“ನಾನು ಸಂಕ್ರಾಂತಿಗೆ ಜರಿ ಲಂಗ ತೊಟ್ಟು ಶಾಲೆಗೆ ಹೋಗುತ್ತೇನೆ. ಪೊಂಗಲ್ ಕುರಿತು ನನಗೆ ಭಾಷಣ ನೀಡಲು ಟೀಚರ್ ಹೇಳಿದ್ದಾರೆ’ ಎಂದು ಮಗಳು ಹೇಳಿದ್ದು ಕೇಳಿ ವಾರಕ್ಕೆ ಮೊದಲೇ ಮನೆಯಲ್ಲಿ ಹಬ್ಬದ ಸಡಗರ ಗರಿಗೆದರಿತು. ಜನವರಿ ತಿಂಗಳನ್ನು ಇಲ್ಲಿಯ ಶಾಲೆಗಳಲ್ಲಿ “ತಮಿಳು ಹೆರಿಟೇಜ್ ಮಂಥ್’ ಎಂದು ಆಚರಿಸುತ್ತಾರೆ. ಶಾಲಾ-ಕಾಲೇಜುಗಳಲ್ಲದೇ ಸ್ಥಳೀಯ ತಮಿಳು ಕೂಟಗಳು ಹಲವು ಕಾರ್ಯಕ್ರಮ, ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತವೆ.
ಭಾರತ, ಶ್ರೀಲಂಕಾ ಮತ್ತು ಮಲೇಶಿಯಾದಿಂದ ಕೆನಡಾಕ್ಕೆ ವಲಸೆ ಬಂದ ತಮಿಳು ಜನಾಂಗದವರ ಕೊಡುಗೆ, ಸಂಸ್ಕೃತಿ, ಆಚಾರ-ವಿಚಾರ ಕುರಿತು ಇಲ್ಲಿಯ ಶಾಲೆಗಳಲ್ಲಿ ಮಕ್ಕಳು ಅಭ್ಯಸಿಸುತ್ತಾರೆ. ತಮಿಳು ಭಾಷೆಯ ಹಲವು ಶಬ್ದಗಳನ್ನು ಕಲಿಯುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ತಮಿಳರ ಪ್ರಿಯ ಪೊಂಗಲ್ ಹಬ್ಬದ ಆಚರಣೆಗೆ ಬಹುಮಹತ್ವ. ನನ್ನ ಮಗಳ ತರಗತಿಯಲ್ಲಿ ಆಕೆಯೊಬ್ಬಳೇ ದಕ್ಷಿಣ ಭಾರತದವಳು. ಹಾಗಾಗಿ ಅವಳು ಆಯ್ಕೆಯಾಗಿದ್ದಳು. ಭಾಷಣದ ಜತೆಗೆ ಹಬ್ಬಕ್ಕೆ ಸಂಬಂಧಪಟ್ಟ ಸಾಮಗ್ರಿಗಳನ್ನು ಸಾಧ್ಯವಾದರೆ ತರಲು ಟೀಚರ್ ಹೇಳಿದ್ದು, ತನಗೆ ಎಳ್ಳು-ಬೆಲ್ಲ, ಕಬ್ಬು, ಗಾಳಿಪಟ, ಅದು- ಇದು ಬೇಕೆಂದು ಆಕೆ ಹೇಳುತ್ತಲೇ ಇದ್ದಳು. ಆಕೆಯ ಹುಮ್ಮಸ್ಸು ನೋಡಿ ನನಗೆ ನನ್ನ ಬಾಲ್ಯದ ಸಂಕ್ರಾಂತಿ ನೆನಪಾಯಿತು.
ಮಕರ ಸಂಕ್ರಾಂತಿಯೆಂದರೆ ಉತ್ತರಾಯಣ ಪುಣ್ಯ ಕಾಲ. ಆಗೆಲ್ಲ ನಾವು ಸಂಕ್ರಾಂತಿಗೆ ತಿಂಗಳಿರುವಾಗಲೇ ಬಟ್ಟೆ ಅಂಗಡಿಯಲ್ಲಿ ಖರೀದಿ ಮಾಡಿದ ರೇಷ್ಮೆ ಜರಿಯ ಲಂಗ-ರವಿಕೆ ಹೊಲಿಸಿಕೊಳ್ಳುತ್ತಿದ್ದೆವು. ಸಂಕ್ರಾಂತಿಯವರೆಗೆ ದಿನವೂ ಅದನ್ನು ಮುಟ್ಟಿ ನೋಡುವುದು. ಏನೋ ಒಂದು ರೀತಿಯ ಖುಷಿ. ತೊಡುವ ಕನಸು-ಆತುರ. ಶಾಲೆಯಲ್ಲೂ ಅದರ ಕುರಿತು ಗುಣಗಾನ. ಅದಕ್ಕೆ ಒಪ್ಪುವ ರಿಬ್ಬನ್, ಬಳೆಗಳ ಖರೀದಿ. ಅಂತೂ ಕಾಯುವಿಕೆಗೆ ವಿರಾಮ ದೊರೆತು ಹಬ್ಬ ಬರುತ್ತಿತ್ತು. ಅಮ್ಮನಿಗೂ ಅಂದು ಆಫೀಸಿಗೆ ರಜೆ. ಆಕೆ ಬೇಗ ಎದ್ದು ರಂಗೋಲಿ ಇಟ್ಟು ಬೇವು ತಂದು, ಅಡುಗೆಯ ಗಡಿಬಿಡಿಯಲ್ಲಿ ಇರುತ್ತಿದ್ದಳು.
ನಾನೂ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಹೂ ಮುಡಿದು, ಬಣ್ಣ ಬಣ್ಣದ ಬಳೆ ತೊಟ್ಟು ಸಿಂಗರಿಸಿಕೊಂಡು ಮನೆಯಲ್ಲಿ ಎಳ್ಳು ಬೀರಿ, ಅಪ್ಪ ತಂದ ಹೊಸ ಸ್ಟೀಲಿನ ಡಬ್ಬಿಯಲ್ಲಿ ಎಳ್ಳನ್ನು ತುಂಬಿ ಗೆಳತಿಯರ ಬರುವಿಕೆಗೆ ಕಾಯುತ್ತಿದ್ದೆ. ಎಲ್ಲರೂ ಸೇರಿ ಸುತ್ತಲಿನ ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಎಳ್ಳು-ಬೆಲ್ಲ ಹಂಚುತ್ತಿದ್ದೆವು. ಮನೆಮನೆಯ ಹೆಂಗಸರು ನಮ್ಮನ್ನು ಬರ ಮಾಡಿಕೊಂಡು ಹಣೆ ತುಂಬ ಕುಂಕುಮ ಹಚ್ಚಿ ಕೈತುಂಬ ಎಳ್ಳು ನೀಡಿ ಡಬ್ಬಿಯನ್ನು ತುಂಬಿಸಿಯೆ ಕಳಿಸುತ್ತಿದ್ದರು. ಕೆಲವರು ಎಳ್ಳಿನ ಉಂಡೆ- ಚಿಕ್ಕಿ ಕೂಡ ನೀಡುತ್ತಿದ್ದರು.
ದಣಪೆ ಎನ್ನುವ ಗೇಟನ್ನು ದಾಟುವಾಗ ಉದ್ದನೆಯ ಲಂಗ ಕಾಲಿಗೆ ಎಡತಾಕಿ ಬಿದ್ದು ಡಬ್ಬಿಯ ಎಳ್ಳು ನೆಲಪಾಲಾಗಿ ಅತ್ತು ಕರೆದದ್ದೂ ಇದೆ. ಆಗೆಲ್ಲ ಹಿರಿಯರು ಕರೆದು ಮತ್ತೆ ಡಬ್ಬಿ ತುಂಬಿಸಿ ನಗಿಸಿ ಕಳಿಸುತ್ತಿದ್ದರು. ಅಂದು ಬೀದಿಯ ರಸ್ತೆಯ ತುಂಬ ಬಣ್ಣ ಬಣ್ಣ ಜರಿಯ ಲಂಗ ತೊಟ್ಟ ಹೆಂಗೆಳೆಯರು ಹಬ್ಬದ ಕಳೆ ತರುತ್ತಿದ್ದರು. ಬೆಳಗ್ಗೆ ಸುಮಾರು 10 ಗಂಟೆಗೆ ಹೊರಟರೆ ಮಧ್ಯಾಹ್ನವೇ ಮನೆಗೆ ವಾಪಸಾಗುತ್ತಿದ್ದೆವು.
ದಿನವಿಡೀ ಎಳ್ಳು ತಿನ್ನುತ್ತಾ ಗೆಳತಿಯರೊಡನೆ ಹರಟುತ್ತ ಮನೆಗೆ ಬಂದರೆ ಮತ್ತೆ ಊಟ ಸೇರುತ್ತಿರಲಿಲ್ಲ. ಹೊಟ್ಟೆ ಕೆಟ್ಟರೆ ಬೇವಿನ ಕಷಾಯ ಕುಡಿಯಲೇ ಬೇಕಿತ್ತು. ಅಮ್ಮ ಮಾಡಿದ ಪಾಯಸವಾಗಲಿ, ಹೋಳಿಗೆಯಾಗಲಿ ಒತ್ತಾಯ ಪೂರ್ವಕ ತಿಂದು ಪ್ರತೀ ಮನೆಯ ಸುದ್ದಿ ಎಲ್ಲರಿಗೂ ಒಪ್ಪಿಸಿ ಸಂತೋಷ ಪಡುತ್ತಿದ್ದೆವು.
ಬೇರೊಬ್ಬ ಗೆಳತಿಯ ಜರಿಯ ಅಂಗಿ ಇಷ್ಟವಾದರೆ ಮುಂದಿನ ವರ್ಷ ನನಗೂ ಅದು ಬೇಕೆಂದು ಅರ್ಜಿ ಸಲ್ಲಿಸುತ್ತಿದ್ದೆ. ಸಾಯಂಕಾಲ ಅಮ್ಮನೊಡನೆ ದೇವಸ್ಥಾನಕ್ಕೋ ಬಂಧು ಬಳಗದವರ ಮನೆಗೆ ಹೋಗಿ ಎಳ್ಳು ಹಂಚಿ ಬರುತ್ತಿದ್ದೆವು. ಮರುದಿನ ಅಮ್ಮ ಮತ್ತೆ ಡಬ್ಬಿ ತುಂಬಿಸಿ ಕೊಡುತ್ತಿದ್ದಳು. ಶಾಲೆಯಲ್ಲಿ ಹಂಚುವ ಖುಷಿ. ಹೊಸ ಬಟ್ಟೆ ತೊಟ್ಟು ಬೀಗುವ ಹುರುಪು. ಚಾಳಿ ಟೂ ಬಿಟ್ಟ ಗೆಳತಿಯರಿಗೂ ಹಂಚಿ ಮತ್ತೆ ಒಂದಾಗುವ ದಿನ. ಅಂದು ಶಾಲೆಯಲ್ಲಿ ಪಾಠ-ಪ್ರವಚನ ಅಷ್ಟಕ್ಕಷ್ಟೇ ! ಮತ್ತೆ ಮನೆಗೆ ಬಂದು ವರದಿ ನೀಡುವುದು. ಸಂಕ್ರಾಂತಿಯೆಂದರೆ ಹೆಣ್ಣು ಮಕ್ಕಳ ಹಬ್ಬ, ಬಿಡು ಎಂದು ಅಪ್ಪ ಛೇಡಿಸಿದಾಗ ಸುಮ್ಮನಾದರೂ ಹೌದು ಎಂಬ ಹೆಮ್ಮೆ.
ಕಾಲ ಬದಲಾಗಿದೆ
ಈಗ ಊರಿನಲ್ಲೂ ಆ ತೆರನ ಆಚರಣೆ ಕಳೆದು ಹೋಗಿದೆ. ಮುಂದೆ ಉನ್ನತ ಶಿಕ್ಷಣಕ್ಕೆ ಧಾರವಾಡಕ್ಕೆ ಹೋದಾಗ ಅಲ್ಲಿಯ ಆಚರಣೆಯೂ ಆಕರ್ಷಿಸಿತು. ಬೇವು-ಬೆಲ್ಲ ಸವಿಯುವುದರೊಡನೆ ಕುಟುಂಬಿಕರು ಸೇರಿ ನದಿ-ಸರೋವರಗಳಂತಹ ಜಲ ಮೂಲಕ್ಕೆ ತೆರಳಿ ಪುಣ್ಯ ಸ್ನಾನ ಮಾಡುವುದು ಅಲ್ಲಿಯ ಪದ್ಧತಿ. ಮದುವೆಯಾದ ಅನಂತರ ಉತ್ತರ ಭಾರತದ ಅಲಹಾಬಾದ್‌ನಲ್ಲಿ ಹುಟ್ಟಿ ಬೆಳೆದ ಯಜಮಾನರು ಸಂಕ್ರಾಂತಿಯನ್ನು ಅಲ್ಲಿ ಹೇಗೆ ಆಚರಿಸುತ್ತಾರೆಂದು ಪರಿಚಯಿಸಿದ್ದರು.
ಅಲಹಾಬಾದ್ ಅಥವಾ ಇಂದಿನ ಪ್ರಯಾಗ್ ರಾಜ್ ನಲ್ಲಿರುವ ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಮೈ ಮಡುಗಟ್ಟುವ ನೀರಿನಲ್ಲಿ ಜನರು ಪುಣ್ಯ ಸ್ನಾನ ಮಾಡಿ ಸೂರ್ಯನಿಗೆ ಅಘÂì ನೀಡುವುದು ಅಲ್ಲಿಯ ಕ್ರಮ. ಚುಮುಚುಮು ಚಳಿಗೆ ದೇಹದ ಉಷ್ಣತೆ ಕಾಪಾಡುವಲ್ಲಿ ಎಳ್ಳು-ಬೆಲ್ಲ ಸಹಾಯಕಾರಿ. ಅಂತೆಯೇ ಎಳ್ಳಿನ ಸಿಹಿತಿಂಡಿಗಳಾದ ರೇವಡಿ ಮತ್ತು ಗಜಕ್‌ಗೆ ಸಂಕ್ರಾಂತಿಯಲ್ಲಿ ಬೇಡಿಕೆ.
ಈಗ ಊರಿನಲ್ಲೂ ಆ ತೆರನ ಆಚರಣೆ ಕಳೆದು ಹೋಗಿದೆ. ಮಗಳು ಜರಿಯ ದಿರಿಸು ತೊಟ್ಟು ನೋಡುತ್ತಿದ್ದಳು. ನನ್ನ ಬಾಲ್ಯ ನೆನಪಿಸಿದ ಅವಳ ಕಣ್ಣಿನ ಹೊಳಪು ಮಿನುಗುತ್ತಲೇ ಇತ್ತು.
*ಸಹನಾ ಹರೇಕೃಷ್ಣ, ಟೊರಂಟೋ