ಅರುಣ್ ಕೃಷ್ಣರಾವ್ ತಮ್ಮ ಮಗ ಮತ್ತು ಪತ್ನಿಯೊಡನೆ ಝಾನ್ಸಿಯ ಕೋಟೆ ನೋಡಲು ಹೋದದ್ದು 1998ರಲ್ಲಿ . ಝಾನ್ಸಿ ಕೋಟೆ ಇರುವುದು ಪುರಾತಣ್ತೀ ಇಲಾಖೆಯ ವಶದಲ್ಲಿ . ಹೊರಗೆ ಟಿಕೇಟಿಗಾಗಿ ಉದ್ದದ ಸರತಿ ಸಾಲು. ಅರುಣ್ ಕೃಷ್ಣರಾವ್ ಎಲ್ಲರೊಡನೆ ಸಾಲಿನಲ್ಲಿ ನಿಂತು ಹತ್ತು ರೂಪಾಯಿಯ ಮೂರು ಟಿಕೇಟು ಖರೀದಿಸಿ ಒಳಗೆ ಪ್ರವೇಶಿಸಿದ್ದರು.
ಅರುಣ್ ಕೃಷ್ಣರಾವ್ ಕೂಡ ಝಾನ್ಸಿಗೆ ಬರುತ್ತಿರುವುದು ಇದೇ ಮೊದಲು. ಈ ಕೋಟೆಯನ್ನು ಓರ್ಛಾದ ರಾಜಾ ಬೀರ್‌ಸಿಂಗ್
ಜುದೇವ್ 1606ರಲ್ಲಿ ಬಂಗೀರಾ ಎಂಬ ಹೆಸರಿನ ಕಗ್ಗಲ್ಲಿನ ಬೆಟ್ಟದ ಮೇಲೆ ನಿರ್ಮಿಸಿದ್ದ . ಕೋಟೆಯ ಸುತ್ತ ಹತ್ತು ದರವಾಜಾಗಳು. ಒಳಗೆ ಕಡಕ್ ಬಿಜ್ಲಿ ತೋಪ್ (ಫಿರಂಗಿ), ರಾಣಿ ಝಾನ್ಸಿ ಉದ್ಯಾನ, ಶಿವ ದೇವಾಲಯ, ರಾಣಿಯ ರಕ್ಷಣೆಗಾಗಿ ಪ್ರಾಣ ಬಲಿದಾನ ಮಾಡಿದ್ದ ಗುಲಾಮ್ ಗೌಸ್‌ಖಾನ್, ಮೋತೀ ಬಾಯಿ ಮತ್ತು ಖುದಾಬಕ್ಷ್ ರ ಮಜರ್. ಕೋಟೆಯ ನಡುವೆ ರಾಣಿ ಮಹಲ್. ಒಂದು ಕಾಲದಲ್ಲಿ ರಾಣೀ ಲಕ್ಷ್ಮೀಬಾಯಿಯ ನಿವಾಸಸ್ಥಾನವಾಗಿದ್ದ ಈ ಅರಮನೆ ಇಂದು ಒಂದು ಮ್ಯೂಸಿಯಂ ಆಗಿದೆ. ಇಲ್ಲಿನ ವಸ್ತುಗಳು, ಚಿತ್ರಗಳು ರಾಣಿಯ ಕಥೆಯನ್ನು ಜೀವಂತವಾಗಿಟ್ಟಿವೆ.
ರಾಣಿಮಹಲ್‌ನ ವೈಭವ ನೋಡುತ್ತ ಅರುಣ್ ಕೃಷ್ಣರಾವ್ ಕಣ್ಣಲ್ಲಿ ನೀರು ಬಂದಿತ್ತು. ಮಗನ ಕೈ ಒತ್ತುತ್ತ ಉಸುರಿದ್ದರು. “ಸರಿಯಾಗಿ ನೋಡು, ಲಕ್ಷ್ಮಣ್. ಇದು ನಿನ್ನ ಮುತ್ತಜ್ಜಿಯ ಮನೆ. ಇದೆಲ್ಲ ನಮ್ಮದೇ ಆಸ್ತಿ.’ ಲಕ್ಷ್ಮಣ್ ಇನ್ನೂ ಎಳೆಯ ಹುಡುಗ. ಅವನಿಗೆ ಅಪ್ಪನ ಮಾತು ಅರ್ಥವಾಗಿರಲಿಲ್ಲ . ಶಾಲೆಯಲ್ಲಿ ಝಾನ್ಸಿಯ ವೀರ ರಾಣಿಯ ಕಥೆ ಓದಿ ಬೆಳೆದವನಿಗೆ ತಾನು ಅವಳದೇ ವಂಶದ ಕುಡಿ ಎಂಬ ಮಾತು ಅವನಿಗೆ ಇನ್ನೂ ತಿಳಿದಿರಲಿಲ್ಲ! ಈ ಕಥೆ ಹಲವು ತಲೆಮಾರುಗಳ ಹಿಂದಕ್ಕೆ ಸಾಗುತ್ತದೆ…
ಝಾನ್ಸಿಯ ಲಕ್ಷ್ಮೀಬಾಯಿ (1828-1858)
ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಸಾಹಸಗಾಥೆ ಯಾರು ತಾನೇ ಕೇಳಿಲ್ಲ? ಬ್ರಿಟಿಷರ ವಿರುದ್ಧ ಇವಳ ನಿರ್ಭೀತ ಹೋರಾಟವನ್ನು ನೆನಪಿಸಿಕೊಳ್ಳುವಾಗ ಇಂದಿಗೂ ಮೈ ನವಿರೇಳುತ್ತದೆ, ಎದೆ ಹೆಮ್ಮೆಯಿಂದ ಉಬ್ಬಿ ಬರುತ್ತದೆ. 1851ರಲ್ಲಿ ಝಾನ್ಸಿಯ ಪೇಶ್ವೆ (ಬಾಲಗಂಗಾಧರ ರಾವ್) ತೀರಿಕೊಂಡಾಗ ಆತನ ಪತ್ನಿ ಲಕ್ಷ್ಮೀಬಾಯಿ ಪೇಶ್ವೆಯ ಎಳೆಯ ದತ್ತು ಪುತ್ರ ದಾಮೋದರ ರಾವ್‌ನನ್ನು ಪಟ್ಟಕ್ಕೇರಿಸಿದ್ದಳು. ಆದರೆ ಝಾನ್ಸಿಯ ಮೇಲೆ ಹಿಕ್ಮತ್ ನಡೆಸುತ್ತಿದ್ದ ಕಂಪೆನಿ ಸರಕಾರ ಇದಕ್ಕೆ ಅಡ್ಡ ಬಂತು.
ಲಕ್ಷ್ಮೀಬಾಯಿಗೆ 60 ಸಾವಿರ ರೂಪಾಯಿ ವಾರ್ಷಿಕ ಪಿಂಚಣಿಯ ಜೊತೆಗೆ ಝಾನ್ಸಿಯ ಅರಮನೆ ಬಿಟ್ಟು ಹೋಗಲು ಅದೇಶ ಕಳಿಸಿತು. “”ಮೇರೀ ಝಾನ್ಸಿ ನಹೀಂ ದೂಂಗೀ (ನನ್ನ ಝಾನ್ಸಿ ಬಿಟ್ಟುಕೊಡುವುದಿಲ್ಲ)” ಎಂದು ಗುಡುಗಿದ್ದಳು ಲಕ್ಷ್ಮೀಬಾಯಿ. ರಾಣಿ ಬ್ರಿಟಿಷರನ್ನು ಕೋಟೆಯಿಂದ ತೊಲಗಿಸಿದಳು. ಝಾನ್ಸಿಯ ಕೋಟೆಯನ್ನು ಬಲಪಡಿಸಿ, ಬಲವಾದ ಸೈನ್ಯ ಕಟ್ಟಿಕೊಂಡಳು. ಕಂಪೆನಿ ಸರಕಾರ ಝಾನ್ಸಿಯ ಮೇಲೆ ದಂಡೆತ್ತಿ ಬಂತು- ಎರಡು ಬಾರಿ ಅವರ ಆಕ್ರಮಣವನ್ನು ಝಾನ್ಸಿಯ ಸೈನ್ಯ ಹಿಮ್ಮೆಟ್ಟಿಸಿತು.
1857ರಲ್ಲಿ ಸಿಪಾಯಿಗಳು ಕಂಪೆನಿ ಸರಕಾರದ ವಿರುದ್ಧ ಸಿಡಿದೆದ್ದರು. ಮೊತ್ತಮೊದಲ ಭಾರತವ್ಯಾಪಿ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಯಿತು. ಬುಂದೇಲ್‌ಖಂಡದ ಆಯಕಟ್ಟಿನ ಸ್ಥಾನದಲ್ಲಿದ್ದ ಝಾನ್ಸಿಯ ಕೋಟೆ ಕಂಪೆನಿ ಸರಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಅವರು ಅದನ್ನು ವಶಪಡಿಸಿಕೊಳ್ಳಲು ಶತಪ್ರಯತ್ನ ಮಾಡಿದರು. 1858ರಲ್ಲಿ ಝಾನ್ಸಿಯ ಮೇಲೆ ಆಕ್ರಮಣಕ್ಕೆ
ಸರ್ ಹ್ಯೂ ರೋಸ್ ಎಂಬ ದಂಡನಾಯಕನ ನೇತೃತ್ವದಲ್ಲಿ ದೊಡ್ಡದೊಂದು ಸೈನ್ಯ ಕಳಿಸಿದ್ದರು. ಪದೇ ಪದೇ ಆಕ್ರಮಣದಿಂದ ಝಾನ್ಸಿಯ ಸೈನ್ಯ ಜರ್ಝರಿತವಾಗಿತ್ತು. ಝಾನ್ಸಿಯ ರಕ್ಷಣೆಗೆ ನಿಂತದ್ದು ಕೇವಲ ನಾಲ್ಕು ಸಾವಿರ ಸೈನಿಕರ ಸೈನ್ಯ. ಆದರೆ ರಾಣಿ
ಲಕ್ಷ್ಮೀಬಾಯಿಯ ಅಪ್ರತಿಮ ಸಾಹಸಕ್ಕೆ ಬ್ರಿಟಿಷ್ ಸೈನ್ಯ ಕಂಗೆಟ್ಟಿತು. ಕೋಟೆಯಿಂದ ಸಿಡಿದ ತೋಪುಗಳು ಬ್ರಿಟಿಷರನ್ನು ಹಿಮ್ಮೆಟ್ಟಿಸಿದವು.
ಝಾನ್ಸಿಯಾ ಕೊನೆಯ ಕುಡಿಗಳು: ಅರುಣ್ ಕೃಷ್ಣರಾವ್ ಝಾನ್ಸೀವಾಲೇ ಮತ್ತು ಪರಿವಾರ
ಬ್ರಿಟಿಷರು ಝಾನ್ಸಿಗೆ ಹೆಚ್ಚು ಸೇನಾ ತುಕಡಿಗಳನ್ನು ಕಳುಹಿಸಿದರು. ಅವರ ತೋಪುಗಳ ದಾಳಿಗೆ ಝಾನ್ಸಿಯ ಕೋಟೆಯ ರಕ್ಷಣೆ ಕುಸಿದು ಬಿತ್ತು. ಲಕ್ಷ್ಮೀಬಾಯಿಯನ್ನು ಜೀವಂತ ಸೆರೆಹಿಡಿಯಬೇಕೆಂದು ರೋಸ್ ಯೋಚಿಸಿದ್ದ. ಪ್ರಾಣ ತೆತ್ತರೂ ಸರಿ, ಶರಣಾಗುವುದಿಲ್ಲ , ಸೆರೆ ಸಿಗುವುದಿಲ್ಲ ಎಂದು ಶಪಥ ಹಾಕಿದ್ದಳು ಲಕ್ಷ್ಮೀಬಾಯಿ.
ಆಕೆ ಸಾಮಾನ್ಯ ಸೈನಿಕನ ವೇಷ ತೊಟ್ಟು , ಮಗನನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು, ನೆಚ್ಚಿನ ಕುದುರೆ ಬಾದಲ್‌ನ ಮೇಲೇರಿ ಮಧ್ಯರಾತ್ರಿಯ ವೇಳೆ ಕೋಟೆಯಿಂದ ಹೊರಗೆ ಧುಮುಕಿದಳು. ಸೆರೆ ಹಿಡಿಯಲು ನುಗ್ಗಿದ ಬ್ರಿಟಿಷ್ ಸೈನಿಕರಿಂದ ತಪ್ಪಿಸಿಕೊಂಡು ಉತ್ತರ ಪ್ರದೇಶದ ಜಾಲಾನ್ ಜಿಲ್ಲೆಯ ಕಲ್ಪಿ ಕೋಟೆಯತ್ತ ಧಾವಿಸಿದಳು.
ಕಲ್ಪಿಯಲ್ಲಿ ಆಕೆಯ ನಿಕಟವರ್ತಿ ತಾತ್ಯಾಟೋಪೆಯ ಸೈನ್ಯ ಇತ್ತು. ಬ್ರಿಟಿಷ್ ಅಧಿಕಾರಿ ರೋಸ್ ಝಾನ್ಸಿಯನ್ನು ಕಬಳಿಸಿ ಕಲ್ಪಿಯತ್ತ ದಂಡೆತ್ತಿ ಹೋದ. ಕಾನ್ಪುರದಿಂದ ಹೊಸ ತುಕಡಿಗಳು ರೋಸ್‌ನ ಜೊತೆಗೆ ಸೇರಿಕೊಂಡವು. ಬಲವಾದ ಬ್ರಿಟಿಷ್ ಸೈನ್ಯ ಕಲ್ಪಿಗೆ ಮುತ್ತಿಗೆ ಹಾಕಿತು. ತಾತ್ಯಾ ಮತ್ತು ಲಕ್ಷ್ಮೀಬಾಯಿ ಜೀವದ ಹಂಗು ತೊರೆದು ಹೋರಾಡಿದರು. ಎಡೆಬಿಡದ ಪಿರಂಗಿ ಹೊಡೆತಗಳಿಗೆ ಕಲ್ಪಿಯ ಗೋಡೆಗಳು ಮುರಿದುಬಿದ್ದವು. ತಾತ್ಯಾಟೋಪೆ ಅಲ್ಲಿ ಕೂಡಿಸಿಟ್ಟಿದ್ದ ಅಸಂಖ್ಯ ಮದ್ದು ಗುಂಡುಗಳು ಬ್ರಿಟಿಷರ ಕೈವಶವಾದವು. ಕೋಟೆ ಬೀಳುತ್ತಲೇ ತಾತ್ಯಾ ಮತ್ತು ಲಕ್ಷ್ಮೀಬಾಯಿ ಗ್ವಾಲಿಯರ್‌ಗೆ ದೌಡಾಯಿಸಿದರು.
ಗ್ವಾಲಿಯರ್‌ನ ರಾಜ ಸಿಂಧಿಯಾ ಬ್ರಿಟಿಷರ ಕೈಗೊಂಬೆಯಾಗಿದ್ದ . ಆತ ಸಹಾಯಹಸ್ತ ಕೊಡಲು ಹಿಂಜರಿದ. ಆದರೆ ಆತನ ಸೈನ್ಯದ ಸಿಪಾಯಿಗಳು ತಾತ್ಯಾ ಮತ್ತು ಲಕ್ಷ್ಮೀಬಾಯಿಯ ಜೊತೆಗೆ ಸೇರಿಕೊಂಡು ಹಿಂದೂ ಸ್ವರಾಜ್ಯದ ಘೋಷಣೆ ಮಾಡಿದರು. ಗ್ವಾಲಿಯರ್ ತಾತ್ಯಾನ ಕೈವಶವಾದ ಸುದ್ದಿ ಕಂಪೆನಿ ಸರಕಾರವನ್ನು ಬೆಚ್ಚಿ ಬೀಳಿಸಿತು. ರೋಸ್ ಕೂಡಲೇ ಅಲ್ಲಿಗೆ ದಂಡೆತ್ತಿ ಹೋದ. ರಾಣಿ ಲಕ್ಷ್ಮೀಬಾಯಿ ಮತ್ತು ತಾತ್ಯಾಟೋಪೆ ವೀರಾವೇಶದಿಂದ ಹೋರಾಡಿದರು. ಅವರ ಕೆಚ್ಚಿನ ಸೈನ್ಯ ಬ್ರಿಟಿಷರಿಗೆ ಹೊಡೆತದ ಮೇಲೆ ಹೊಡೆತ ಕೊಟ್ಟಿತು. ಆದರೆ ಕಾನ್ಪುರದಿಂದ ಇನ್ನಷ್ಟು ಸೈನಿಕ ತುಕಡಿಗಳು ಬಂದು ಬ್ರಿಟಿಷರನ್ನು ಸೇರಿ ಕೊಂಡವು. ಗ್ವಾಲಿಯರ್ ಕೋಟೆಯೊಳಗೆ ಸಿಪಾಯಿಗಳ ಬಲ ಕುಗ್ಗುತ್ತ ಬಂತು. ರಾಣಿ ಮತ್ತು ತಾತ್ಯಾ ಕೋಟೆಯ ಹೆಬ್ಬಾಗಿಲು ತೆರೆದು ನೇರ ಯುದ್ಧ ಕ್ಕೆ ಬಂದರು.
ರಾಣಿ ವೀರಾವೇಶದಿಂದ ಹೋರಾಡಿದಳು. ಆಕೆಯ ಎದೆಯ ಮೇಲೆ ಕತ್ತಿಯ ಹೊಡೆತ ಬಿತ್ತು. ಬಲಗಣ್ಣು ಕಿತ್ತು ಬಂತು. ಸಿಂಧಿಯಾ ಇಲ್ಲೂ ಒಂದು ಕುತಂತ್ರ ಮಾಡಿದ್ದ. ರಾಣಿ ಲಕ್ಷ್ಮೀಬಾಯಿಗೆ ಒಂದು ದುರ್ಬಲ ಕುದುರೆಯನ್ನು ಕಳಿಸಿದ್ದ . ಲಕ್ಷ್ಮೀಬಾಯಿ ಈ ಕುದುರೆಯ ಮೇಲೇರಿ ಯುದ್ಧ ಭೂಮಿಯಿಂದ ಪರಾರಿಯಾದಳು. ದಾರಿಯಲ್ಲಿ ಅವಳಿಗೆ ಒಬ್ಬ ಸನ್ಯಾಸಿ ಸಿಕ್ಕಿದ. ಬ್ರಿಟಿಷರ ಕೈಗೆ ಸಿಗದಂತೆ ತನ್ನ ಮೃತ ದೇಹವನ್ನು ಸುಟ್ಟು ಹಾಕಲು ಹೇಳಿ ರಾಣಿ ಅಸುನೀಗಿದಳು.
ಸ್ವಾತಂತ್ರ್ಯದ ಬಳಿಕ ಝಾನ್ಸಿಯ ಕೋಟೆ ಪುರಾತಣ್ತೀ ಇಲಾಖೆಯ ವಶಕ್ಕೆ ಸೇರಿತು. ಝಾನ್ಸಿಯ ಅರಮನೆ ರಾಣಿ ಮಹಲನ್ನು ಒಂದು ಪ್ರದರ್ಶನಾಲಯವಾಗಿ ಮಾಡಲಾಯಿತು. ಭಾರತದ ಹೆಚ್ಚಿನ ಅರಮನೆಗಳು ಇಂದಿಗೂ ರಾಜವಂಶದವರ ಕೈಯಲ್ಲೇ ಇವೆ. ಇವರೆಲ್ಲ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಬ್ರಿಟಿಷರಿಗೆ ಬೆಂಬಲ ನೀಡಿದವರು. ರಾಣಿ ಲಕ್ಷ್ಮೀಬಾಯಿಗೆ ದ್ರೋಹ ಬಗೆದು, ಬ್ರಿಟಿಷರಿಗೆ ನೆರವಾಗಿದ್ದ ಸಿಂಧಿಯಾ ರಾಜ ವಂಶಜರಿಗೆ ಬ್ರಿಟಿಷ್ ಸರಕಾರ ಭಾರೀ ಬಹುಮಾನ, ಜಾಗೀರು ನೀಡಿತು. ಸಿಂಧಿಯಾ ವಂಶಜರ ಬಳಿ ಇಂದಿಗೂ ಗ್ವಾಲಿಯರ್‌ನ ಭವ್ಯ ಅರಮನೆ ಮತ್ತು ಸಾಕಷ್ಟು ಭೂಮಿ, ಆಸ್ತಿಗಳಿವೆ. ಇವರು ಕಾಲಕಾಲಕ್ಕೆ ಚುನಾವಣೆಗಳಲ್ಲಿ ಗೆದ್ದು ಸರಕಾರಕ್ಕೆ ಸೇರಿಕೊಳ್ಳುತ್ತಾರೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ವಂಶಜರು ಎಲ್ಲಿದ್ದಾರೆ?
ರಾಣಿ ಯುದ್ಧ ಭೂಮಿಯಲ್ಲಿ ತೀರಿಕೊಂಡಾಗ ದಾಮೋದರ ರಾವ್ ಆಗಿನ್ನೂ ಎಂಟು ವರ್ಷದ ಮಗು. ರಾಣಿ ಅವನನ್ನು ಆಪ್ತ ಸೇವಕರ ಕೈಗೆ ಕೊಟ್ಟು ಅವನನ್ನು ಪಾರುಗೊಳಿಸಲು ಹೇಳಿದ್ದಳು. ಗ್ವಾಲಿಯರ್‌ನ ಸಿಂಧಿಯಾ ಸಹಿತ ಹಲವಾರು ನಂಬಿಕೆಯ ರಾಜರ ನೆರವಿನಲ್ಲಿ ಬ್ರಿಟಿಷರು ಸಿಪಾಯಿ ದಂಗೆಯನ್ನು ನಿರ್ದಯವಾಗಿ ಹತ್ತಿಕ್ಕಿದರು. ದೇಶದ ಸುತ್ತ ಹಳ್ಳಿ , ಹಳ್ಳಿಗಳ ದಾರಿಗಳ ನಡುವೆ ಸಿಪಾಯಿಗಳನ್ನು ಮತ್ತು ಅವರ ಬೆಂಬಲಿಗರನ್ನು ಮರಗಳಿಗೆ ನೇಣುಹಾಕಿ ತೂಗಿಸಿದರು. ಈ ಹೆಣಗಳನ್ನು ಇಳಿಸಿ ಅಂತ್ಯ ಸಂಸ್ಕಾರ ಮಾಡುವವರೇ ಇರಲಿಲ್ಲ .
ರಾಣಿಯ ಸೇವಕರು ದಾಮೋದರ್‌ನನ್ನು ಎಲ್ಲೋ ಒಯ್ದು ಸಾಕಿದರು. ಕೆಲವು ವರ್ಷಗಳ ಬಳಿಕ ಆತ ಬ್ರಿಟಿಷರಿಗೆ ಶರಣಾಗತನಾದ. ಬ್ರಿಟಿಷರು ಅವನ ಮೇಲೆ ದಯೆ ತೋರಿ, “ಬ್ರಿಟಿಷರ ವಿರುದ್ಧ ಯಾವುದೇ ಹಗರಣದಲ್ಲಿ ಭಾಗಿಯಾಗುವುದಿಲ್ಲ’ ಎಂಬ ಮುಚ್ಚಳಿಕೆ ಬರೆಸಿಕೊಂಡು ಇಂದೋರ್‌ಗೆ ಗಡಿಪಾರು ಮಾಡಿದ್ದರು.
ದಾಮೋದರ ರಾವ್ ಇಂದೋರ್‌ನಲ್ಲಿ ರೆಸಿಡೆನ್ಸಿ ರೋಡ್‌ನಲ್ಲಿ ಬ್ರಿಟಿಷ್ ಸರಕಾರ ನೀಡಿದ್ದ ಮನೆಯಲ್ಲಿ ಅಜ್ಞಾತವಾಸ ನಡೆಸಿ 1906ರಲ್ಲಿ ತೀರಿಕೊಂಡ. ಆತನ ಮಗ ಲಕ್ಷ್ಮಣ್ ರಾವ್‌ಗೆ ಬ್ರಿಟಿಷ್ ಸರಕಾರ 200 ರೂಪಾಯಿ ಪಿಂಚಣಿ ಕೊಡುತ್ತಿತ್ತು. ಅವನ ಮಕ್ಕಳು- ಮೊಮ್ಮಕ್ಕಳು ತಮ್ಮ ಪರಿಚಯವನ್ನು ಬಚ್ಚಿಟ್ಟುಕೊಂಡು ಇಂದೋರ್‌ನಲ್ಲಿ ವಾಸವಾಗಿದ್ದರು. ಎರಡು ಹೊತ್ತು ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಅವರದಾಗಿತ್ತು. ಸ್ವಾತಂತ್ರ್ಯದ ಬಳಿಕ ಭಾರತ ಸರಕಾರ ಅವರನ್ನು ರೆಸಿಡೆನ್ಸಿ ಪ್ರದೇಶದ ಮನೆಯಿಂದ ಉಚ್ಚಾಟಿಸಿತ್ತು.ಅವರು ಇಂದೋರ್, ರಾಜವಾಡಾದ ಪೀರ್‌ಗಲ್ಲಿ ಎಂಬಲ್ಲಿ ಬಾಡಿಗೆ ಮನೆ ಹಿಡಿದರು.
ಝಾನ್ಸಿಯ ಗದ್ದುಗೆಯ ಉತ್ತರಾಧಿಕಾರಿಗಳು ಇಂದೋರ್‌ನ ಬಾಡಿಗೆ ಮನೆಯಲ್ಲಿ ದಯನೀಯ ಬದುಕು ಜೀವಿಸುತ್ತಿದ್ದರು. ತಲೆಯ ಮೇಲೆ ಸಾಲದ ಹೊರೆ ಬೇರೆ! ರಾಣಿಯ ಮೊಮ್ಮಗ ಜಿಲ್ಲಾ ಕೋರ್ಟ್ ಮುಂದೆ ಟೈಪ್‌ರೈಟರ್ ಇರಿಸಿ ಜೀವನ ಸಾಗಿಸುತ್ತಿದ್ದ. ಕುಟುಂಬ ತೀರಾ ಬಡತನದಲ್ಲಿತ್ತು. ರಾಣಿಯ ಮರಿಮಗ ಕೃಷ್ಣರಾವ್ ಕೂಡ ಟೈಪಿಸ್ಟ್ ಆಗಿ ಕಡುಬಡತನದಲ್ಲಿ ಜೀವನ ಸಾಗಿಸಿದ್ದರು. ಸರಕಾರದಿಂದ ಬರುವ ಪಿಂಚಣಿ ಆಗ ಬರೇ ನೂರು ರೂಪಾಯಿಗಳಿಗೆ ಇಳಿಯಿತು. ಇವರ ಮಗ ಅರುಣ್ ಕೃಷ್ಣರಾವ್
ಮಧ್ಯಪ್ರದೇಶ ಇಲೆಕ್ಟ್ರಿಸಿಟಿ ಬೋರ್ಡ್‌ನಲ್ಲಿ ಕೆಲಸಕ್ಕಿದ್ದರು. ಅವರು ತಮ್ಮ ಪೂರ್ವಾಪರಗಳ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ . 1994ರಲ್ಲಿ ಅವರು “ಧನ್ವಂತರಿ ನಗರ್’ ಎಂಬಲ್ಲಿ ಮನೆ ಖರೀದಿಸಿದರು.
ಕೋಟೆ, ಕೊತ್ತಲ, ಅರಮನೆಗಳ ಒಡತಿ ಲಕ್ಷ್ಮೀಬಾಯಿಯ ವಂಶಜರು ಸ್ವಂತ ಮನೆಗಾಗಿ ಐದು ತಲೆಮಾರು ಕಾಯಬೇಕಾಯಿತು!
2007ರಲ್ಲಿ ಮೋಹನ್ ನೇಪಾಲಿ ಎಂಬ ಇತಿಹಾಸಕಾರ ಮತ್ತು ಪತ್ರಕರ್ತ ಝಾನ್ಸಿರಾಣಿಯ ವಂಶಜರ ಬಗ್ಗೆ ದಾಖಲೆಗಳ ಜಾಡು ಹಿಡಿದು ಕೊನೆಗೂ ಇಂದೋರ್‌ನಲ್ಲಿ ಅರುಣ್ ಕೃಷ್ಣರನ್ನು ಪತ್ತೆಹಚ್ಚಿದರು. ಬಳಿಕವೇ ಅವರ ಬಗ್ಗೆ ಜನರಿಗೆ ತಿಳಿದದ್ದು . ಝಾನ್ಸಿಯ ಜನರು ಅವರನ್ನು ಒಂದು ಸಮಾರಂಭದಲ್ಲಿ ಸತ್ಕರಿಸಿ ಗೌರವಿಸಿದ್ದರು.
ಈಗ ಅರುಣ್ ಕೃಷ್ಣರಾವ್ ಮಹಾರಾಷ್ಟ್ರದ ನಾಗ್ಪುರದಲ್ಲಿ ನೆಲೆಸಿದ್ದಾರೆ. ಅವರ ಮಗ ಯೋಗೇಶ್ ರಾವ್ ಝಾನ್ಸಿವಾಲೇ ಅಲ್ಲಿ
ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ನಾಗ್ಪುರದ ಜನರಿಗೆ ಅವರ ಮೂಲದ ಅರಿವು ಇದೆ. ಎಲ್ಲರೂ ಅವರನ್ನು “ಝಾನ್ಸಿವಾಲೇ’ ಎಂದು ಕರೆಯುತ್ತಾರೆ.ಅವರು ತಮ್ಮ ಹಿರಿಯರ ಅರಸೊತ್ತಿಗೆಯ ಮೇಲೆ ದಾವೆ ಸಲ್ಲಿಸುವುದಿಲ್ಲ . ಯಾವುದೇ ಸದ್ದುಗದ್ದಲವಿಲ್ಲದೆ, ತಮ್ಮ ಪಾಡಿಗೆ ಬದುಕು ಸಾಗಿಸುತ್ತಿದ್ದಾರೆ. ಯಾವಾಗಲಾದರೊಮ್ಮೆ ತಮ್ಮ ಪೂರ್ವಜರಾದ ಝಾನ್ಸಿಯ ನೆನಪು ಬಂದಾಗ
ಮೌನವಾಗಿ ಕಣ್ಣೀರು ಹಾಕುತ್ತಾರೆ.
ಲೇಖನ: ತುಕಾರಾಮ್ ಶೆಟ್ಟಿ
ಕೃಪೆ-ತರಂಗ ವಾರಪತ್ರಿಕೆ