ಕಾಪು: ತಾಲೂಕು ಆಡಳಿತ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ| ಪ್ರತಿಭಾ ಆರ್. ಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರ್ಯ ಸ್ವೇಚ್ಚಾಚಾರವಲ್ಲ, ಅದು ನಮ್ಮ ಜವಾಬ್ದಾರಿ : ಡಾ| ಪ್ರತಿಭಾ ಆರ್.
ಬಳಿಕ ಸ್ವಾತಂತ್ರ್ಯ ಸಂದೇಶ ನೀಡಿದ ಅವರು, ಲಕ್ಷಾಂತರ ಜನರ ತ್ಯಾಗ, ಬಲಿದಾನ, ಹೋರಾಟಗಳ ಮೂಲಕ ದೊರಕಿದ ಸ್ವಾತಂತ್ರ್ಯವು ಸ್ವೇಚ್ಚಾಚಾರವಾಗಿರದೇ ಅದು ನಮ್ಮ ಜವಾಬ್ದಾರಿ ಆಗಿರಬೇಕು. ಅಂದಿಗೂ ಇಂದಿಗೂ ಬದಲಾಗುತ್ತಿರುವ ದೇಶದಲ್ಲಿ ಆಗುತ್ತಿರುವ ಪ್ರತಿಭಾ ಪಲಾಯನಕ್ಕೆ ತಡೆಸಿಗಬೇಕಿದೆ. ಆ ಮೂಲಕ ವೈಚಾರಿಕ ಮತ್ತು ವೈಜ್ಞಾನಿಕವಾದ ಅಖಂಡ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಪ್ರಯತ್ನಶೀಲರಾಗೋಣ ಎಂದರು.
ವಿಶ್ವಗುರು ಭಾರತದ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳೋಣ : ಗುರ್ಮೆ ಸುರೇಶ್ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹಿರಿಯರು ತ್ಯಾಗ, ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯವನ್ನು ತಡೆದು ನಿಲ್ಲಿಸುವ ಕೆಲಸವಾಗಬೇಕು, ಬಲಿದಾನಗೈದ ಹೋರಾಟಗಾರರ ಸ್ಮರಣೆ, ಸ್ವಾತಂತ್ರ್ಯೋತ್ಸವದ ಸಂಭ್ರಮ ಒಂದು ದಿನಕ್ಕೆ ಸೀಮಿತವಾಗಿರದೇ ಅನವರತವಾಗಿರಬೇಕು. ನಮ್ಮ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಕಂಡು ಬರುತ್ತಿರುವ ದುಸ್ಥಿತಿಗಳ ನಡುವೆಯೂ ನಾವು ಆರ್ಥಿಕ ಪ್ರಗತಿಯಲ್ಲಿ ಪ್ರಪಂಚದಲ್ಲಿ ಐದನೇ ಸ್ಥಾನಿಗಳಾಗಿದ್ದೇವೆ. ಅಭಿವೃದ್ಧಿ, ಪ್ರಗತಿ, ವಿಜ್ಣಾನದ ಸಾಧನೆಯ ಹಾದಿಯಲ್ಲಿ ವಿಶ್ವಗುರುವಾಗಿ ಮೂಡಿಬರುತ್ತಿದ್ದೇವೆ. ಇದು ನಾವೆಲ್ಲರೂ ಹೆಮ್ಮೆ ಪಡುವಂತಹ ವಿಚಾರಗಳಾಗಿವೆ ಎಂದರು.
ಕಾಪು ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ, ಯುವಜನ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಕಾಪು ಪುರಸಭಾ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಶೈಲೇಶ್ ಅಮೀನ್, ನಾಗೇಶ್, ಹರಿಣಾಕ್ಷಿ ದೇವಾಡಿಗ, ಸತೀಶ್‌ಚಂದ್ರ ಮೂಳೂರು, ಮೊಹಮ್ಮದ್ ಆಸೀಫ್, ಸರಿತಾ ಶಿವಾನಂದ, ಶೋಭಾ ಬಂಗೇರ, ರಾಽಕಾ ಸುವರ್ಣ, ಫರ್ಜಾನ, ಅಮೀರ್ ಮೊಹಮ್ಮದ್, ಶಾಂತಲತಾ ಶೆಟ್ಟಿ, ಜೂಲಿಯಟ್ ರೇಷ್ಮಾ ಉಪಸ್ಥಿತರಿದ್ದರು.
ಕಾಪು ಪೊಲೀಸ್ ಉಪನಿರೀಕ್ಷಕ ಅಬ್ದುಲ್ ಖಾದರ್ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ ಹಾಗೂ ಸ್ಕೌಟ್ ಮತ್ತು ಗೈಡ್ಸ್‌ನಿಂದ ಆಕರ್ಷಕ ಪಥಸಂಚಲನ ನಡೆಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿಶೇಷಚೇತನರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಗೋಪಾಲಕೃಷ್ಣ ಗಾಂವ್ಕರ್ ಸ್ವಾಗತಿಸಿದರು. ಕಾಪು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿ ಸಿಲ್ವ ವಂದಿದರು. ಸ.ಪ್ರ.ದ. ಕಾಲೇಜಿನ ಉಪನ್ಯಾಸಕಿ ಡಾ| ಸುಚಿತ್ರಾ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು.