Advertisement

ಸರಪಳಿಯಿಂದ ಬಿಡುಗಡೆ

07:15 PM Aug 14, 2019 | mahesh |

ಶಾಲೆಯಿಂದ ಮರಳಿ ಮನೆಗೆ ಬಂದ ರೋಹನ್‌ ತನ್ನ ತಾಯಿ ಬಳಿ ಹೋಗಿ, “ಅಮ್ಮಾ, ನಾಳೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ. ಅದಕ್ಕೆ ಶಾಲೆಯಲ್ಲಿ ಒಂದು ಪುಟ್ಟ ಕಥೆ ಹೇಳಬೇಕಂತೆ. ಯಾವುದಾದರೂ ಕಥೆಯನ್ನು ಹೇಳಿಕೊಡು’ ಎಂದು ಕೇಳಿದ. ಆಗ ರೋಹನ್‌ ತಾಯಿ ಹೇಳಿ ಕೊಟ್ಟ ಕಥೆ ಹೀಗಿತ್ತು-

Advertisement

“ಅದೊಂದು ಕಾಡು.ಅಲ್ಲಿ ನರಿಯೊಂದು ವಾಸವಾಗಿತ್ತು. ಬಹಳ ದಿನಗಳಿಂದ ತಿನ್ನಲು ಆಹಾರ ಸಿಗದೆ ಅದು ತುಂಬಾ ನಿತ್ರಾಣವಾಗಿತ್ತು. ನರಿ ಆಹಾರವನ್ನು ಅರಸುತ್ತಾ ಅಲ್ಲಿಯೇ ಇದ್ದ ಹಳ್ಳಿಗೆ ಬಂದಿತು.ಅಲ್ಲೊಂದು ದಪ್ಪಗಿದ್ದ ನಾಯಿಯನ್ನು ನೋಡಿ ಮನಸ್ಸಿನಲ್ಲಿ ಅಸೂಯೆಪಟ್ಟಿತು. ಆದರೂ, ನಾಯಿಯ ಸುಂದರ ದೇಹವನ್ನು ಹೊಗಳಿ, ತಾನು ದಿನನಿತ್ಯ ಆಹಾರಕ್ಕಾಗಿ ಪಡುತ್ತಿರುವ ತೊಂದರೆಯನ್ನು ತಿಳಿಸಿತು. ನರಿಯ ಕಷ್ಟವನ್ನು ಕೇಳಿದ ನಾಯಿ, “ನೀನೂ ನನ್ನಂತೆಯೇ ಅದೃಷ್ಟಶಾಲಿಯಾಗಲು ಕಾಡನ್ನು ಬಿಟ್ಟು ಹಳ್ಳಿಗೆ ಬಂದು ನೆಲೆಸು ‘ ಎಂದಿತು.

ನಾಯಿಯ ಮಾತುಗಳನ್ನು ಕೇಳಿ ನರಿ, “ನಿಜವಾಗಿಯೂ ಅದು ಸಾಧ್ಯವೇ? ಅದಕ್ಕೆ ಏನು ಮಾಡಬೇಕು’ ಅಂದಿತು.  ನಾಯಿ, ” ನೀನು ನನ್ನಂತೆ ಒಂದು ಮನೆಯಲ್ಲಿ ವಾಸವಾಗು. ಆ ಮನೆಯ ಯಜಮಾನನನ್ನು ಅಪರಿಚಿತರಿಂದ ರಕ್ಷಿಸಬೇಕು. ಅವರನ್ನು ಕಂಡಾಗ ಮೆಲ್ಲಗೆ ಬೊಗಳುತ್ತಾ ಬಾಲವನ್ನು ಅಲ್ಲಾಡಿಸಿ ನಿನ್ನ ಸಂತೋಷವನ್ನು ಸೂಚಿಸಬೇಕು. ಇಷ್ಟನ್ನು ಮಾಡಿದರೆ ಕೋಳಿ ಮಾಂಸ, ಕುರಿಯ ಎಲುಬುಗಳನ್ನು ಸವಿಯುವ ಅವಕಾಶ ನಿನಗೆ ಲಭಿಸುತ್ತದೆ’ ಎಂದಿತು.

ನಾಯಿಯ ಮಾತುಗಳು ನರಿಯ ಕಿವಿಗೆ ಮಧುರ ರಾಗದಂತೆ ಕೇಳಿಸಿದವು. ತನ್ನ ಮುಂದಿನ ಸುಂದರ ಭವಿಷ್ಯವನ್ನು ಯೋಚಿಸುತ್ತಾ ಅದು ನಾಯಿಯ ಕುತ್ತಿಗೆಯನ್ನು ನೋಡಿತು. ನಾಯಿಯ ಕುತ್ತಿಗೆಯ ಸುತ್ತಲಿನ ರೋಮವೆಲ್ಲ ಉದುರಿ ಹೋಗಿತ್ತು. “ನಿನ್ನ ಅಂದವಾದ ದೇಹದಲ್ಲಿ ಆ ಗುರುತು ಹೇಗೆ ಉಂಟಾಯಿತು’ ಎಂದು ಕುತ್ತಿಗೆಯ ಬಗ್ಗೆ ಪ್ರಶ್ನಿಸಿತು.

ಆಗ ನಾಯಿ, “ನನ್ನನ್ನು ಸರಪಳಿಯಿಂದ ಬಂಧಿಸುವಾಗ ಯಜಮಾನ ಕೊರಳ ಪಟ್ಟಿಯನ್ನು ಹಾಕುತ್ತಾನೆ. ಅದರಿಂದಾಗಿ ಈ ಗುರುತಾಗಿದೆ’ ಅಂದಿತು ನಾಯಿ. ಆಗ ನರಿಯು ಆಶ್ಚರ್ಯದಿಂದ “ಸರಪಳಿಯೆ?ನಿನ್ನ ಒಡೆಯ ನಿನ್ನನ್ನು ಸರಪಳಿಯಿಂದ ಕಟ್ಟುವನೇ? ಹಾಗಾದರೆ, ನಿನಗೆ ಓಡಾಡುವ ಸ್ವಾತಂತ್ರ್ಯವೇ ಇಲ್ಲ ಎಂದಾಯಿತು’ ಎಂದಿತು. ಈ ಮಾತಿಗೆ, ಹೌದೆಂಬಂತೆ ನಾಯಿ ತಲೆಯಾಡಿಸಿತು.

Advertisement

ನರಿಗೆ ಈಗ ನಿಜ ಸಂಗತಿ ತಿಳಿಯಿತು. ಅದು ಕಂಡಿದ್ದ ಕನಸಿನಿಂದ ನೈಜ ಪ್ರಪಂಚಕ್ಕೆ ಮರಳಿ ಬಂದಿತು. ಗೆಳೆಯಾ, ಆಹಾರ ವಿಹಾರಗಳಲ್ಲಿ ನೀನು ಮೈಮರೆತಿರಬಹುದು. ಆದರೆ, ನನಗೆ ಸ್ವಾತಂತ್ರ್ಯವೇ ಮುಖ್ಯ. ಅದಕೋಸ್ಕರ ನಾನು ಎಂಥ ಉತ್ತಮ ಆಹಾರವನ್ನಾದರೂ ತೊರೆಯುತ್ತೇನೆ ‘ ಎನ್ನುತ್ತಾ ನರಿಯು ಕಾಡಿನ ಕಡೆಗೆ ಹೊರಟಿತು ಎಂದು, ರೋಹನ್‌ ತಾಯಿ ಮಗನಿಗೆ ಕತೆ ಮುಗಿಸಿದಳು.

ನೀತಿ:ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು.
-ವೇದಾವತಿ ಹೆಚ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next