ಬೆಂಗಳೂರು: ರೈತರಿಗೆ ಮತ್ತೂಂದು ಸಿಹಿ ಸುದ್ದಿ ಕೊಡುವುದಾಗಿ ಹೇಳಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 2 ಲಕ್ಷ ರೂ.ವರೆಗಿನ ಸಾಲಮನ್ನಾ ಆದೇಶ ಹೊರಡಿಸುವ ಸಂಬಂಧ ಪ್ರಸ್ತಾಪಿಸುತ್ತಾರಾ? ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡಲಿರುವ ಕುಮಾರಸ್ವಾಮಿ, ಈಗಾಗಲೇ ಆದೇಶ ಹೊರಡಿಸಿರುವ ಸಹಕಾರ ಸಂಘಗಳಲ್ಲಿ 9448 ಕೋಟಿ ರೂ. ರೈತರ ಚಾಲ್ತಿ ಸಾಲಮನ್ನಾ ಪ್ರಸ್ತಾಪಿಸಿ ಜತೆಗೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಬಗ್ಗೆಯೂ ಘೋಷಣೆ ಮಾಡಿ ನಂತರ ಮರುದಿನ ಗುರುವಾರ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಿದ್ದಾರೆಂದು ಹೇಳಲಾಗಿದೆ.
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳು, ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಿರುವ ಯೋಜನೆಗಳ ಬಗ್ಗೆಯೂ ಉಲ್ಲೇಖ ಇರಲಿದೆ. ಸಮ್ಮಿಶ್ರ ಸರ್ಕಾರ ಎಷ್ಟು ದಿನವೋ ಎಂಬ ಟೀಕಾರರಿಗೆ ಉತ್ತರ ಎಂಬಂತೆ 5 ವರ್ಷಗಳ ನೀಲನಕ್ಷೆ ಜನರ ಮುಂದಿಡಲು ಕುಮಾರಸ್ವಾಮಿ ನಿರ್ಧರಿಸಿದ್ದು ಸ್ವಾತಂತ್ರ್ಯೋತ್ಸವ ಭಾಷಣ ಒಂದು ರೀತಿಯಲ್ಲಿ ಬಜೆಟ್ ಭಾಷಣದಂತೆಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಸ್ವಾತಂತ್ರ್ಯೋತ್ಸವ ಪ್ರಯುಕ್ತ ರೈತರಿಗೆ ಬಡ್ಡಿ ರಹಿತ ಸಾಲ, ಬೀದಿ ಬದಿ ವ್ಯಾಪಾರಿಗಳಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಕಿರು ಸಾಲ ಯೋಜನೆ “ಬಡವರ ಬಂಧು’ ಬಗ್ಗೆಯೂ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹಾಸನದಲ್ಲಿ ಸೋಮವಾರ ಮಾತನಾಡಿದ್ದ ಕುಮಾರಸ್ವಾಮಿ, ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಕುರಿತು ಎರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು. ಇದರಿಂದ ಸರ್ಕಾರಕ್ಕೆ 32 ಸಾವಿರ ಕೋಟಿ ರೂ. ಹೊರೆಯಾಗಲಿದ್ದು ನಾಲ್ಕು ಕಂತುಗಳಲ್ಲಿ ಬ್ಯಾಂಕ್‌ಗಳಿಗೆ ಪಾವತಿಸಲಾಗುವುದು. ಇದಕ್ಕಾಗಿಯೇ 6500 ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ ಎಂದು ಹೇಳಿದ್ದರು.