ಕೊಪ್ಪಳ: ಚಪ್ಪಲಿಯನ್ನು ಕೀಳರಿಮೆಯಿಂದ ಕಾಣುವ ಹಾಗೂ ಮನೆಯ ಹೊರಗೆ ಬಿಡುವ ವಸ್ತು ಎಂದುಕೊಂಡಿರುವ ವ್ಯವಸ್ಥೆಯಿದೆ. ಆದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಚಪ್ಪಲಿ ಚಿಹ್ನೆಯನ್ನೇ ಕೇಳಿ ಪಡೆದಿದ್ದಾರೆ. ಅದೇ ಚಿಹ್ನೆ ಮುಂದಿಟ್ಟು ಜನರ ಬಳಿ ಮತಯಾಚನೆ ಮಾಡುವೆ ಎಂದೆನ್ನುತ್ತಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ಇದರಲ್ಲಿ ಹೊಸಪೇಟೆಯ ನಿವಾಸಿ ಪ.ಯ. ಗಣೇಶ ಅವರು ಚಪ್ಪಲಿ ಚಿಹ್ನೆಯನ್ನು ಪಡೆದು ಮತ ಯಾಚಿಸುತ್ತಿದ್ದಾರೆ. ಗಣೇಶ ಅವರು ಮೂಲತಃ ಹೊಸಪೇಟೆ ನಿವಾಸಿಯಾಗಿದ್ದು, ಪ್ರಸ್ತುತ ಟೈಲರಿಂಗ್ ಕೆಲಸ ನಿರ್ವಹಿಸುತ್ತಿದ್ದಾರೆ.
ಸಮಾಜವನ್ನು ಭ್ರಷ್ಟಚಾರ ಮುಕ್ತವಾಗಿ ಮಾಡಬೇಕೆಂದು ಆಲೋಚನೆಯನ್ನಿಟ್ಟು ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆ ಕಟ್ಟಿಕೊಂಡು ತಾವೇ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಪತ್ರಿಕಾ ರಂಗದಲ್ಲಿ ಕೆಲಸ ನಿರ್ವಹಿಸಿರುವ ಇವರು 2018ರ ವಿಧಾನಸಭಾ ಚುನಾವಣೆಗೆ ಹೊಸಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಹೊಸಪೇಟೆಯಲ್ಲೂ ಚಪ್ಪಲಿ ಚಿಹ್ನೆಯನ್ನೇ ಪಡೆದು ಜನರ ಮುಂದೆ ಮತಯಾಚಿಸಿದ್ದರು.
ಆಯೋಗ ಕೊಟ್ಟಿದ್ದಲ್ಲ, ಕೇಳಿ ಪಡೆದಿದ್ದು: ಚುನಾವಣಾಧಿಕಾರಿಗಳು ಪಕ್ಷೇತರ ಅಭ್ಯರ್ಥಿ ಗಣೇಶಗೆ ಮೂರು ಆಯ್ಕೆ ಮುಂದಿಟ್ಟಿದ್ದರು. ಅದರಂತೆ ಗಣೇಶ ಅವರು ಮೊದಲ ಪ್ರಾತಿನಿಧ್ಯವನ್ನು ಚಪ್ಪಲಿ ಚಿಹ್ನೆಗೆ ಕೊಟ್ಟಿದ್ದರೆ, ಎರಡನೇ ಪ್ರಾತಿನಿಧ್ಯವನ್ನು ರಬ್ಬರ್ ಸ್ಟಾಂಪ್‌ಗೆ, 3ನೇ ಪ್ರಾತಿನಿಧ್ಯವನ್ನು ವಿಜಲ್‌ಗೆ ಕೊಟ್ಟಿದ್ದಾರೆ. ಇದರಲ್ಲಿ ಅವರ ಸ್ವ ಇಚ್ಛೆಯಿಂದಲೇ ಚಪ್ಪಲಿ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಚಪ್ಪಲಿ ಎಂದರೆ ಕೀಳಾದ ವಸ್ತುವಲ್ಲ. ಅದು ಶ್ರೇಷ್ಠ ವಸ್ತು. ಆದರೆ ಸಮಾಜಕ್ಕೆ ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಚಿಹ್ನೆ ಆಯ್ಕೆ ಮಾಡಿದ್ದೇನೆ. ಚಿಹ್ನೆ ಆಯ್ಕೆಯಲ್ಲಿ ನನಗೇನೂ ಮುಜುಗರವಿಲ್ಲ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲೂ ನಾನು ಇದೇ ಚಿಹ್ನೆಯನ್ನೇ ಪಡೆದು ಪ್ರಚಾರ ನಡೆಸಿದ್ದೆ.
-ಪ.ಯ. ಗಣೇಶ, ಪಕ್ಷೇತರ ಅಭ್ಯರ್ಥಿ
* ದತ್ತು ಕಮ್ಮಾರ