾಲ್‌ ನೆಹರೂ ಕಟಪಾಡಿಯಲ್ಲಿ 15 ನಿಮಿಷ ಭಾಷಣ ಮಾಡಿದಾಗ ಸಭೆಯಲ್ಲಿ ಪಾಲ್ಗೊಂಡ ಗಣಪಯ್ಯ ಶೆಟ್ಟಿಯವರು ಸಕ್ರಿಯ ಕಾಂಗ್ರೆಸ್‌ ಕಾರ್ಯಕರ್ತರಾದ ಕಾರಣ ಶಾಲೆಗೆ ಜಸ್ಟಿಸ್‌ ಪಾರ್ಟಿಯವರು ಬಂದು ಶಾಲೆಯನ್ನು ಅಮಾನ್ಯಗೊಳಿಸುವ ಬೆದರಿಕೆಯೊಡ್ಡಿದರೂ ಜಗ್ಗದ ವ್ಯಕ್ತಿತ್ವ ಶೆಟ್ಟಿಯವರದು. ಒಟ್ಟಾರೆ ಈಗ ನಾವು ಕಾಣುವ ಕೀಳು ಮಟ್ಟದ ರಾಜಕೀಯ ಆಗಲೂ ಅಷ್ಟೋ ಇಷ್ಟೋ ಇತ್ತು ಎನ್ನುವುದಕ್ಕೆ “ಶಾಲಾ ಅಮಾನ್ಯ ಬೆದರಿಕೆ’ ಒಂದು ಉದಾಹರಣೆ. 

ಶಿಕ್ಷಣದಲ್ಲಿ ದೇಸೀ ಕಲ್ಪನೆ
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೇ ಶಾಲೆಗಳನ್ನು ತೆರೆದು ನೂಲುವುದು, ಹಿಂದಿ ಶಿಕ್ಷಣ, ರಾಷ್ಟ್ರೀಯ ವಿಚಾರಧಾರೆಗಳನ್ನು ಕಲಿಸುವ ಶಿಕ್ಷಣದ ಮೂಲಕ ಗ್ರಾಮೋದ್ಧಾರ ಕನಸು ಕಂಡ ದೇಸೀ ಕಲ್ಪನೆಯ ಸಾಧಕರಲ್ಲಿ ಗಣಪಯ್ಯ ಶೆಟ್ಟಿಯವರು ಪ್ರಮುಖರಾಗಿ ಕಾಣುತ್ತಾರೆ. ಬ್ರಿಟಿಷ್‌ ಮೂಲದವರಿಂದ ಶಿಕ್ಷಣ ಕ್ರಾಂತಿಯಾಯಿತು ಎನ್ನುವವರಿಗೆ ಗಣಪಯ್ಯ ಶೆಟ್ಟಿಯವರಂತಹ ದೇಸೀ ಚಿಂತಕರು ಉತ್ತರವಾಗುತ್ತಾರೆ. ಗಿರಿಜಾ ಶಾಲೆ ಸ್ಥಾಪನೆಯಾಗಿ 90ನೆಯ ವರ್ಷ, ಸ್ಥಾಪಕರ 125ನೆಯ ಜನ್ಮದಿನಾಚರಣೆಯನ್ನು ಆ. 7 ಅಪರಾಹ್ನ 3 ಗಂಟೆಗೆ ಕುಂಜಾರುಗಿರಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭ ಗಣಪಯ್ಯ ಶೆಟ್ಟಿಯವರ ಪುತ್ರ, ಸಾಹಿತಿ, ಮುಂಬೈಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಎಸ್‌.ಕುರ್ಕಾಲ್‌ ಅವರು ವಾಚನಾಲಯ ನಿರ್ಮಿಸಿ, ತಮ್ಮ ಭಂಡಾರದಲ್ಲಿದ್ದ ನಾಲ್ಕೈದು ಸಾವಿರ ಪುಸ್ತಕಗಳನ್ನು ನೀಡಿದ ವೈಜಯಂತಿ ವಾಚನಾಲಯ ಉದ್ಘಾಟನೆಯಾಗುತ್ತಿದೆ. ನಿವೃತ್ತರಾಗಲಿರುವ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿಯವರನ್ನು ಅಭಿನಂದಿಸಲಾಗುತ್ತಿದೆ. 

ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಕುರ್ಕಾಲು ಗಣಪಯ್ಯ ಶೆಟ್ಟಿಯವರು ಜೈಲುವಾಸ ಅನುಭವಿಸಿದವರಲ್ಲ. ಇದಕ್ಕೆ ಕಾರಣ ಜೈಲುವಾಸದ ಹೆದರಿಕೆಯಲ್ಲ. ತಾನು ಸ್ಥಾಪಿಸಿದ ಶಾಲೆ ಎಲ್ಲಿ ಹಣಕಾಸು ಮುಗ್ಗಟ್ಟಿನಿಂದ ನಿಂತು ಶಿಕ್ಷಕರಿಗೆ ತೊಂದರೆಯಾಗುತ್ತದೋ ಎಂಬ ಭಯವೇ ಇದಕ್ಕೆ ಕಾರಣ. ಭಾರತ ಬಿಟ್ಟು ತೊಲಗಿ ಚಳವಳಿಯ ಆ. 9 ಕ್ಕೆ ಎರಡು ದಿನ ಮೊದಲು ಆ. 7 ರಂದು ಗಣಪಯ್ಯ ಶೆಟ್ಟಿಯವರ ಸಂಸ್ಮರಣೆ ನಡೆಯುತ್ತಿದೆ. 

ಗಂಟಲೇ ಗಂಟೆಗಟ್ಟಲೆ ಧ್ವನಿವರ್ಧಕ!
ಕಟಪಾಡಿ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿಯಾಗಿ ಕಟಪಾಡಿಯಲ್ಲಿ ತಾಲೂಕು ಸಮ್ಮೇಳನವನ್ನು ಆಯೋಜಿಸಿದ್ದ ಶೆಟ್ಟಿಯವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಎತ್ತಿದಕೈ. ಉಡುಪಿಯಲ್ಲಿ ಎ.ಬಿ. ಶೆಟ್ಟಿ, ಪಾಂಗಾಳ ಲಕ್ಷ್ಮೀನಾರಾಯಣ ನಾಯಕ್‌ ಅವರು ಬಂಧಿತರಾದ ಸಂದರ್ಭ ಪರಿಸ್ಥಿತಿ ಕೈಮೀರುವ ಸ್ಥಿತಿ ಇತ್ತು. ಜನರನ್ನು ಶಾಂತಗೊಳಿಸುವಂತೆ ನ್ಯಾಯವಾದಿ ವಿಠಲ ಕಾಮತ್‌ (ಎಂ.ವಿ.ಕಾಮತ್‌ ಅವರ ತಂದೆ) ಶೆಟ್ಟಿಯವರಿಗೆ ಕೇಳಿಕೊಂಡರು. ಧ್ವನಿವರ್ಧಕ ಇಲ್ಲದ ಆ ಕಾಲದಲ್ಲಿ ದೊಡ್ಡ ದನಿಯಲ್ಲಿ ಭಾಷಣ ಮಾಡಿ ಜನರನ್ನು ಶಾಂತಗೊಳಿಸಿದ ಶೆಟ್ಟಿಯವರು ಈ ಕಾರಣದಿಂದಾಗಿಯೇ ಕಾಂಗ್ರೆಸ್‌ ಸಭೆಗಳಲ್ಲಿ ಭಾಷಣಕಾರರಾಗಿ ಮೂಡಿದ್ದರು. ಇಷ್ಟೆಲ್ಲಾ ಸ್ವಾತಂತ್ರ್ಯ ಹೋರಾಟ ಮಾಡಿದರೂ ಒಟ್ಟು ಮೂರು ಶಾಲೆಗಳ (ಬಂಟಕಲ್ಲು ಪ್ರಾಥಮಿಕ ಶಾಲೆಯ ಸ್ಥಾಪಕರೂ ಇವರು) ಶಿಕ್ಷಕರ ಒತ್ತಾಯಕ್ಕೆ ಮಣಿದು ಜೈಲಿಗೆ ಹೋಗಲಿಲ್ಲ. 

Advertisement

ಗ್ರಾಮದ ಅಭಿವೃದ್ಧಿ
ಏಣಗುಡ್ಡೆ ಗ್ರಾಮಕ್ಕೆ ಸೇರಿದ ಕುರ್ಕಾಲನ್ನು ಪ್ರತ್ಯೇಕ ಗ್ರಾ.ಪಂ. ಆಗಿ ರೂಪಿಸಿ ಮೊದಲ ಅಧ್ಯಕ್ಷರಾಗಿ ಅಭಿವೃದ್ಧಿ ಸಾಧಿಸಿದ ಶೆಟ್ಟಿಯವರು ಪಂಚಾಯತ್‌ ಬೋರ್ಡ್‌ ಕಟ್ಟಡ, ಸಹಕಾರಿ ಸಂಘ, ಅಂಚೆ ಕಚೇರಿ, ಗ್ರಾಮೀಣ ಆಸ್ಪತ್ರೆ, ರಸ್ತೆ, ಸಾರ್ವಜನಿಕ ಬಾವಿ, ಅತ್ಯಧಿಕ ಸಾಲುಮರಗಳ ನೆಡುವಿಕೆಯಂತಹ ಸಾಧನೆಗಳನ್ನು ಮಾಡಿದ್ದರು. 

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next