Advertisement
ಹುಟ್ಟಿದ್ದು 1921ರಲ್ಲಿ. ಪುತ್ತೂರು ಪಡುಕುಡೂರು ಬೀಡು ನಿವಾಸಿ ಅಂತಪ್ಪ ಕೊಂಡೆ. ತಾಯಿ ಪುತ್ತೂರು ಪಡಾಯೂರುಗುತ್ತು ನಿವಾಸಿ ಚೆಲುವಮ್ಮ. ಕಲಿತದ್ದು ಪುತ್ತೂರಿನಲ್ಲಿ ಎಂಟನೇ ತರಗತಿ. 17ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮುದ್ರಾಡಿ ಬೀಡು ನಿವಾಸಿ ಎಂ. ಧರ್ಮರಾಜ (ಎಂ.ಡಿ.) ಅಧಿಕಾರಿ ಅವರ ಜತೆ ವಿವಾಹ. 18ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ. ಎಂ.ಡಿ. ಅಧಿಕಾರಿ ಗಾಂಧೀಜಿ ಜತೆಗೆ ದೂರವಾಣಿಯಲ್ಲಿ ಒಮ್ಮೆ ಸತ್ಯಾಗ್ರಹದ ಕುರಿತು ಮಾತನಾಡುತ್ತಿದ್ದಾಗ, ಮಹಿಳೆಯರೂ ಭಾಗವಹಿಸಬೇಕು ಎಂದಿದ್ದನ್ನು ಕೇಳಿಸಿಕೊಂಡ ಕಮಲಾವತಿ ಪುತ್ತೂರಿನಲ್ಲೇ ಮಹಿಳಾ ಸಂಘಟನೆ ಹುಟ್ಟು ಹಾಕಿ ಹೋರಾಟಕ್ಕೆ ಇಳಿದರು. ಪೊಲೀಸರು ಅವರನ್ನು ಬಂಧಿಸಿ ವೆಲ್ಲೂರು ಜೈಲಿಗೆ ಕಳುಹಿಸಿದರು. 6 ತಿಂಗಳು ಜೈಲಿನಲ್ಲಿದ್ದರು.
ಲಾಠಿ ಏಟು ತಿಂದ ಎಂ.ಡಿ. ಅಧಿಕಾರಿಯವರಿಗೆ ಪ್ರಜ್ಞೆ ಮರಳಿದಾಗ ಚಿಕಿತ್ಸೆ ನೀಡಿದ ವೈದ್ಯರು, ಮರಳಿ ಮೈದಾನಕ್ಕೆ ಹೋಗುತ್ತೀರಾ ಎಂದು ಕೇಳಿದ್ದರಂತೆ. “ನೀವು ಬಿಟ್ಟರೆ ಈಗಲೇ ಹೋಗುವೆ’ ಎಂದಿದ್ದರಂತೆ ಅವರು. ಚೇತರಿಸಿಕೊಂಡ ಅಧಿಕಾರಿಯವರನ್ನು ಮತ್ತೆ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಯಿತು. ಒಂದು ವರ್ಷ ಕಠಿನ ಶಿಕ್ಷೆ ಅನುಭವಿಸಿದ್ದರು. ಅನಂತರದ ದಿನಗಳಲ್ಲಿ ಕೇಂದ್ರ ಸರಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡಿದ ಗೌರವಧನವನ್ನು ದೇಶಭಕ್ತಿಯಿಂದ ನಿರಾಕರಿಸಿದ್ದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು ಇವರು.