ನವಿಮುಂಬಯಿ: ರಾಷ್ಟ್ರದ ಬೆಳವಣಿಗೆ, ರಾಷ್ಟ್ರದ ಹಿತಾಸಕ್ತಿ ಎಲ್ಲವೂ ನಮ್ಮ ನಮ್ಮ ಮನೆಯಿಂದಲೇ ಪ್ರಾರಂಭಗೊಳ್ಳುತ್ತದೆ. ಮನೆಯಲ್ಲಿ, ಸಮಾಜದಲ್ಲಿ ಪ್ರಾರಂಭಗೊಂಡ ಒಮ್ಮತ, ಒಗ್ಗಟ್ಟು, ಬೆಳವಣಿಗೆ ಮುಂದುವರಿದು ದೇಶದ ಭದ್ರತೆಗೆ ನೆರವಾಗುವುದು. ಅದಕ್ಕಾಗಿ ನಾವು ನಮ್ಮ ಮನೆ, ಕೇರಿ, ಸಮಾಜಗಳಿಂದಲೇ ದೇಶದ ಬೆಳವಣಿಗೆ, ದೇಶದ ಸಂರಕ್ಷಣೆ ಮತ್ತು ದೇಶದ ಪ್ರಗತಿ ಬಗ್ಗೆ ಚಿಂತನೆಯನ್ನು ಮುಂದುವರಿಸುತ್ತಿರ ಬೇಕು ಎಂದು ದೇವಾಡಿಗ ಸಂಘ ಮುಂಬಯಿ ಇದರ ಉಪಾಧ್ಯಕ್ಷ ನರೇಶ್ ದೇವಾಡಿಗ ಹೇಳಿದರು.
ಆ. 15 ರಂದು ಐರೋಲಿಯ ದೇವಾಡಿಗ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯದಿನಾಚರಣೆಯ ಸಂದರ್ಭ ಧ್ವಜಾರೋಹಣಗೈದು ಮಾತನಾಡಿದ ಅವರು, ದೇಶದ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದು ಎಲ್ಲರ ಧರ್ಮ ಎಂದರು.
ಸಂಘದ ಮಾಜಿ ಅಧ್ಯಕ್ಷ ಎಸ್. ಪಿ. ಕರ್ಮರನ್ ಮಾತನಾಡಿ, ಭಾರತದಲ್ಲಿ ಇಂದು ನಾವು ಶಾಂತಿಯುತವಾಗಿ ಬಾಳಲು ಕಾರಣ ನಮಗೆ ದೊರಕಿದ ಸ್ವಾತಂತ್ರ್ಯವಾಗಿದೆ. ಈ ಸ್ವಾತಂತ್ರ್ಯಪಡೆಯಲು ಅದೆಷ್ಟೋ ವೀರರು ಹೋರಾಟ ನಡೆಸಿದ ಕಾರಣ ಈಗ ನಾವು ಯಾವುದೇ ಚಿಂತೆಯಿಲ್ಲದೆ ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿದೆ. ಅವರ ಬಲಿದಾನದಿಂದ ಬಂದಂತಹ ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಅದನ್ನು ಪ್ರಬಲವಾಗಿಸುವಲ್ಲಿ ಭಾರತದ ಪ್ರತಿ ಪ್ರಜೆಗಳು ದುಡಿಯಬೇಕಾಗಿದೆ. ನಮ್ಮ ಮನೆಯಲ್ಲಿ, ಸಮಾಜದಲ್ಲಿ ನಾವು ಒಗ್ಗಟ್ಟಿನಿಂದ ಬಾಳಿ ಬದುಕಿದರೆ ಅದೇ ದೇಶದ ಉನ್ನತಿಗೆ ಸಾಧನ ಎಂದು ಹೇಳಿದರು.
ಸಂಘದ ಮಹಿಳಾ ಉಪಾಧ್ಯಕ್ಷೆ ಪೂರ್ಣಿಮಾ ಡಿ. ದೇವಾಡಿಗ ಮಾತನಾಡಿ, ಸಂಘ ಬೆಳೆಯಲು ಕಾರಣವಾದ ಎಲ್ಲ ಬಾಂಧವರಿಗೆ ಸಂಘದ ಪರವಾಗಿ ಧನ್ಯವಾದಗಳು. ಸಂಘದ ಶ್ರೇಯಸ್ಸಿಗೆ, ಸಂಘದ ಬೆಳವಣಿಗೆಗಾಗಿ ಎಲ್ಲರೂ ಮುಂದೆ ಬಂದು ಒಮ್ಮತದಿಂದ ಕೆಲಸ ಮಾಡಿದರೆ ಅದೇ ನಿಜವಾದ ಸಮಾಜಸೇವೆ ಮತ್ತು ದೇಶಸೇವೆ ಎಂದು ಹೇಳಿ ಶುಭ ಹಾರೈಸಿದರು.
ಸಂಘದ ಮಾಜಿ ಕೋಶಾಧಿಕಾರಿ ದಯಾನಂದ ದೇವಾಡಿಗ, ಹಿರಿಯ ಸದಸ್ಯ ಚಂದ್ರಶೇಖರ್ ದೇವಾಡಿಗ, ಸಂಘದ ಸ್ಥಳೀಯ ಸದಸ್ಯರಾದ ಭೋಜ ದೇವಾಡಿಗ, ಮಹಿಳಾ ಸದಸ್ಯೆಯರಾದ ಸುನಂದಾ ಕರ್ಮರನ್, ಧನವತಿ ದೇವಾಡಿಗ, ಶಾಂತಾ ಪಿ. ದೇವಾಡಿಗ, ಶಾಂತಾ ಎಸ್. ದೇವಾಡಿಗ, ಆಶಾ ದೇವಾಡಿಗ, ವೈಷ್ಣವಿ ಎನ್. ದೇವಾಡಿಗ, ತನ್ವಿ ಡಿ. ದೇವಾಡಿಗ, ಸ್ವಾತಿ ದೇವಾಡಿಗ, ವಿಮಲಾ ದೇವಾಡಿಗ, ಧನುಷ್ ಎನ್. ದೇವಾಡಿಗ, ರೋಹನ್ ಡಿ. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಪ್ರಭಾಕರ್ ದೇವಾಡಿಗ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.