Advertisement
ಸ್ವಾತಂತ್ರ್ಯ ಎಂದರೆ ಜವಾಬ್ದಾರಿ; ಸ್ವಾತಂತ್ರ್ಯ ಎಂದರೆ ಪ್ರಗತಿಯ ಗತಿ, ಸಂವರ್ಧನೆಯ ಮೂಲತೈಲ. ಸ್ವಾತಂತ್ರ್ಯ ಎಂದರೆ ಧನಾತ್ಮಕ ಚಿಹ್ನೆ, ಅದೊಂದು ತಿಳಿ ಬೆಳಕು; ಚಿಂತನಾ ಲಹರಿ; ಕಾರ್ಯಕ್ಷಮತೆಯ ಪರಿಧಿ. ಸ್ವಾತಂತ್ರ್ಯ ಎಂದರೆ ಸ್ವೇಚ್ಛೆ ಅಲ್ಲ ಅದೊಂದು ನಾಗರಿಕತೆಯ ಕುರುಹು; ಸಭ್ಯತೆಯ ಸಾರ್ವಕಾಲಿಕ ಚಿಹ್ನೆ; ಮೌಲ್ಯ ಕೂಡ. ಸ್ವಾತಂತ್ರ್ಯ ಇತಿಮಿತಿಯ ಸಮಾಜದ ದ್ಯೋತಕ; ವ್ಯವಹಾರ ಕೌಶಲವೂ ಹೌದು. ಪರರಿಗೆ ನೋವುಣಿಸದೆ ಸಹಕಾರ ಎನ್ನುವ ತತ್ತ್ವ ಹಾಗೂ ಸತ್ವದ ಸರಳ ಸಾಕ್ಷಾತ್ಕಾರ. ವ್ಯಕ್ತಿಗತ ನಡೆ ನುಡಿಯ ಅದೇ ರೀತಿ, ಸಾಮಾಜಿಕ ಬದುಕಿನ ಪೋಷಕಧಾತು. ಒಟ್ಟಿನಲ್ಲಿ ಭಾರತದಂತಹ ವಿಶಾಲ ರಾಷ್ಟ್ರದ ಸಾಮೂಹಿಕ ಬದುಕಿನ ಮೂಲ ಬುನಾದಿಯೇ ಇದು. ಸಮಾನತೆಯ ತಂಗಾಳಿ ಹೊಮ್ಮಿದಾಗ ಅರಳುವ ಸೌಗಂಧ ಭರಿತ ಸುಮವೇ ಸ್ವಾತಂತ್ರ್ಯ. ಯಾವುದೇ ಮೀಟರಿನಲ್ಲಿ ಅಥವಾ ಲೀಟರಿನಲ್ಲಿ ಅಳೆಯಲಾಗದ, ಮುಕ್ತ ಪರಿಸರವಿದು. ಪಂಚೇಂದ್ರಿಯಗಳಿಂದ ಅನುಭವಿಸಲ್ಪಡುವ ಸಿಹಿ, ಕಹಿ, ಪರಿಮಳ-ದುರ್ಗಂಧ, ವರ್ಣ-ವೈವಿಧ್ಯ, ಇಂಪು-ಕರ್ಕಶ, ಶೀತೋಷ್ಣ- ಇವುಗಳಲ್ಲಿ ಯಾವುದರ ಬಗೆಗೂ ಒಂದೇ ಒಂದು ಶಬ್ದವನ್ನೂ ಉಲಿದು ವಿವರಣಾತ್ಮಕವಾಗಿ ತಿಳಿಸಲಾರೆವು, ಅದೇ ತೆರನಾಗಿದೆ ಸ್ವಾತಂತ್ರ್ಯ ಶಬ್ದದ ಎತ್ತರ ಬಿತ್ತರ; ನಿಖರವಾಗಿ ವಿವರಿಸಲಾಗದ ಆಗರವಿದು.
Related Articles
Advertisement
“”ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು” ಎಂದು ಉಲಿದ ಗೋಪಾಲಕೃಷ್ಣ ಅಡಿಗರ ಕವಿವಾಣಿಯ ಏರುಗತಿ ನಮ್ಮ ನಾಡಿನದಾಗಬೇಕು. ಮಣ್ಣಿನ ಮಕ್ಕಳ ಏಕತಾನದೊಂದಿಗೆ ಕಾರಂತರ ಚೋಮನ ದುಡಿಯ ನಿನಾದವೂ ಅಲೆ ಅಲೆಯಾಗಿ ತೇಲಿ ಬರಬೇಕು. ಭಾರತ ತನುಜಾತೆಯೆನಿಸಿದ “ಕರ್ನಾಟಕ ಮಾತೆ’ಯ ಜಯಘೋಷದ ಕಂಪು ಕುವೆಂಪು ಶಬ್ದ ಪುಂಜಗಳಿಂದ ಸದಾ ಹೊಮ್ಮಿ ಬರಬೇಕು. “ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವದ ವರ್ಣನೆಯ ಕಡೆಂಗೋಡ್ಲು ಕವಿವಾಣಿಯಲ್ಲಿ, ಮೈಸೂರಿನ ಒಡೆಯರ ಕನ್ನಂಬಾಡಿಯ ಕಾವೇರಿಯ ಪುಳಕ, ಭಾರತ ರತ್ನ ವಿಶ್ವೇಶ್ವರಯ್ಯನವರ ಕಾರ್ಯ ಕೌಶಲ ಇವೆಲ್ಲಾ ಮಿಡಿತಗೊಂಡು ಪ್ರಗತಿಯ ಚಕ್ರ ಮುಂದೆ ಸರಿಯುವಂತಾಗಬೇಕು. ಅದೇ ರೀತಿ ದಕ್ಷಿಣದ ಕನ್ಯಾಕುಮಾರಿಯ ವಿವೇಕಾನಂದರ ಶಿಲಾಮಂಟಪದಿಂದ ಕಾಶ್ಮೀರದ ಶಾರದ ಪೀಠದವರೆಗಿನ ವಿಶಾಲ ಭಾರತದಲ್ಲಿ ವಿವೇಕದ ಹೊಸತನದೊಂದಿಗೆ ಸ್ವಾತಂತ್ರ್ಯದ ಕೇಸರಿ ಹುಲುಸಾಗಿ ಬೆಳೆಯಬೇಕು. ಅಸ್ಸಾಂನ ಗುಡ್ಡಗಾಡುಗಳಿಂದ ಹಿಡಿದು ಗುಜರಾತಿನ ಪಟೇಲರ ಬೃಹತ್ “ಏಕತಾ ಮೂರ್ತಿ’ಯವರೆಗೆ ಸಮಗ್ರತೆೆಯ ಕುಳಿರ್ ಗಾಳಿ ಪಸರಿಸಬೇಕು. ತಮ್ಮ ಪಯಣದ ವೇಳೆಯೇ ಹೃದಯ ತುಂಬಿ ಬಂದು, ಮತ್ತೆ ಲೇಖನಿಯಲ್ಲಿ ಇಳಿದ, ಬಂಕಿಮ್ ಚಂದ್ರ ಚಟರ್ಜಿಯವರ “”ಸಸ್ಯ ಶ್ಯಾಮಲೆ”ಯ ರಾಷ್ಟ್ರ ಮಾತೆಗೆ “”ವಂದೇ” ಎನ್ನುವ ಪಲ್ಲವಿ ಮನೆ ಮನಗಳಲ್ಲಿ ಧ್ವನಿಸುತ್ತಿರಬೇಕು.
“”ಶ್ರಮ ಏವ ಜಯತೇ” ಪದಪುಂಜಗಳು ಸ್ವಾತಂತ್ರ್ಯದ ಅಮೃತ ಮಹೋತ್ಸದ ಧ್ಯೇಯ ವಾಕ್ಯವಾಗಲಿ. ಕೀರ್ತಿ ಶ್ರೇಷ ಲಾಲ್ ಬಹದೂರ್ ಶಾಸ್ತ್ರಿಯವರಿಂದ ಮೊಳಗಿದ “”ಜೈ ಜವಾನ್ ಜೈ ಕಿಸಾನ್” ಘೋಷಣೆ ಚಿರಾಯು ಎನಿಸಲಿ. ಪಂಡಿತ್ ನೆಹರೂ “”ವಿಶ್ವ ಶಾಂತಿ”ಗಾಗಿ ಹಾರಿಸಿದ ಪಾರಿವಾಳ ನಭದಲ್ಲಿ ನಿರಾಳವಾಗಿ ಹಾರುತ್ತಲಿರಲಿ “”ಪ್ರಧಾನಿ ರಾಷ್ಟ್ರ ನೌಕೆಯ ದಂಡನಾಯಕ” (captain of the Ship of the State ) ಎಂಬ ಮಾತಿಗೆ ಅರ್ಥ ತುಂಬಿದ ಇಂದಿರಾ, ವಾಜಪೇಯಿಯವರಿಂದ ಹಿಡಿದು ಇಂದಿನ ಧೀಮಂತ ನಾಯಕತ್ವದ ಮೋದಿಯವರೆಗಿನ ಪ್ರಧಾನಿತ್ವದಲ್ಲಿ “”ಭಾರತ ವಿಶ್ವಗುರು”ವಿನ ಪದವಿ ಏರುವಂತಾಗಲಿ. ಹಿಮಗಿರಿ ಕಾರ್ಗಿಲ್‌ನ “”ಟೈಗರ್ ಹಿಲ್”ನ ತ್ರಿವರ್ಣ ಧ್ವಜದ ಅಭಿಮಾನ ಬರಲಿರುವ ಪೀಳಿಗೆಗಳಿಗೂ ಧೃತಿ ಸಂಕೇತವೆನಿಸಲಿ. ಅವರವರ ಪಾಲಿನ ಪೂರಕ, ಪ್ರೇರಕ ಶಕ್ತಿ ಸಂಚಯನದೊಂದಿಗೇ ಕೃಷಿ, ಕೈಗಾರಿಕೆ, ಸಾರಿಗೆ ಶಿಕ್ಷಣದಿಂದ ಹಿಡಿದು ಅಂತರಿಕ್ಷ ಸಾಧನದ ಸಾಧನೆಯವರೆಗೂ ಭಾರತದ ಏಳಿಗೆಯ ಚಕ್ರ ಸರಿಯುತ್ತಲೇ ಸಾಗಲೀ. “ಕಾಯಕವೇ ಕೈಲಾಸ” ಎಂಬ ಭಕ್ತಿ ಭಂಡಾರಿ ಬಸವಣ್ಣನವರ ಸಾರ್ವಕಾಲಿಕ ಸತ್ಯ ಸದಾ ಸತ್ವ ತುಂಬಿಕೊಳ್ಳಲಿ. ದೇಶ ಭಕ್ತಿಯು ದೇಶ ಶಕ್ತಿಯಾಗಿ ಪರಿವರ್ತಿತಗೊಳ್ಳಲಿ. “ಶುಭ ನುಡಿಯೇ ಶಕುನದ ಹಕ್ಕಿ” ಎಂಬ ಸಿರಿ ಹರಕೆಗೆ ಮೈಮನದ ಹೊಸ ಹುರುಪಿನ ತಾರುಣ್ಯ ಶಕ್ತಿ ತುಂಬಲಿ. ಇದೇ ಅಮೃತ ಮಹೋತ್ಸವದ ಅಮೃತ ತುಲ್ಯ ಆಶಯ.
-ಡಾ| ಪಿ. ಅನಂತಕೃಷ್ಣ ಭಟ್